ಬೆಂಗಳೂರು: ನಗರದಲ್ಲಿ ಪ್ರತಿಭಟನೆಯನ್ನು ನಡೆಸಿದ ಎಐಡಿಎಸ್ಓ ಸಂಘವು ಹಠಾತ್ತನೆ ರಾಜ್ಯ ಸರ್ಕಾರ ಹಾಗು ಪಿಯುಸಿ ಮಂಡಳಿಯು ದ್ವಿತೀಯ ಪಿಯುಸಿ ಮದ್ಯವರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವ ನಿರ್ಧಾರ ಹೇರಿರುವುದು ಅತ್ಯಂತ ಅಪ್ರಜಾತಾಂತ್ರಿಕ ಹಾಗು ಇದು ವಿದ್ಯಾರ್ಥಿ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸದ್ದಾರೆ.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ 500 ರಿಂದ 600 ಕ್ಕೂ ಹೆಚ್ಚು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪಿಯು ಮಂಡಳಿ ಹಾಗು ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಎಐಡಿಸ್ಓ ಬೆಂಗಳೂರು ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್. ದ್ವಿತೀಯ ಪಿಯುಸಿ ಮದ್ಯ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವ ಹಠಾತ್ ಹೇರಿಕೆಯನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ವಿದ್ಯಾರ್ಥಿಗಳ ಹೋರಾಟ ಮುಂದುವರೆಯಲಿದೆ. ಪಿಯು ಮಂಡಳಿಗೆ ವಿದ್ಯಾರ್ಥಿಗಳ ಮನವಿ ತಲುಪಿಸಲಿದ್ದೇವೆ! ವಿದ್ಯಾರ್ಥಿಗಳು ಹಾಗು ಉಪನ್ಯಾಸಕರಿಗೆ ಮಾನಸಿಕ ಒತ್ತಡ ಹೇರುವ ಬೋರ್ಡ್ ಪರೀಕ್ಷೆಯ ನಿರ್ಧಾರವನ್ನು ಈ ಕೂಡಲೇ ಕೈಬಿಡಿʼʼ ಎಂದು ಆಗ್ರಹಿಸಿದರು.
ಯಾವುದೇ ಸಮಾಲೋಚನೆ ಇಲ್ಲದೆ, ವಿದ್ಯಾರ್ಥಿಗಳ, ಉಪನ್ಯಾಸಕರ, ಪೋಷಕರ ಮನಸ್ಥಿತಿಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಸರ್ಕಾರ ಈ ನಡೆಯನ್ನು ಉಗ್ರವಾಗಿ ಖಂಡಿಸಿದರು.
ಎಐಡಿಎಸ್ಓ ರಾಜ್ಯ ಖಜಾಂಚಿ ಅಭಯಾ ದಿವಾಕರ್ ಮಾತನಾಡಿ “ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಕ್ಷಾಂತರ ಕುಟುಂಬಗಳು ಆರ್ಥಿಕ ಹೊರೆಯಿಂದ ಕುಗ್ಗಿ ಹೋಗಿವೆ. ಎಷ್ಟೋ ವಿದ್ಯಾರ್ಥಿಗಳು ಕುಟುಂಬವನ್ನು ನಡೆಸಲು ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆ, ಪ್ರಸ್ತುತ ದ್ವಿತೀಯ ಪಿಯು ವಿದ್ಯಾರ್ಥಿಗಳು ಕೋವಿಡ್ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಬರೆಯದೇ ಬಡ್ತಿ ಹೊಂದಿದ್ದರು. ದ್ವಿತೀಯ ಪಿಯು ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ, ಮೇ 3ನೇ ವಾರ ತರಗತಿಗಳು ಆರಂಭವಾಗಿ, ಮಾರ್ಚ್ 3ನೆ ವಾರಕ್ಕೆ ಅಂತಿಮ ಪರೀಕ್ಷೆಗಳು ನಡೆಯುತ್ತದೆ. ಈಗ ಕೋವಿಡ್ ಹಿನ್ನೆಲೆಯಲ್ಲಿ, ತರಗತಿಗಳು ಆರಂಭವಾಗಿದ್ದೇ ಆಗಸ್ಟ್ 3ನೇ ವಾರಕ್ಕೆ. ಏಪ್ರಿಲ್ಗೆ ಅಂತಿಮ ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. ಅಂದರೆ ಕಾಲೇಜು ಪುನರಾರಂಭ ಮೂರು ತಿಂಗಳು ವಿಳಂಬವಾಗಿದೆ. ಇದರೊಂದಿಗೆ ಶೈಕ್ಷಣಿಕ ವೇಳಾಪಟ್ಟಿಯನ್ನು ವಿಸ್ತರಿಸಿ, ಅಂತಿಮ ಪರೀಕ್ಷೆಗಳನ್ನು ಜೂನ್ ತಿಂಗಳಿಗೆ ನಿಗದಿ ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಪದವಿ ಪೂರ್ವ ಶಿಕ್ಷಣ ಇಲಾಕೆಯ ನಿರ್ದೇಶಕರನ್ನು ಭೇಟಿ ಮಾಡಿದ ಎಐಡಿಎಸ್ಓ ರಾಜ್ಯ ಸಮಿತಿ ಸದಸ್ಯರಾದ ಅಭಯಾ ದಿವಾಕರ್ ಅವರ ನೇತೃತ್ವದ ವಿದ್ಯಾರ್ಥಿಗಳ ನಿಯೋಗವು ಮನವಿ ಸಲ್ಲಿಸಿದೆ.
ಸಭೆಯ ಅಧ್ಯಕ್ಷತೆಯನ್ನು ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ವಹಿಸಿದ್ದರು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಅಪೂರ್ವ ಸಿ.ಎಂ., ಜಿಲ್ಲಾ ಖಜಾಂಚಿ ವಿನಯ್ ಚಂದ್ರ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಹಯ್ಯಾಳಪ್ಪ ಸೇರಿದಂತೆ ಇನ್ನಿತರು ಭಾಗವಹಿಸಿದ್ದರು.