ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 139 ಗ್ರಾಮಗಳಲ್ಲಿ 326 ಎಕರೆಯಷ್ಟು ರಾಜಕಾಲುವೆ ಒತ್ತುವರಿಯಾಗಿರುವುದು ಪತ್ತೆಯಾಗಿದೆ. 356 ವಾಸದ ಮನೆಗಳು, 35 ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಒಟ್ಟು 1,570 ಒತ್ತುವರಿ ಪ್ರದೇಶವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.
ನಗರದಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಪ್ರಮುಖವಾಗಿ ರಾಜಕಾಲುವೆ ಒತ್ತುವರಿಯೇ ಇದಕ್ಕೆ ಕಾರಣ ಎಂಬುದು ಪತ್ತೆಯಾಗಿದೆ. ಕಳೆದ ಎರಡು ಮೂರು ದಿನಗಳ ಹಿಂದೆ ನಗರದ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಒತ್ತುವರಿದಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸುವಂತೆ ಸೂಚಿಸಿದ್ದು ಅಲ್ಲದೆ, ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜಕಾಲುವೆ ಒತ್ತುವರಿ ಪಟ್ಟಿಯನ್ನು ಸಿದ್ಧಪಡಿಸಿರುವ ಬಿಬಿಎಂಪಿ ಅಧಿಕಾರಿಗಳು ಶೀಘ್ರದಲ್ಲೇ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.139 ಗ್ರಾಮಗಳಲ್ಲಿ 326.16 ಎಕರೆಯಷ್ಟು ರಾಜಕಾಲುವೆ ಒತ್ತುವರಿಯಾಗಿದ್ದು, ಒಟ್ಟು 1,570 ಪ್ರದೇಶವನ್ನು ಗುರುತಿಸಲಾಗಿದೆ.
ಇದನ್ನು ಓದಿ: ಮಳೆ ಹಾನಿ ಪ್ರದೇಶಗಳ ಭೇಟಿ ವೇಳೆ ಮಾಹಿತಿ ಕಲೆ ಹಾಕಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇದರಲ್ಲಿ 356 ವಾಸದ ಮನೆಗಳು, 35 ವಾಣಿಜ್ಯ ಸಂಕಿರ್ಣಗಳು, 935 ಕೃಷಿ ಪ್ರದೇಶಗಳು ಹಾಗೂ 244 ರಸ್ತೆಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಪಟ್ಟಿ ಸಿದ್ಧವಾಗಿದೆ.
ಎಲ್ಲೆಲ್ಲಿ ಒತ್ತುವರಿ: ಪೂರ್ವ ವಲಯದ 10 ಗ್ರಾಮಗಳಲ್ಲಿ 38 ಎಕರೆ ಒತ್ತುವರಿಯಾಗಿದ್ದು, 89 ವಾಸದ ಮನೆಗಳು, ಒಂದು ವಾಣಿಜ್ಯ ಕಟ್ಟಡ, 10 ಕೃಷಿ ಜಾಗ ಹಾಗೂ ಐದು ರಸ್ತೆಗಳು ರಾಜಕಾಲುವೆ ಒತ್ತುವರಿ ಮಾಡಿವೆ.
ಪಶ್ಚಿಮ ವಲಯದ ಏಳು ಗ್ರಾಮಗಳಲ್ಲಿ 22 ಎಕರೆ ಒತ್ತುವರಿಯಾಗಿದ್ದು, 36 ವಾಸದ ಮನೆಗಳು ಹಾಗೂ 16 ರಸ್ತೆಗಳನ್ನು ಪತ್ತೆಹಚ್ಚಲಾಗಿದೆ. ದಕ್ಷಿಣ ವಲಯದ ಎರಡು ಗ್ರಾಮಗಳಲ್ಲಿ 1.20 ಎಕರೆ ಒತ್ತುವರಿಯಾಗಿದ್ದು, ನಾಲ್ಕು ವಾಸದ ಮನೆಗಳು, ಎರಡು ರಸ್ತೆಗಳಿವೆ.
ಕೋರಮಂಗಲ ಕಣಿವೆಯ ಮೂರು ಗ್ರಾಮಗಳಲ್ಲಿ 5.20 ಎಕರೆ ಒತ್ತುವರಿಯಾಗಿದ್ದು, 9 ವಾಣಿಜ್ಯ ಕಟ್ಟಡಗಳು, ಒಂದು ಕೃಷಿ ಪ್ರದೇಶವನ್ನು ಗುರುತಿಸಲಾಗಿದೆ.
ಯಲಹಂಕದ 30 ಗ್ರಾಮಗಳಲ್ಲಿ ಬರೋಬ್ಬರಿ 46 ಎಕರೆ ಒತ್ತುವರಿಯಾಗಿದ್ದು, 36 ವಾಸದ ಮನೆಗಳು, 248 ಕೃಷಿ ಪ್ರದೇಶಗಳು ಹಾಗೂ 39 ರಸ್ತೆಗಳನ್ನು ಪತ್ತೆಹಚ್ಚಲಾಗಿದೆ.
ಇದನ್ನು ಓದಿ: ಭಾರೀ ಮಳೆಗೆ ಚಿಕ್ಕಬಳ್ಳಾಪುರ ಜನತೆಗೆ ಭಾರೀ ಸಂಕಷ್ಟ: ಮನೆ ದುರಸ್ತಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ
ಮಹದೇವಪುರದ 53 ಗ್ರಾಮಗಳಲ್ಲಿ 170 ಎಕರೆಗೂ ಹೆಚ್ಚು ಒತ್ತುವರಿಯಾಗಿದ್ದು, 50 ವಾಸದ ಮನೆಗಳು, ಎರಡು ವಾಣಿಜ್ಯ ಸಂಕೀರ್ಣಗಳು, 573 ಕೃಷಿ ಜಾಗಗಳು ಹಾಗೂ 136 ರಸ್ತೆಗಳಿವೆ.
ಬೊಮ್ಮನಹಳ್ಳಿಯ 20 ಗ್ರಾಮಗಳಲ್ಲಿ 18.23 ಎಕರೆ ಒತ್ತುವರಿಯಲ್ಲಿ 87 ವಾಸದ ಮನೆಗಳು, 11 ವಾಣಿಜ್ಯ ಸಂಕೀರ್ಣಗಳು, ಏಳು ಕೃಷಿ ಪ್ರದೇಶಗಳು ಹಾಗೂ 23 ರಸ್ತೆಗಳನ್ನು ನಿರ್ಮಿಸಲಾಗಿದೆ.
ಆರ್‍ಆರ್ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ 15 ವಾಸದ ಮನೆ, ಒಂದು ವಾಣಿಜ್ಯ ಸಂಕೀರ್ಣ, 4 ಕೃಷಿ ಪ್ರದೇಶಗಳನ್ನು ನಿರ್ಮಿಸಲಾಗಿದೆ.
ದಾಸರಹಳ್ಳಿಯ 13 ಗ್ರಾಮಗಳಲ್ಲಿ 23 ಎಕರೆಯನ್ನು ಒತ್ತುವರಿ ಮಾಡಿ 39 ವಾಸದ ಮನೆ, 11 ವಾಣಿಜ್ಯ ಸಂಕೀರ್ಣ, 92 ಕೃಷಿ ಪ್ರದೇಶ ಹಾಗೂ 23 ರಸ್ತೆಗಳನ್ನು ನಿರ್ಮಿಸಲಾಗಿದೆ.
ಒಟ್ಟಾರೆ ನಗರದ 139 ಗ್ರಾಮಗಳಲ್ಲಿ 326.16 ಎಕರೆ ಒತ್ತುವರಿ ಮಾಡಿದ್ದು, ಒಟ್ಟು 1570 ಒತ್ತುವರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇವರೆಲ್ಲರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲು ಬಿಬಿಎಂಪಿ ನಿರ್ಧರಿಸಿದೆ.