ನವೆಂಬರ್ 15ರಿಂದ ನಲ್ಗೊಂಡಾದಲ್ಲಿ ಎಐಕೆಎಸ್ 36ನೇ ಅಖಿಲ ಭಾರತ ಸಮ್ಮೇಳನ

ಕರ್ನಾಟಕದಿಂದ 28 ರೈತ ಮುಖಂಡರ ಭಾಗಿ; ಒಂದು ಲಕ್ಷ ರೈತರ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ
ಬೆಂಗಳೂರು: ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್)ದ 36ನೇ ಅಖಿಲ ಭಾರತ ಸಮ್ಮೇಳನವು ನವೆಂಬರ್ 15ರಿಂದ 18ರವರೆಗೆ ತೆಲಂಗಾಣದ ನಲ್ಗೊಂಡಾದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಕರ್ನಾಟಕದಿಂದ 28 ರೈತ ಮುಖಂಡರು ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ರಾಜ್ಯಾಧ್ಯಕ್ಷ ಯು. ಬಸವರಾಜ ಮತ್ತು ಪ್ರಧಾನ ಕಾರ್ಯದರ್ಶಿ ಯಶವಂತ ಟಿ. ತಿಳಿಸಿದ್ದಾರೆ. ನವೆಂಬರ್

ಎಐಕೆಎಸ್ ಸ್ಥಾಪನೆಯಾಗಿ 90 ವರ್ಷ ಪೂರ್ಣಗೊಳ್ಳುತ್ತಿರುವ ಮತ್ತು ಐತಿಹಾಸಿಕ ತೆಲಂಗಾಣ ಸಶಸ್ತ್ರ ರೈತ ಹೋರಾಟಕ್ಕೆ 80 ವರ್ಷ ತುಂಬುತ್ತಿರುವ ಮಹತ್ವದ ಸಂದರ್ಭದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ತೆಲಂಗಾಣ ಸಶಸ್ತ್ರ ರೈತ ಹೋರಾಟದ ಪ್ರಮುಖ ಕೇಂದ್ರವಾಗಿದ್ದ ನಲ್ಗೊಂಡಾದಲ್ಲೇ ಅಖಿಲ ಭಾರತ ಸಮ್ಮೇಳನ ಆಯೋಜಿಸಿರುವುದು ವಿಶೇಷವಾಗಿದೆ.

ಕರ್ನಾಟಕದಿಂದ ಕೆಪಿಆರ್‌ಎಸ್ ರಾಜ್ಯಾಧ್ಯಕ್ಷ ಯು. ಬಸವರಾಜ, ಪ್ರಧಾನ ಕಾರ್ಯದರ್ಶಿ ಯಶವಂತ ಟಿ. ಸೇರಿದಂತೆ 24 ಪ್ರತಿನಿಧಿಗಳು ಹಾಗೂ ನಾಲ್ವರು ವೀಕ್ಷಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಕೃಷಿ ವಲಯ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು.

ಕೋಲಾರ, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅರಣ್ಯೀಕರಣದ ಹೆಸರಿನಲ್ಲಿ ಸಾಗುವಳಿ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆಯ ಕ್ರಮಗಳು, ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮೂವರು ರೈತರ ಹತ್ಯೆ ನಡೆದಿರುವ ಆರೋಪ, ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಜಾರಿಗೊಳಿಸದೆ ನೈಸ್ ಕಂಪನಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ಬಿಡದಿ ಟೌನ್‌ಶಿಪ್‌ಗಾಗಿ ನೀರಾವರಿ ಆಶ್ರಿತ ಬಹುವಾರ್ಷಿಕ ಬೆಳೆಗಳ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳು ಸಮ್ಮೇಳನದಲ್ಲಿ ಚರ್ಚೆಯಾಗಲಿವೆ ಎಂದು ಕೆಪಿಆರ್‌ಎಸ್ ಮುಖಂಡರು ತಿಳಿಸಿದ್ದಾರೆ.

ಇದರ ಜತೆಗೆ, ಬಗರ್‌ಹುಕುಂ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸುವಂತೆ ರೈತರು ಸಲ್ಲಿಸಿರುವ ಸಾವಿರಾರು ಅರ್ಜಿಗಳನ್ನು ದರಖಾಸ್ತು ಸಮಿತಿಗಳ ಮುಂದೆ ಮಂಡಿಸದೆ ಜಿಲ್ಲಾಧಿಕಾರಿಗಳ ಹಂತದಲ್ಲೇ ವಜಾಗೊಳಿಸಿರುವುದು, ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ನಿರಾಕರಣೆ, ರಾಜ್ಯದ ಸಹಕಾರಿ ಹೈನುಗಾರಿಕೆ ಮತ್ತು ಹಾಲು ಮಾರುಕಟ್ಟೆ ಎದುರಿಸುತ್ತಿರುವ ಅಪಾಯ, ಅಮೆರಿಕ ಸೇರಿದಂತೆ ವಿವಿಧ ದೇಶಗಳೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಳ್ಳುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಕೃಷಿ ವಲಯದ ಮೇಲಾಗುವ ಪರಿಣಾಮಗಳು ಹಾಗೂ ಕಸ್ತೂರಿರಂಗನ್ ವರದಿ ಜಾರಿಯ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಇದನ್ನೂ ಓದಿ :  2 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿಯವರೊಂದಿಗೆ ಜೋಡಿಸುವ ಯೋಜನೆ ಕೈಬಿಡಿ: ಎಸ್‌ಎಫ್‌ಐ ಆಗ್ರಹ

ನವೆಂಬರ್ 15ರಂದು ನಲ್ಗೊಂಡಾದಲ್ಲಿ ಒಂದು ಲಕ್ಷ ರೈತರ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ ಆಯೋಜಿಸಲಾಗಿದೆ. ನಲ್ಗೊಂಡಾ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಹಿರಿಯ ಕಮ್ಯುನಿಸ್ಟ್ ನಾಯಕಿ ಬೃಂದಾ ಕಾರಟ್, ಎಐಕೆಎಸ್ ಅಧ್ಯಕ್ಷ ಡಾ. ಅಶೋಕ್ ಧವಳೆ, ಪ್ರಧಾನ ಕಾರ್ಯದರ್ಶಿ ಡಾ. ವಿಜು ಕೃಷ್ಣನ್ ಸೇರಿದಂತೆ ಹಲವು ರಾಷ್ಟ್ರೀಯ ರೈತ ನಾಯಕರು ಮಾತನಾಡಲಿದ್ದಾರೆ.

ನವೆಂಬರ್ 16ರಿಂದ 18ರವರೆಗೆ ನಡೆಯುವ ಪ್ರತಿನಿಧಿಗಳ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ 800ಕ್ಕೂ ಹೆಚ್ಚು ರೈತ ಮುಖಂಡರು ಭಾಗವಹಿಸಲಿದ್ದಾರೆ. ದೇಶದ ಕೃಷಿ ಪರಿಸ್ಥಿತಿ, ನವ ಉದಾರೀಕರಣ ನೀತಿಗಳಿಂದ ರೈತರ ಬದುಕಿನ ಮೇಲೆ ಉಂಟಾಗಿರುವ ಪರಿಣಾಮಗಳು, ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು, ಕಳೆದ ನಾಲ್ಕು ವರ್ಷಗಳ ಹೋರಾಟಗಳು ಹಾಗೂ ಚಳವಳಿಗಳ ಅನುಭವಗಳನ್ನು ಸಮ್ಮೇಳನದಲ್ಲಿ ಪರಾಮರ್ಶಿಸಲಾಗುವುದು.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ಎದುರಿಸುತ್ತಿರುವ ಸವಾಲುಗಳು ಹಾಗೂ ಫ್ಯಾಸಿಸಂನ ಅಪಾಯವನ್ನು ಎದುರಿಸುವ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ದೇಶದ ರೈತ ಚಳವಳಿಯನ್ನು ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬುದರ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ಮಹತ್ವದ ವೇದಿಕೆಯಾಗಿ ಈ ಸಮ್ಮೇಳನ ರೂಪುಗೊಳ್ಳಲಿದೆ ಎಂದು ಯು. ಬಸವರಾಜ ಮತ್ತು ಯಶವಂತ ಟಿ. ತಿಳಿಸಿದ್ದಾರೆ.

ಇದನ್ನೂ ಓದಿ : ಋತ್ವಿಕ್‌ ಘಟಕ್ -100| ಮೇಘೆ ಡಾಕಾ ತಾರಾ ಸಿನಿಮಾ ಕುರಿತು ಮುರಳಿ ಕೃಷ್ಣ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *