ಮಾಜಿ ಮುಖ್ಯಮಂತ್ರಿಗಳಾದ ಪಳನಿಸ್ವಾಮಿ-ಪನ್ನೀರ್ ಸೆಲ್ವಂ ಬೆಂಬಲಿಗರ ಹೊಡೆದಾಟ-ಮಾರಾಮಾರಿ

ಚೆನ್ನೈ: ತಮಿಳುನಾಡು ಎಐಎಡಿಎಂಕೆ ಪಕ್ಷದ ನಾಯಕತ್ವ ವಿವಾದ ತಾರಕ್ಕೇರಿದ್ದು, ಮಾಜಿ ಮುಖ್ಯಮಂತ್ರಿಗಳಾದ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಓ. ಪನ್ನೀರ್ ಸೆಲ್ವಂ ಬೆಂಬಲಿಗರ ನಡುವಿನ ಅನಿರೀಕ್ಷಿತ ಘರ್ಷಣೆ ಉಂಟಾಗಿ ಮಾರಾಮಾರಿ ನಡೆದಿದೆ. ಘಟನೆಯ ನಂತರ ತಮಿಳುನಾಡು ಕಂದಾಯ ಇಲಾಖೆ ಎಐಎಡಿಎಂಕೆ ಪಕ್ಷದ ಕಚೇರಿಗೆ ಬೀಗ ಹಾಕಿದೆ.

ಚೆನ್ನೈನ ವಣಾಗರಂನಲ್ಲಿ ನಡೆಯುತ್ತಿರುವ ಎ. ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಗೂ ಮುನ್ನ ಭಾರೀ ಗಲಾಟೆ ನಡೆದಿದ್ದು, ಉಭಯ ಮುಖಂಡರ ಬೆಂಬಲಿಗರು ಪರಸ್ಪರ ಖರ್ಚಿಗಳನ್ನು ಎಸೆದು, ಹೊಡೆದಾಡಿಕೊಂಡಿದ್ದಾರೆ. ಪಕ್ಷದ ಕಚೇರಿಯ ಬಾಗಿಲು ಮುರಿದು ಒಳನುಗ್ಗಿದ ಪಳನಿಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸಿ, ಸಭೆಗೆ ಅಡ್ಡಿಪಡಿಸಿದ್ದಾರೆ. ಗಲಾಟೆ ವೇಳೆಯಲ್ಲಿ ಹಲವು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಇಬ್ಬರು ಬಣದ ಬೆಂಬಲಿಗರು ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯ ಮುಂದೆ ರೌದ್ರಾವತಾರ ತಾಳಿದ್ದರು. ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದರು. ಪಕ್ಷದ ಧ್ವಜಗಳನ್ನು ಹೊತ್ತ ಉದ್ರಿಕ್ತರ ಎರಡು ಗುಂಪುಗಳು ಹೊಡದಾಡಿಕೊಂಡಿದ್ದು ಅಲ್ಲದೆ, ಕಲ್ಲು ತೂರಾಟ ನಡೆಸಿದರು. ಕೆಲವರು ರಸ್ತೆಬದಿ ನಿಲ್ಲಿಸಿದ ವಾಹನಗಳನ್ನು ಜಖಂಗೊಳಿಸಿದರು. ಅನೇಕ ಕಾರ್ಯಕರ್ತರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎ. ಪಳನಿಸ್ವಾಮಿ, ಪಕ್ಷದ ಕಚೇರಿಗೆ ರಕ್ಷಣೆ ನೀಡುವಂತೆ ದೂರು ನೀಡುದ್ದೇವೆ ಆದರೂ ಸಹ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹಾಗೂ ಪನ್ನೀರ್ ಸೆಲ್ವಂ ಜೊತೆಗೂಡಿ ಯೋಜಿತ ದಾಳಿ ಮಾಡುವ ಮೂಲಕ ಪಕ್ಷದ ಕಚೇರಿಯನ್ನು ಹಾಳು ಮಾಡಿದ್ದಾರೆ. ಈ ಘಟನೆಯನ್ನು ಬಲವಾಗಿ ಖಂಡಿಸುವುದಾಗಿ ಹೇಳಿದರು.

ಪನ್ನೀರ್‌ ಸೆಲ್ವಂ ಪ್ರತಿಕ್ರಿಯೆ ನೀಡಿದ್ದು, ಸಾಮಾನ್ಯ ಸಭೆಯಲ್ಲಿ ನನ್ನನ್ನು ವಜಾಗೊಳಿಸಿರುವುದಕ್ಕೆ ಮಾನ್ಯತೆ ಇಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವೆ. ನನ್ನನ್ನು ತೆಗೆದುಹಾಕುವ ಅಧಿಕಾರಿ ಪಳನಿಸ್ವಾಮಿಗೆ ಹಕ್ಕಿಲ್ಲ. ಪಕ್ಷದ 1.5 ಕೋಟಿ ಕಾರ್ಯಕರ್ತರಿಂದ ನಾನು ಪಕ್ಷದ ಸಮನ್ವಯಕಾರನಾಗಿ ಚುನಾಯಿತನಾಗಿರುವೆನು. ಇದರ ಬಗ್ಗೆ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.

ನಾಯಕತ್ವದ ವಿಚಾರವಾಗಿ ಮದ್ರಾಸ್‌ ಹೈಕೋರ್ಟ್‌ಗೆ ಪನ್ನೀರ್‌ ಸೆಲ್ವಂ ಪಕ್ಷದ ಸಾಮಾನ್ಯ ಸಭೆಗೆ ಅವಕಾಶ ನೀಡಬಾರದೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ, ನಡೆದ ಸಾಮಾನ್ಯ ಸಭೆಯಲ್ಲಿ ಎ. ಪಳನಿ ಸ್ವಾಮಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ, ಏಕ ನಾಯಕತ್ವದ ನಿರ್ಣಯ ಅಂಗೀಕರಿಸಲಾಗಿತ್ತು.

ಎಐಎಡಿಎಂಕೆ ಪಕ್ಷದ ಸಾಮಾನ್ಯ ಸಭೆಯಲ್ಲಿ ಎ. ಪಳನಿಸ್ವಾಮಿ ನೇತೃತ್ವದ ನಾಯಕತ್ವ ಒ ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡುವ ನಿರ್ಣಯವನ್ನು ಕೈಗೊಂಡಿತ್ತು.

Donate Janashakthi Media

Leave a Reply

Your email address will not be published. Required fields are marked *