ಬೆಂಗಳೂರು: ಅಂತಿಮ ಪರೀಕ್ಷೆಗಳನ್ನು ಪೂರ್ವಭಾವಿಯಾಗಿ ನಡೆಸಲು ತೀರ್ಮಾನಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿ ಇಂದು ರಾಜ್ಯಾದ್ಯಂತ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್(ಎಐಡಿಎಸ್ಓ) ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಅಖಿಲ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನಾ ದಿನದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಅಂತಿಮ ವರ್ಷ ಮತ್ತು ದ್ವಿತೀಯ ವರ್ಷದ ವೈದ್ಯಕೀಯ ಅಂತಿಮ ಪರೀಕ್ಷೆಯ ಸಮಸ್ಯೆಗಳ ಕುರಿತು ಚರ್ಚಿಸಿ, ಮನವಿ ಪತ್ರವನ್ನು ಸಲ್ಲಿಸಿದರು.
ಇದನ್ನು ಓದಿ: ವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಗೊಂದಲ ಕೂಡಲೇ ನಿವಾರಿಸಿ: ಎಐಡಿಎಸ್ಒ
ಬೆಂಗಳೂರಿನಲ್ಲಿ ಎಐಡಿಎಸ್ಒ ಹಾಗೂ ಮೆಡಿಕಲ್ ವಿದ್ಯಾರ್ಥಿಗಳ ನಿಯೋಗವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್(ಮೌಲ್ಯಮಾಪನ), ಡಾ. ರಾಮಕೃಷ್ಣ ರೆಡ್ಡಿ ಅವರನ್ನು ಭೇಟಿ ಮಾಡಿದ ನಿಯೋಗವು ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿ ಮನವಿ ನೀಡಿದರು.
ರಾಮಕೃಷ್ಣ ರೆಡ್ಡಿ ಅವರು ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ, “ಮುಂದಿನ ದಿನಗಳಲ್ಲಿ ಕೋವಿಡ್ ಹೆಚ್ಚಾಗುವ ಸಂಭವದ ಬಗ್ಗೆ ಮಾಹಿತಿ ಖಚಿತವಾಗಿ ಇಲ್ಲ. ಆದರೆ, ಒಂದು ಪಕ್ಷ ಕಾಲೇಜುಗಳ ಪ್ರಾಂಶುಪಾಲರ ಕಡೆಯಿಂದ ಪರೀಕ್ಷೆ ಕುರಿತು ಮನವಿ ಬಂದರೆ ನಾವು ಪರೀಕ್ಷೆ ಬಗ್ಗೆ ಮರು ಪರಿಶೀಲನೆ ಮಾಡುತ್ತೇವೆ” ಎಂದಿದ್ದಾರೆ.
ನಿಯೋಗವು ಯಾವ ರೀತಿ ಕೋವಿಡ್ ಹಿನ್ನೆಲೆಯಲ್ಲಿ ಒಟ್ಟಾರೆ ವೈದ್ಯಕೀಯ ಶಿಕ್ಷಣ ಮತ್ತು ಕಲಿಕೆ ಬಿಕ್ಕಟ್ಟಿಗೆ ಸಿಲುಕಿದೆ ಮತ್ತು ಈ ಕಾರಣದಿಂದಾಗಿ ಬಹು ಮುಖ್ಯವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಿಗಲು ಸಾಧ್ಯವಾಗಿಲ್ಲ ಎಂಬುದರ ಕುರಿತು ಸಹ ರಿಜಿಸ್ಟ್ರಾರ್ ಅವರ ಗಮನಕ್ಕೆ ತಂದರು.
ಇದನ್ನು ಓದಿ: ದ್ವಿತೀಯ ಪಿಯುಸಿ ಮದ್ಯ ವಾರ್ಷಿಕ ಬೋರ್ಡ್ ಪರೀಕ್ಷೆ ರದ್ದುಪಡಿಸಲು ಎಐಡಿಎಸ್ಓ ಆಗ್ರಹ
ಮುಂಬರುವ ವೈದ್ಯರಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮತ್ತು ಇಂತಹ ಸಂಕಷ್ಟದ ಸಮಯದಲ್ಲಿ ಉತ್ತಮ ವೈದ್ಯರ ಅವಶ್ಯಕತೆ ಸಮಾಜಕ್ಕೆ ಇರುವ ಉದ್ದೇಶದಿಂದ ಅಂತಿಮ ಪರೀಕ್ಷೆಯನ್ನು ಒಂದು ತಿಂಗಳಿಗೆ ಮುಂದೂಡಬೇಕು ಎಂಬ ಬಗ್ಗೆ ನಿಯೋಗದ ಮುಖಂಡರು ರಿಜಿಸ್ಟ್ರಾರ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ನಿಯೋಗದಲ್ಲಿ ಎಐಡಿಎಸ್ಒ ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್., ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಅಭಯಾ ದಿವಾಕರ್ ಮತ್ತಿತರರು ಹಾಜರಿದ್ದರು.