ಬಹುಪಾಲು ರಾಜ್ಯಗಳಲ್ಲಿ ಸಂಪೂರ್ಣ ಬಂದ್: ಸರಕಾರಕ್ಕೆ ಸ್ಪಷ್ಟ ಸಂದೇಶ
ದೆಹಲಿ : ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.) ಕರೆ ನೀಡಿದ ಭಾರತ ಬಂದ್ ಗೆ ದೇಶಾದ್ಯಂತ ಭವ್ಯ ಬೆಂಬಲ ದೊರೆತಿದೆ. ಪಂಜಾಬ್, ಹರ್ಯಾಣ, ಪಶ್ಚಿಮ ಬಂಗಾಲ, ತ್ರಿಪುರ, ಬಿಹಾರ, ಝಾರ್ಖಂಡ, ಒಡಿಶ, ಅಸ್ಸಾಂ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸುಮಾರಾಗಿ ಸಂಪೂರ್ಣ ಬಂದ್ ಆಗಿದೆ. ಬೇರೆಲ್ಲ ರಾಜ್ಯಗಳಲ್ಲಿ ಜನಗಳಿಂದ ಒಳ್ಳೆಯ ಸ್ಪಂದನ ದೊರೆತಿದೆ. ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳು ಚುನಾವಣೆಗಳಿಂದಾಗಿ ಬಂದ್ ಆಚರಿಸಲಾಗಲಿಲ್ಲ. ಆದರೆ ಕೇಂದ್ರ ಸರಕಾರದ ಕಚೇರಿಗಳ ಮುಂದೆ ಬೃಹತ್ ಮತಪ್ರದರ್ಶನಗಳು ನಡೆದವು, ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿದರು ಎಂದು ಅಖಿಲ ಭಾರತ ಕಿಸಾನ್ ಸಭಾ ಹೇಳಿದೆ.
ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಉತ್ತರಪ್ರದೇಶ, ಗುಜರಾತ ಮತ್ತು ಹರ್ಯಾಣದಲ್ಲಿ ನೂರಾರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸಿಪಿಐ(ಎಂ) ರಾಜ್ಯಸಭಾ ಸದಸ್ಯರೂ ಆಗಿರುವ ಎಐಕೆಎಸ್‌ನ ಜಂಟಿ ಕಾರ್ಯದರ್ಶಿ ಕೆ.ಕೆ.ರಾಗೇಶ್, ಎಐಕೆಎಸ್ ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್, ಎಐಡಿಡಬ್ಲುಯುಎ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ, ಎಐಎಡಬ್ಲ್ಯುಎ ಜಂಟಿ ಕಾರ್ಯದರ್ಶಿ ವಿಕ್ರಂ ಸಿಂಗ್, ಸಿಐಟಿಯು ಹರ್ಯಾಣ ರಾಜ್ಯ ಅಧ್ಯಕ್ಷೆ ಸುರೇಖ, ಮತ್ತು ಕಟ್ಟಡ ಕಾರ್ಮಿಕರ ಒಕ್ಕೂಟ(ಸಿ.ಡಬ್ಲ್ಯು.ಎಫ್.ಐ.) ರಾಜ್ಯ ಅಧ್ಯಕ್ಷ ಸುಖಬೀರ್ ಸಿಂಗ್ ಪ್ರಭಾತ್ ಮತ್ತು ಇನ್ನಿತರ 250 ಮಂದಿಯನ್ನು ಹರ್ಯಾಣದ ಗುರುಗ್ರಾಮ್ ಬಳಿಯ ಬಿಲಾಸ್ ಪುರದಲ್ಲಿ ಬಂಧಿಸಲಾಯಿತು. ಗುಜರಾತದಲ್ಲಿ ರಾಜ್ಯ ಸಿಐಟಿಯು ಅಧ್ಯಕ್ಷ ಅರುಣ್ ಮೆಹ್ತಾ, ಎಐಕೆಎಸ್ ರಾಜ್ಯ ಅಧ್ಯಕ್ಷ ದಯಾಬಾಯ್ ಗಜೆರಾ ಮತ್ತು ಇನ್ನೂ ಹಲವರನ್ನು ಬಂಧಿಸಲಾಗಿದೆ. ಎಐಕೆಎಸ್ ಈ ಬಂಧನಗಳನ್ನು ಖಂಡಿಸುತ್ತ ಅವರನ್ನೆಲ್ಲ ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಎಐಕೆಎಸ್ ಆಗ್ರಹಿಸಿದೆ.
ಭಾರತ ಬಂದ್ ಸರಕಾರ ರೈತರ ಮೇಲೆ ನಡೆಸಿರುವ ದಮನದ ವಿರುದ್ಧ ಮತ್ತು ರೈತ-ವಿರೋಧಿ, ಕಾರ್ಪೊರೇಟ್-ಪರ ಕಾಯ್ದೆಗಳ ಬಗ್ಗೆ ಜನರ ನಡುವೆ ಬಹಳ ದೊಡ್ಡ ಮಟ್ಟದ ಸಿಟ್ಟು ಇದೆ ಎಂಬುದನ್ನು ತೋರಿಸಿದೆ. ಅಲ್ಲದೆ ಜನಗಳಲ್ಲಿ ಜಾತಿ, ಮತ, ಭಾಷೆಗಳನ್ನು ಮೀರಿದ ಐಕ್ಯತೆ ಇದೆ ಎಂಬುದನ್ನೂ ಕೂಡ ತೋರಿಸಿದೆ ಎಂದು ಅಭಿಪ್ರಾಯ ಪಟ್ಟಿರುವ ಎಐಕೆಎಸ್ ಭಾರತ ಬಂದ್‌ನ ಚಾರಿತ್ರಿಕ ಯಶಸ್ಸಿಗೆ ಭಾರತದ ಜನತೆಯನ್ನು ಹಾರ್ದಿಕವಾಗಿ ಅಭಿನಂದಿಸಿದೆ.