ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2025–26ರ ಮುಂಗಾರು ಋತುವಿಗೆ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಪ್ರಧಾನಿ ನರೇಂದ್ರ ಮೋದಿಯವರ ಮತ್ತೊಂದು ದ್ರೋಹವಾಗಿದೆ; ನಿಖರವಾಗಿ ಹೇಳಬೇಕೆಂದರೆ ಸತತ ಹನ್ನೊಂದನೇ ವರ್ಷದಿಂದ ಮಾಡುತ್ತಿರುವ ದ್ರೋಹವಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಬಲವಾಗಿ ಟೀಕಿಸಿದೆ. ಸತತ
2025-26ರ ಖಾರಿಫ್ ಋತುವಿಗೆ ರೂ. 2.07 ಲಕ್ಷ ಕೋಟಿ ಮೌಲ್ಯದ ಎಂಎಸ್‍ಪಿ ಪ್ಯಾಕೇಜ್ ಅನ್ನು ಅನುಮೋದಿಸುವ ಮೂಲಕ ರೈತರಿಗೆ ಒಂದು ಪ್ರಮುಖ ಉತ್ತೇಜನ ನೀಡಿದೆ ಎಂದು ಬಿಜೆಪಿ ಸರ್ಕಾರ ದೊಡ್ಡದಾಗಿ ಹೇಳಿಕೊಂಡಿದೆ. ಸತತ
ಕಾರ್ಪೊರೇಟ್ ಮಾಧ್ಯಮಗಳು ತಕ್ಷಣವೇ ಅದಕ್ಕೆ ತಾಳಹಾಕುತ್ತ ಹೊಸ ಎಂಎಸ್‍ಪಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಶೇ.ದಷ್ಟು ಲಾಭವನ್ನು ಖಚಿತಪಡಿಸುತ್ತದೆ ಎಂದು ಗಿಣಿಪಾಟ ಒಪ್ಪಿಸುತ್ತಿವೆ. ಆದರೆ ವಾಸ್ತವದಲ್ಲಿ ಇದು ಸತ್ಯದಿಂದ ಬಹಳ ದೂರದಲ್ಲಿದೆ. ಬಿಜೆಪಿ ಸರ್ಕಾರವು ಸಾರ್ವಜನಿಕರನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲು ಸಂಖ್ಯೆಗಳ ಕಸರತ್ತಿನಲ್ಲಿ ಮತ್ತು ದತ್ತಾಂಶಗಳನ್ನು ವಿರೂಪಗೊಳಿಸುವಲ್ಲಿ ತೊಡಗಿದೆ ಎಂದು ಎಐಕೆಎಸ್ ಹೇಳಿದೆ. ಸತತ
ಇದನ್ನೂ ಓದಿ: ಐಪಿಎಲ್ 2025: ಫೈನಲ್ಸ್ ತಲುಪಿದ ಆರ್‌ಸಿಬಿ ತಂಡ
ಡಾ. ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತ ಆಯೋಗವು 2006 ರ ತನ್ನ ವರದಿಯಲ್ಲಿ ರೈತರನ್ನು ಕೃಷಿ ಬಿಕ್ಕಟ್ಟಿನಿಂದ ರಕ್ಷಿಸಲು, ಅವರಿಗೆ ಸಮಗ್ರ ಕೃಷಿ ವೆಚ್ಚ C2 ಗಿಂತ ಕನಿಷ್ಠ 50% ಹೆಚ್ಚಿನ ಫಲದಾಯಕ ಬೆಲೆಯನ್ನು ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಆದಾಗ್ಯೂ, 19 ವರ್ಷಗಳ ನಂತರವೂ ಅವು ಪೊಳ್ಳು ಭರವಸೆಗಳಾಗಿ ಉಳಿದಿವೆ. ಖಚಿತವಾದ ಖರೀದಿ ಇಲ್ಲದ ಕಾರಣ ಘೋಷಿಸಲಾದ ಎಂಎಸ್‍ಪಿ ಕೂಡ ಹೆಚ್ಚಾಗಿ ಕಾಗದದ ಮೇಲೆಯೇ ಉಳಿದಿದೆ. ಸತತ
ಘೋಷಿಸಲಾದ ಎಂಎಸ್‍ಪಿ ಮತ್ತು ರೈತರು ನಿಜವಾಗಿ ಪಡೆಯುವ ಬೆಲೆಯ ನಡುವೆ ಗಣನೀಯ ಅಂತರವಿದೆ. ಸಾಗುವಳಿ ಸಮೀಕ್ಷೆಗಳ ವೆಚ್ಚವು ಭತ್ತದ ರೈತರು ಪಡೆದ ಸರಾಸರಿ ಬೆಲೆ 2021-22 ರಲ್ಲಿ A2+FL ಸೂತ್ರದ ಎಂಎಸ್‍ಪಿ ಗಿಂತಲೂ 36% ಕಡಿಮೆಯಾಗಿದೆ ಎಂದು ತೋರಿಸುತ್ತದೆ (ಇತ್ತೀಚಿನ ಲಭ್ಯ ದತ್ತಾಂಶ ಪ್ರಕಾರ). ತೆಲಂಗಾಣದಲ್ಲಿ ತೊಗರಿ ರೈತರು ಪಡೆದ ಸರಾಸರಿ ಬೆಲೆ 2021-22 ರಲ್ಲಿ ಎಂಎಸ್‍ಪಿ ಗಿಂತ 11% ಕಡಿಮೆಯಾಗಿದೆ. ಸತತ
ಇದರರ್ಥ ಎಂಎಸ್‍ಪಿ ಯ ಪ್ರಯೋಜನವು ಹೆಚ್ಚಿನ ರೈತರಿಗೆ ತಲುಪುತ್ತಿಲ್ಲ. ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಎಂಎಸ್‍ಪಿ ಯ ದೀರ್ಘಾವಧಿ ದತ್ತಾಂಶವು ಬಹುತೇಕ ಎಲ್ಲಾ ಬೆಳೆಗಳಿಗೆ, ವಿಶೇಷವಾಗಿ ಭತ್ತಕ್ಕೆ ನಿಜಬೆಲೆಯಲ್ಲಿ ಎಂಎಸ್‍ಪಿ ಬೆಳವಣಿಗೆಯಲ್ಲಿ ಇಳಿಕೆಯಾಗುತ್ತಿರುವುದನ್ನು ತೋರಿಸುತ್ತದೆ. ಸತತ
ಉದಾಹರಣೆಗೆ, ಭತ್ತದ ನಿಜಬೆಲೆಗಳಲ್ಲಿ ಎಂಎಸ್‍ಪಿ 2004–05 ಮತ್ತು 2013–14ರ ನಡುವೆ ವಾರ್ಷಿಕ 1.17% ದರದಲ್ಲಿ ಬೆಳೆದಿದ್ದರೆ, 2014–15 ರಿಂದ 2025–26ರ ಅವಧಿಯಲ್ಲಿ ಈ ದರ ವಾರ್ಷಿಕ 0.53% ಕ್ಕೆ ಇಳಿದಿದೆ. ಅಧ್ಯಯನ ಮಾಡಿದ 16 ಬೆಳೆಗಳಲ್ಲಿ, 9 ಬೆಳೆಗಳು 2014–15 ರಿಂದ 2025–26ರ ನಡುವೆ ನಿಜ ಎಂಎಸ್‍ಪಿ ಬೆಳವಣಿಗೆಯಲ್ಲಿ ತೀವ್ರ ಕುಸಿತವನ್ನು ತೋರಿಸಿವೆ. ಭತ್ತ, ಮೆಕ್ಕೆಜೋಳ, ತೊಗರಿ, ಉದ್ದು ಮತ್ತು ನೆಲಗಡಲೆ ಮುಂತಾದ ಬೆಳೆಗಳಿಗೆ, ಕಳೆದ ದಶಕದಲ್ಲಿ ನಿಜ ಬೆಳವಣಿಗೆಯ ದರವು ವಾರ್ಷಿಕ 1% ಕ್ಕಿಂತ ಕಡಿಮೆಯಿತ್ತು ಎಂದು ಎಐಕೆಎಸ್ ಹೇಳಿದೆ. ಸತತ
ಸರ್ಕಾರದ ಪತ್ರಿಕಾ ಪ್ರಕಟಣೆಯು ಅತ್ಯಂತ ಪ್ರಮುಖವಾದ ಮುಂಗಾರು ಬೆಳೆಯಾದ ಭತ್ತದ ಬಗ್ಗೆ ಬಹುತೇಕ ಮೌನವಾಗಿದೆ, ಏಕೆಂದರೆ ಅದರ ಎಂಎಸ್‍ಪಿ ಯನ್ನು ಕ್ವಿಂಟಲ್‌ಗೆ ಕೇವಲ ₹69 ರಷ್ಟು ಹೆಚ್ಚಿಸಲಾಗಿದೆ. ಸರಕಾರಕ್ಕೆ ಇದು ಒಂದು ಮುಜುಗರ ಉಂಟುಮಾಡುವ ಸತ್ಯ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಅಂದಾಜು ಮಾಡಿದ ರಾಷ್ಟ್ರೀಯ ಸರಾಸರಿ ವೆಚ್ಚದ ಪ್ರಕಾರ, ಭತ್ತದ C2+50% ಬೆಲೆ ಕ್ವಿಂಟಲ್‌ಗೆ ₹3,135 ಕ್ಕೆ ಬರುತ್ತದೆ, ಆದರೆ ಘೋಷಿತ ಎಂಎಸ್‍ಪಿ ಕೇವಲ ₹2,369, ಅಂದರೆ ಪ್ರತಿ ಕ್ವಿಂಟಲ್‌ಗೆ ₹766 ನಷ್ಟವಾಗಿದೆ. ರಾಜ್ಯಗಳು ಭತ್ತಕ್ಕೆ ಅಂದಾಜು ಮಾಡಿದ ವೆಚ್ಚವನ್ನು ನೋಡಿದರೆ, ಅದು ಪಂಜಾಬ್‌ನಲ್ಲಿ ₹2787, ತೆಲಂಗಾಣದಲ್ಲಿ ₹3673 ಮತ್ತು ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಲ್‌ಗೆ ರೂ.4159 ಆಗಿದೆ. ಸತತ
ಈ ರಾಜ್ಯಗಳು ಕ್ರಮವಾಗಿ ಕ್ವಿಂಟಲ್‌ಗೆ ₹4,281, ₹5,510 ಮತ್ತು ₹4,783 ಎಂಎಸ್‍ಪಿ ಗಳನ್ನು ಶಿಫಾರಸು ಮಾಡಿದ್ದವು. ಇದು, ಅನೇಕ ರಾಜ್ಯಗಳಲ್ಲಿ, ಸರ್ಕಾರಿ ಅಂಕಿಅಂಶಗಳ ಪ್ರಕಾರ ಕೂಡ, ರೈತರು ಭತ್ತದ ಬೆಳೆ ಮಾರಾಟದಿಂದ ತಮ್ಮ ಉತ್ಪಾದನಾ ವೆಚ್ಚವನ್ನು ಮರುಪಡೆಯಲು ಹೆಣಗಬೇಕಾಗಿದೆ.
ಸಿಎಸಿಪಿ ಪ್ರಕಾರ, 2023-24ರಲ್ಲಿ ಭಾರತದಾದ್ಯಂತ ಕೇವಲ ಶೇ. 17.3 ರಷ್ಟು ಭತ್ತ ಬೆಳೆಯುವ ರೈತರು ಮಾತ್ರ MSP ಎಂಎಸ್‍ಪಿ ದರದಲ್ಲಿ ಖರೀದಿಯಿಂದ ಪ್ರಯೋಜನ ಪಡೆದಿದ್ದಾರೆ. ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ (5.8%), ಬಿಹಾರ (4.1%), ಅಸ್ಸಾಂ (5% ಕ್ಕಿಂತ ಕಡಿಮೆ) ಮತ್ತು ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಎಂಎಸ್‍ಪಿ ಬೆಲೆಗಳಲ್ಲಿ ಭತ್ತದ ಖರೀದಿ ಬಹಳ ಕಡಿಮೆ, ಜೆಎಂಎಂ ಆಡಳಿತದ ಜಾರ್ಖಂಡ್ ನಲ್ಲಿ ಶೇ. 5 ಕ್ಕಿಂತ ಕಡಿಮೆ.
ಹೆಚ್ಚಿನ ರಾಜ್ಯಗಳು ಕೃಷಿ ವೆಚ್ಚಗಳು ಸಿಎಸಿಪಿ ವೆಚ್ಚದ ಅಂದಾಜುಗಳಿಗಿಂತ ಹೆಚ್ಚಿವೆ ಎಂದು ಉಲ್ಲೇಖಿಸಿವೆ. 2023–24 ಕೃಷಿ ವರ್ಷಕ್ಕೆ “ಕೃಷಿ ಅಂಕಿಅಂಶಗಳ ಒಂದು ನೋಟ” ( Agricultural Statistics at a Glance)ದಲ್ಲಿ ದಿಂದ ಪಡೆದ ದತ್ತಾಂಶಗಳನ್ನು ನೋಡಿದರೆ, ಖರೀದಿ ಮಟ್ಟಗಳು ಮತ್ತು ಎಂಎಸ್‍ಪಿ ಹೆಚ್ಚಳದ ನಡುವೆ ಹೊಂದಾಣಿಕೆಯ ಕೊರತೆಯಿದೆ ಎಂಬುದು ಸ್ಪಷ್ಟವಾಗಿದೆ. ತೊಗರಿ ಉತ್ಪಾದನೆಯ ಶೇ. 0.23, ನೆಲಗಡಲೆ ಉತ್ಪಾದನೆಯ ಶೇ. 0.72 ಮತ್ತು ಹತ್ತಿ ಉತ್ಪಾದನೆಯ ಶೇ. 9.3 ರಷ್ಟನ್ನು ಮಾತ್ರ ಖರೀದಿಸಲಾಗಿದೆ.
ನೈಜರ್ ಬೀಜಕ್ಕೆ ₹820, ರಾಗಿಗೆ ₹596, ಹತ್ತಿಗೆ ₹589 ಮತ್ತು ಎಳ್ಳು ₹579 ಪ್ರತಿ ಕ್ವಿಂಟಲ್ ಗೆ ಎಂಎಸ್‍ಪಿ ಹೆಚ್ಚಿಸಲಾಗಿದೆ ಎಂಬುದು ಸರ್ಕಾರದ ಉತ್ಪ್ರೇಕ್ಷಿತ ಹೇಳಿಕೆ ಎಂದು ಎಐಕೆಎಸ್ ಹೇಳಿದೆ. ಈ ಹೆಚ್ಚಿದ ಬೆಲೆಗಳು ಸಹ C2+50% ಮಾನದಂಡಕ್ಕಿಂತ ತೀರಾ ಕಡಿಮೆಯಾಗಿದ್ದು, ರೈತರು ಭಾರೀ ನಷ್ಟವನ್ನು ಭರಿಸಬೇಕಾಗುತ್ತದೆ.
ಮೋದಿ ಸರಕಾರದ ಈ ಭಾರೀ ಉತ್ತೇಜನೆ ಎಂದು ಹೇಳಿಕೊಳ್ಳುವ ಎಂಎಸ್‍ಪಿ ಗಳು ವಾಸ್ತವವಾಗಿ ರೈತರಿಗೆ ಆಗಿರುವ ನಷ್ಟದ ಬಗ್ಗೆ ಇನ್ನೂ ಕೆಲವು ಅಂಕಿ-ಅಂಶಗಳನ್ನು ಎಐಕೆಎಸ್ ನೀಡಿದೆ:
1.ನೈಜರ್ (ಕರಿಎಳ್ಳು)ಬೀಜಕ್ಕೆ ಎಂಎಸ್‍ಪಿ ಕ್ವಿಂಟಲ್ ಗೆ ₹9,537 ಎಂದು ನಿಗದಿಪಡಿಸಲಾಗಿದೆ, ಆದರೆ C2+50% ಬೆಲೆ ₹12,037 ಆಗಿರಬೇಕು – ಅಂದರೆ ರೈತನಿಗೆ ₹2,500 ನಷ್ಟವಾಗುತ್ತದೆ.
2. ರಾಗಿಯ ವಿಷಯದಲ್ಲಿ,ಸರ್ಕಾರವು ಪ್ರತಿ ಕ್ವಿಂಟಲ್ ಗೆ ₹4,886 ಎಂದು ನಿಗದಿಪಡಿಸಿದೆ, ಆದರೆ ಸಿಎಸಿಪಿ ಯ ಮುನ್ಸೂಚನೆಗಳ ಪ್ರಕಾರ C2+50% ಬೆಲೆ ₹5,964 ಆಗಿರಬೇಕು – ಅಂದರೆ ರೈತನಿಗೆ C2+50% ಬೆಲೆಗಿಂತ ₹1,078 ಕಡಿಮೆ ಸಿಗುತ್ತದೆ.
3. ಹತ್ತಿಯ ಅಂಕಿಅಂಶಗಳನ್ನು ನೋಡಿದರೆ, C2+50% ಬೆಲೆ ಕ್ವಿಂಟಲ್‌ಗೆ ₹10,075 ಆಗಿದ್ದು, ಸರ್ಕಾರ ಕೇವಲ ₹7,710 ಎಂಎಸ್‍ಪಿ ಘೋಷಿಸಿದೆ – ಇದರಿಂದಾಗಿ ರೈತರು ಪ್ರತಿ ಕ್ವಿಂಟಲ್‌ಗೆ ₹2,365 ನಷ್ಟಕ್ಕೆ ಬೆಳೆ ಮಾರಾಟ ಮಾಡಬೇಕಾಯಿತು. ತೆಲಂಗಾಣ ಸರ್ಕಾರ 2024-25ರಲ್ಲಿ ಕ್ವಿಂಟಲ್‌ಗೆ ₹16,000 ಬೇಡಿಕೆ ಇಟ್ಟಿತ್ತು ಎಂಬುದು ಗಮನಾರ್ಹ.
4. ಎಳ್ಳಿನಲ್ಲಿ, C2+50% ಬೆಲೆ ₹12,948 ಆಗಿರಬೇಕು, ಆದರೆ ಸರ್ಕಾರ ₹9,537 ಎಂಎಸ್‍ಪಿ ಘೋಷಿಸಿದೆ – ಇದರ ಪರಿಣಾಮವಾಗಿ ರೈತನಿಗೆ ಕ್ವಿಂಟಲ್‌ಗೆ ₹3,102 ನಷ್ಟವಾಗಿದೆ.
5. ಜೋಳ ದಲ್ಲಿ,ಸರ್ಕಾರ ಘೋಷಿಸಿದ ಎಂಎಸ್‍ಪಿ ಕ್ವಿಂಟಲ್‌ಗೆ ₹3,699, ಆದರೆ ಸಿಎಸಿಪಿ ಪ್ರಕಾರ C2+50% ವೆಚ್ಚ ₹4,809 – ಅಂದರೆ ರೈತನಿಗೆ ಕ್ವಿಂಟಲ್‌ಗೆ ₹1,110 ಕಡಿಮೆ ಸಿಗುತ್ತದೆ. ಇಷ್ಟೇ ಅಲ್ಲ, ಕರ್ನಾಟಕಕ್ಕೆ ಸಿಎಸಿಪಿ -ಯೋಜಿತ ವೆಚ್ಚ ₹3,802, ಮತ್ತು ರಾಜ್ಯದ ಯೋಜಿತ ವೆಚ್ಚ ಕ್ವಿಂಟಾಲ್‌ಗೆ ₹5,232, ಆದರೆ ಮಹಾರಾಷ್ಟ್ರದ ಯೋಜಿತ ವೆಚ್ಚ ₹4,163 – ಅಂದರೆ ಈ ರಾಜ್ಯಗಳಲ್ಲಿ, ಬೆಳೆ ಮಾರಾಟದಿಂದ ಬರುವ ಆದಾಯವು ಕೃಷಿ ವೆಚ್ಚವನ್ನು ಸಹ ಭರಿಸುವುದಿಲ್ಲ.
6.ಬಜ್ರಾ (ಮುತ್ತು ರಾಗಿ) ಮತ್ತು ಜೋಳದ ವಿಷಯದಲ್ಲೂ ಇದೇ ಪರಿಸ್ಥಿತಿ ಇದೆ. ಬಜ್ರಾಗೆ ಎಂಎಸ್‍ಪಿ ಅನ್ನು ಕ್ವಿಂಟಾಲ್‌ಗೆ ₹2,775 ಮತ್ತು ಮೆಕ್ಕೆಜೋಳಕ್ಕೆ ₹2,400 ಎಂದು ನಿಗದಿಪಡಿಸಲಾಗಿದೆ, ಆದರೆ ಸಿಎಸಿಪಿ ಯ ಪ್ರಕ್ಷೇಪಗಳ ಆಧಾರದ ಮೇಲೆ C2+50% ವೆಚ್ಚವು ಕ್ರಮವಾಗಿ ₹3,313 ಮತ್ತು ₹2,928 ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿಯೂ ಸಹ, ರಾಜ್ಯ ಸರ್ಕಾರವು ಮೆಕ್ಕೆಜೋಳದ ಉತ್ಪಾದನಾ ವೆಚ್ಚವನ್ನು ₹2,991 ಎಂದು ಅಂದಾಜಿಸಿದೆ ಮತ್ತು ₹4,550 ಎಂಎಸ್‍ಪಿ ಯನ್ನು ಸೂಚಿಸಿದೆ. ಇದರರ್ಥ ಗುಜರಾತಿನ ರೈತ ಕೇಂದ್ರದ ಎಂಎಸ್‍ಪಿ ನಲ್ಲಿ ಮೆಕ್ಕೆಜೋಳವನ್ನು ಮಾರಾಟ ಮಾಡಿದರೆ, ಅವನಿಗೆ ಅವನ ಉತ್ಪಾದನಾ ವೆಚ್ಚಕ್ಕಿಂತ ₹591 ಕಡಿಮೆ ಸಿಗುತ್ತದೆ.
ರೈತರಿಗೆ ಆಗಿರುವ ಮೇಲಿನ ನಷ್ಟಗಳು ಸಹ ಸರ್ಕಾರ-ಯೋಜಿತ ವೆಚ್ಚಗಳನ್ನು ಆಧರಿಸಿವೆ ಎಂಬ ಸಂಗತಿಯತ್ತವೂ ಎಐಕೆಎಸ್ ಗಮನ ಸೆಳೆದಿದೆ. ಎಲ್ಲರಿಗೂ ತಿಳಿದಿರುವ ಸಂಗತಿಯೆಂದರೆ, ನಿಜವಾದ ಉತ್ಪಾದನಾ ವೆಚ್ಚವು ಸಿಎಸಿಪಿ ಅಂದಾಜು ಮಾಡಿದ ವೆಚ್ಚಕ್ಕಿಂತ ಹೆಚ್ಚಾಗಿದೆ. ನಿರಂತರವಾಗಿ ಹೆಚ್ಚುತ್ತಿರುವ ಲಾಗುವಾಡು ವೆಚ್ಚಗಳು ರೈತರ ವೆಚ್ಚವನ್ನು ಹೆಚ್ಚಿಸುತ್ತಿವೆ, ಆದರೆ ಅವರಿಗೆ ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ದೇಶದಲ್ಲಿ ಚಾಲ್ತಿಯಲ್ಲಿರುವ ಕೃಷಿ ಬಿಕ್ಕಟ್ಟು ಮತ್ತು ನಡೆಯುತ್ತಿರುವ ರೈತರ ಆತ್ಮಹತ್ಯೆಗಳಿಗೆ ಇದೇ ಕಾರಣ ಎಂದು ಅದು ಹೇಳಿದೆ.
ಒಕ್ಕೂಟ ಸರಕಾರ ದತ್ತಾಂಶಗಳ ಕಸರತ್ತು ನಡೆಸುವುದನ್ನು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವುದನ್ನು ಬಿಡಬೇಕು ಎಂದು ಎಚ್ಚರಿಸಿರುವ ಅಖಿಲ ಭಾರತ ಕಿಸಾನ್ ಸಭಾ, ಇಂತಹ ಠಕ್ಕುತನದ ದಾವೆಗಳನ್ನು ಬಯಲಿಗೆಳೆಯಬೇಕು ಎಂದು ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ ಮತ್ತು ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಾಗಿ ಒಂದು ಉಗ್ರ ಚಳುವಳಿಯನ್ನು ಪ್ರಾರಂಭಿಸಲು ರೈತ ಸಂಘಟನೆಗಳೊಂದಿಗೆ ಒಗ್ಗೂಡಿ ಕೆಲಸ ಮಾಡುವುದಾಗಿ ಅದು ಹೇಳಿದೆ.
ಇದನ್ನೂ ನೋಡಿ: ಬಾನು ಮುಷ್ತಾಕ್ಗೆ ಬೂಕರ್ ಪ್ರಶಸ್ತಿ | ಮೂಲಭೂತವಾದಿಗಳಿಗೆ ಕಪಾಳಮೋಕ್ಷ – ಕೆ.ವಿ.ಪ್ರಭಾಕರ್ Janashakthi Media
