ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಅತ್ಯಲ್ಪ ಹೆಚ್ಚಳವನ್ನು ಪ್ರಕಟಿಸುವ ಮೂಲಕ ಮೋದಿ ಸರಕಾರ ಮತ್ತೊಮ್ಮೆ ರೈತರನ್ನು ವಂಚಿಸಿದೆ. ಮುಂಗಾರು 2022-23ಕ್ಕೆ ಘೋಷಿಸಲಾದ ಎಂಎಸ್‌ಪಿಯಲ್ಲಿ ಅಕ್ಕಿ, ಮೆಕ್ಕೆಜೋಳ, ಹುರುಳಿ, ಉದ್ದಿನಬೇಳೆ ಮತ್ತು ಕಡಲೆಕಾಯಿಗೆ ಎಂಎಸ್‌ಪಿ ಕೇವಲ 7%ದಷ್ಟು ಮತ್ತು ಸೆಜ್ಜೆಗೆ ಕೇವಲ 8% ಹೆಚ್ಚಿಸಲಾಗಿದೆ. ಹೆಚ್ಚಿನ ಬೆಳೆಗಳಲ್ಲಿ, ಈ ಹೆಚ್ಚಳವು ಕೇವಲ ಸಾಮಾನ್ಯ ಹಣದುಬ್ಬರವನ್ನು ಸರಿದೂಗಿಸುತ್ತದಷ್ಟೇ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಖಂಡಿಸಿದೆ.
ರೈತರಿಗೆ ಉತ್ಪಾದನಾ ವೆಚ್ಚವು ಇಂಧನ ಮತ್ತು ಇತರ ಲಾಗುವಾಡುಗಳ ಏರಿದ ಬೆಲೆಗಳು ಮತ್ತು ರಸಗೊಬ್ಬರಗಳ ಪೂರೈಕೆಯಲ್ಲಿ ಭಾರಿ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ತೀವ್ರವಾಗಿ ಹೆಚ್ಚಾಗಿರುವಾಗ ಎಂಎಸ್‌ಪಿ ಯಲ್ಲಿ ಈ ಅಲ್ಪ ಹೆಚ್ಚಳವನ್ನು ಮಾಡಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಕಳೆದ ಹಂಗಾಮಿನಲ್ಲೂ ಪೂರೈಕೆ ಕೊರತೆಯಿಂದ ರಸಗೊಬ್ಬರಗಳ ಕಾಳಸಂತೆ ಜೋರಾಗಿತ್ತು. ಬೆಲಾರುಸ್ ಮತ್ತು ರಷ್ಯಾ ವಿರುದ್ಧ ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಯುರೋಪಿಯನ್ ಒಕ್ಕೂಟದ ನಿರ್ಬಂಧಗಳಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಆಹಾರ ಪದಾರ್ಥಗಳ ಜಾಗತಿಕ ಬೆಲೆಗಳು ತುಂಬಾ ಹೆಚ್ಚಿರುವ ಅವಧಿಯಲ್ಲಿ ಹೀಗೆ ಮಾಡಲಾಗಿದೆ ಎಂಬುದು ಕೂಡ ಗಮನಾರ್ಹ. ಇದರರ್ಥ, ಭಾರತವು ಆಮದು ಅವಲಂಬಿತವಾಗಿರುವ ಖಾದ್ಯ ತೈಲಗಳು ಮತ್ತು ಬೇಳೆಕಾಳುಗಳಂತಹ ಸರಕುಗಳಿಗೆ, ತೈಲಬೀಜಗಳು ಮತ್ತು ಬೇಳೆಕಾಳುಗಳನ್ನು ಬೆಳೆಯುವ ಅಭಿವೃದ್ಧಿ ಹೊಂದಿದ ದೇಶಗಳ ರೈತರಿಗೆ ಆಮದು ಮೂಲಕ ನಮ್ಮದೇ ರೈತರಿಗೆ ಪಾವತಿಸಲು ಉದ್ದೇಶಿಸಿರುವ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ನೀಡಲಾಗುತ್ತದೆ. ಭಾರತದ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ನಮ್ಮದೇ ರೈತರಿಗೆ ಫಲದಾಯಕ ಬೆಲೆಗಳನ್ನು ನೀಡುವ ಬದಲು, ಸರ್ಕಾರವು ಅವರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಎಐಕೆಎಸ್ ಆಪಾದಿಸಿದೆ.
ಮತ್ತೊಮ್ಮೆ, ಎಂಎಸ್‌ಪಿ ಮೂಲಕ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಆದಾಯವನ್ನು ಕೊಡುವ ಆಶ್ವಾಸನೆಯನ್ನು ಈಡೇರಿಸಲಾಗಿದೆ ಎಂದು ಸರ್ಕಾರವು ತಪ್ಪುದಾರಿಗೆಳೆಯುವ ದಾವೆ ಮಾಡಿದೆ. 2022-23 ಮುಂಗಾರಿಗೆ ಉತ್ಪಾದನಾ ವೆಚ್ಚದ ಸರ್ಕಾರದ ಅಂದಾಜು ವಾಸ್ತವ ಮಟ್ಟಕ್ಕಿಂತ ಕೆಳಗಿದೆ. ಮತ್ತು, ಇತ್ತೀಚಿನ ವರ್ಷಗಳಲ್ಲಿ ಅದು ಮಾಡುತ್ತಿರುವಂತೆ, ಒಟ್ಟು ವೆಚ್ಚದ (ಸಿ2) ಆದಾಯವನ್ನು ಲೆಕ್ಕ ಹಾಕುವ ಬದಲು, A2+FL ಎ2+ಎಫ್‍ಎಲ್ ವೆಚ್ಚದ ಮೇಲೆ ಆದಾಯವನ್ನು ಲೆಕ್ಕಹಾಕಲಾಗುತ್ತದೆ, ಇದು ರೈತರ ಸ್ವಂತ ಸಂಪನ್ಮೂಲಗಳ ವೆಚ್ಚವನ್ನು ಪರಿಗಣನೆಗೆ ತಗೊಳ್ಳುವುದಿಲ್ಲ. ಇದರ ಪ್ರಕಾರ ಎಂಎಸ್‌ಪಿಯು ಉತ್ಪಾದನಾ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಿಲ್ಲವಾದ್ದರಿಂದ ಇದು ರೈತರಿಗೆ ಮಾಡುತ್ತಿರುವ ವಂಚನೆಯಾಗಿದೆ.
ಸರ್ಕಾರ ಸಿ2+50% ರ ಸ್ವಾಮಿನಾಥನ್ ಆಯೋಗದ ಸೂತ್ರವನ್ನು ಶ್ರದ್ಧೆಯಿಂದ ಜಾರಿಗೆ ತರಬೇಕು, ಉತ್ಪಾದನೆಯ ಒಟ್ಟು ವೆಚ್ಚದ ನೈಜ ಅಂದಾಜನ್ನು ತಯಾರಿಸಬೇಕು ಮತ್ತು ರೈತರಿಗೆ ಅದರ ಮೇಲೆ 50% ಪ್ರತಿಫಲವನ್ನು ನೀಡುವುದನ್ನು ಖಚಿತಪಡಿಸಬೇಕು. ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ರಾಗಿಗೆ ಸಾರ್ವಜನಿಕ ಸಂಗ್ರಹಣೆಯ ವ್ಯವಸ್ಥೆಗಳನ್ನು ಜಾರಿಗೆ ತರುವುದನ್ನು ಸರ್ಕಾರವು ಖಚಿತಪಡಿಸಬೇಕು, ಇದರಿಂದಾಗಿ ರೈತರು ಈ ಬೆಳೆಗಳನ್ನು ಹೆಚ್ಚು ಬೆಳೆಯಲು ಪ್ರೋತ್ಸಾಹಿಸಬಹುದು ಮತ್ತು ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳಿಗೆ ಭಾರತದ ಆಮದು ಅವಲಂಬನೆಯನ್ನು ಕಡಿಮೆ ಮಾಡಬಹುದು. ಖಾದ್ಯ ತೈಲ ಮತ್ತು ಬೇಳೆಕಾಳುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸೇರಿಸಬೇಕು, ಇದು ಈ ನೀರು ಉಳಿಸುವ ಬೆಳೆಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸುತ್ತದೆ, ಆಹಾರ ಹಣದುಬ್ಬರವನ್ನು ತಗ್ಗಿಸಲು ಮತ್ತು ದೇಶದಲ್ಲಿ ಆಹಾರ ಭದ್ರತೆಯನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, ಎಲ್ಲರಿಗೂ ತಿಳಿದಿರುವಂತೆ, ದೇಶದ ಹೆಚ್ಚಿನ ಭಾಗಗಳಲ್ಲಿ ಸರ್ಕಾರಿ ಸಂಗ್ರಹಣೆ ಇಲ್ಲದಿರುವುದರಿಂದ, ಭಾರತದಲ್ಲಿನ ಒಂದು ಸಣ್ಣ ಭಾಗದ ರೈತರು ಮಾತ್ರ ಕೇಂದ್ರ ಸರ್ಕಾರವು ಘೋಷಿಸಿರುವ ಈ ಅಲ್ಪ ಪ್ರಮಾಣದ ಎಂಎಸ್‍ಪಿಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದನ್ನೂ ನೆನಪಿಸಿರುವ ಎಐಕೆಎಸ್ , ರೈತರಿಗೆ ಮೋದಿ ಸರ್ಕಾರವು ಮಾಡುತ್ತಿರುವ ಈ ಎಂಎಸ್‍ಪಿ ವಂಚನೆಯ ವಿರುದ್ಧ ಪ್ರತಿಭಟಿಸಬೇಕು ಮತ್ತು ತಮ್ಮ ಬೆಳೆಗಳಿಗೆ ಫಲದಾಯಕ ಎಂಎಸ್‍ಪಿ ಯನ್ನು ಪಡೆಯುವ ಒಂದು ಶಾಸನಬದ್ಧ ಹಕ್ಕನ್ನು ಒತ್ತಾಯಿಸಲು ಮತ್ತೊಮ್ಮೆ ಒಗ್ಗಟ್ಟಿನಿಂದ ಅಣಿನೆರೆಯಬೇಕು ಎಂದು ಕರೆ ನೀಡಿದೆ.