ತಿರುವನಂತಪುರ: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಅವರಿಗೆ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಮೆನನ್ ನಿರೀಕ್ಷಣಾ ಜಾಮೀನು ನೀಡಿದ್ದಾರೆ.
ಈ ಹಿಂದೆ ಆಯಿಷಾ ಸುಲ್ತಾನಾ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೆ.ಪಟೇಲ್ ಅವರನ್ನು ‘ಜೈವಿಕ ಅಸ್ತ್ರ’ ಎಂದು ಕರೆದಿದ್ದರು. ಜತೆಗೆ, ‘ಕೇಂದ್ರ ಸರ್ಕಾರ ಪ್ರಫುಲ್ ಪಟೇಲ್ ಅವರನ್ನು ಲಕ್ಷದ್ವೀಪದ ಜನರ ವಿರುದ್ಧ ಜೈವಿಕ ಅಸ್ತ್ರದಂತೆ ಬಳಸುತ್ತಿದೆ’ ಎಂದು ಅವರು ಆರೋಪಿಸಿದ್ದರು.
ಇದನ್ನು ಓದಿ: ದೇಶದ್ರೋಹ ಆರೋಪ: ಜಾಮೀನಿಗಾಗಿ ಕೇರಳ ಹೈಕೋರ್ಟ್ ಮೊರೆಹೋದ ಆಯಿಷಾ ಸುಲ್ತಾನಾ
ಬಿಜೆಪಿ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಅವರು ‘ಆಯಿಷಾ ಸುಲ್ತಾನ ಅವರು ಸುಳ್ಳುಸುದ್ದಿಯನ್ನು ನೀಡುವ ಮೂಲಕ ಕೇಂದ್ರ ಸರ್ಕಾರದ ಗೌರವಕ್ಕೆ ಅವರು ಧಕ್ಕೆ ತರುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಲಕ್ಷದ್ವೀಪದಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಆಯಿಷಾ ಸುಲ್ತಾನಾ ಅವರ ಮೇಲೆ ಐಪಿಸಿಯ ಸೆಕ್ಷನ್ 124 ಎ ಮತ್ತು 153 ಬಿ ಅಡಿಯಲ್ಲಿ ಪೊಲೀಸರು ದೇಶದ್ರೋಹ ಪ್ರಕರಣ ಎಫ್‌ಐಆರ್ ದಾಖಲಿಸಿ 2021 ರ ಜೂನ್ 20 ರಂದು ಕವರಟ್ಟಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.
ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಆಯಿಷಾ ಸುಲ್ತಾನಾ ಅವರು ಕವರಟ್ಟಿ ಪೊಲೀಸ್ ಠಾಣೆಗೆ ಆಯಿಶಾ ಹಾಜರಾದರು.