ಧಾರವಾಡ: ದೇಶದ ಸಂವಿಧಾನ, ಜನರು ಹಾಗೂ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ವಕೀಲರ ಪಾತ್ರ ಬಹಳ ದೊಡ್ಡದು ಎಂದು ನಿವೃತ್ತ ನ್ಯಾಯಾಧೀಶರಾದ ನ್ಯಾ. ಎಸ್.ಎಚ್ ಮಿಠ್ಠಲಕೋಡ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ರವಿವಾರ ನಡೆದ ಎಐಎಲ್.ಯು 9 ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು. ಸಮಾಜದಲ್ಲಿ ಒಳ್ಳೆಯ ವ್ಯವಸ್ಥೆಯನ್ನು ಬಯಸುವುದು ಸಹಜ. ಆದರೆ ಅನ್ಯಾಯದ ವಿರುದ್ಧ ಹೋರಾಡಿ ಸಮಾಜಕ್ಕೆ ಒಳಿತು ಮಾಡುವುದು ಪ್ರಮುಖವಾಗಿದೆ. ಅದನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಈ ರಾಜ್ಯ ಸಮ್ಮೇಳನವು ಕಂಡಿತ ಸ್ಫೂರ್ತಿ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಘಟಕದ ಅಧ್ಯಕ್ಷ ಹರೀಂದ್ರ ಮಾತನಾಡಿ, ದೇಶದಲ್ಲಿ 1975 ರಲ್ಲಿ ಅಂದಿನ ಕೇಂದ್ರ ಸರಕಾರ ತುರ್ತು ಪರಿಸ್ಥಿತಿ ಜಾರಿ ಮಾಡಿದಾಗ ನ್ಯಾಯಾಲಯಗಳು ಈ ವಿಚಾರದಲ್ಲಿ ಮೂಕ ಪ್ರೇಕ್ಷವಾದಾಗ, ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಅಖಿಲ ಭಾರತ ವಕೀಲರ ಒಕ್ಕೂಟ ಜನ್ಮ ತಾಳಿದೆ ಎಂದರು.
ಈ ದಿನ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿ ಜನವಿರೋಧಿ ಕಾನೂಗಳನ್ನು ತಂದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿರುವ ಸರಕಾರಗಳ ನೀತಿಗಳನ್ನು ಖಂಡಿಸಿದ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯಲು ಸಂಘಟನೆಯು ಕಾರ್ಯನಿರ್ವಹಿಸುತ್ತದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಎಐಎಲ್.ಯು ಕರ್ನಾಟಕ ರಾಜ್ಯ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಎಸ್ ಶಂಕರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾದ ವಿಡಿ ಕಾಮರೆಡ್ಡಿ, ಕೆ. ಕೋಟೇಶ್ವರ ರಾವ್, ಪಿ.ಎಚ್ ನೀರಲಕೇರಿ, ವಕೀಲರಾದ ರಾಮಚಂದ್ರ ರೆಡ್ಡಿ, ಎಸ್.ಎಸ್ ಯಡ್ರಾಮಿ, ಪ್ರಕಾಶ ಉಡಿಕೇರಿ, ಬಿ.ಎಸ್ ಸೊಪ್ಪಿನ, ಆರ್.ಕೆ.ದೇಸಾಯಿ,ಮಹೇಶ ಪತ್ತಾರ, ಬಸವರಾಜ ಪೂಜಾರ, ನಾಗರಾಜ ಗೌರಿ, ಸದಾನಂದ ದೊಡಮನಿ, ಎಂ.ಬಿ ಕಟ್ಟಿ, ಪಾರ್ವತಿ ಕಲಾಲ್, ಬಿ.ಐ ಈಳಗೇರ, ಡಿ. ಸ್ಯಾಮ್ಸನ್, ಟಿ.ಎನ್ ಶಿವಾರೆಡ್ಡಿ, ಶಿವಶಂಕರಪ್ಪ, ವೇಗಾನಂದ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಬಸವರಾಜ ಪೂಜಾರ