ಬೆಂಗಳೂರು: ಪ್ರಸ್ತುತ ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಮತ್ತು ಅದರ ಪ್ರಕ್ರಿಯೆ ದೇಶದ ಸಾರ್ವಭೌಮತೆಗೆ ಗಂಡಾಂತರ ತಂದೊಡ್ಡಿದೆ. ಕಳೆದೆರಡು ವರ್ಷಗಳಿಂದ ಸೇನಾ ನೇಮಕಾತಿಯೇ ನಡೆದಿಲ್ಲ. 2021 ರ ಅಂಕಿ ಅಂಶಗಳ ಪ್ರಕಾರ ಭಾರತೀಯ ಸೇನೆಯಲ್ಲಿ 1,04,653 ಸೈನಿಕ ಸಿಬ್ಬಂದಿಗಳ ಕೊರತೆಯಿದೆ. ಆದರೂ ಹೊಸದಾಗಿ ಗುತ್ತಿಗೆ ಮಾದರಿಯ ಹೊಸ ಯೋಜನೆ ಪ್ರಕಟಿಸಿರುವುದನ್ನು ಎಸ್‌ಎಫ್‌ಐ ಸಂಘಟನೆ ಖಂಡಿಸಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಸಿರುವ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ರಾಷ್ಟ್ರೀಯ ಅಧ್ಯಕ್ಷ ವಿ.ಪಿ ಸಾನು ಅವರು, ಗಾಯದ ಮೇಲೆ ಬರೆ ಎಳೆದಂತೆ , ಕ್ರೇಂದ್ರ ಸರ್ಕಾರ ಪ್ರಸ್ತುತ ಉದ್ದೇಶಿತ ನೇಮಕಾತಿಯಲ್ಲಿ ಸ್ಥಳೀಯ ಕೋಟಾವನ್ನು ರದ್ದು ಮಾಡಿದಂತಾಗಿದೆ. ಆರು ತಿಂಗಳ ತರಬೇತಿಯೂ ಸೇರಿದಂತೆ ನಾಲ್ಕು ವರ್ಷಗಳ ಅಲ್ಪಕಾಲಿಕ ನೇಮಕಾತಿ ಮಾಡಲು ನಿರ್ಧರಿಸಿದೆ. ಈ ಸೇವೆಗೆ ಯಾವುದೇ ರೀತಿಯ ಪಿಂಚಣಿ ಮತ್ತು ಗ್ರಾಜ್ಯುಟಿ ಇಲ್ಲದಿರುವುದು ಉದ್ಯೋಗ ಭದ್ರತೆಯಲ್ಲಿ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಅವರು, ಕೇಂದ್ರ ಬಿಜೆಪಿ ಸರ್ಕಾರದ ಅಗ್ನಿಫಥ್ ಯೋಜನೆಯು ಮುಂದೆ ಪ್ರತಿ ವರ್ಷ ಶಸ್ತ್ರಾಸ್ತ್ರ ತರಬೇತಿ ಪಡೆದ 35,000 ನಿರುದ್ಯೋಗಿಗಳನ್ನು ಸೃಷ್ಟಿಸಲಿದೆ. ಸರ್ಕಾರದ ಈ ನಡೆಯಲ್ಲಿ ಇಡೀ ಸಮಾಜವನ್ನೇ ಮಿಲಿಟರೀಕರಣಗೊಳಿಸುವ ಅಪಾಯವಿದೆ. ಈ ಯೋಜನೆಯು ದೇಶದ ಸಾರ್ವಭೌಮತೆಯ ಸಂಕೇತವಾದ ಸೇನೆಯ ಗಣತೆ, ನೈತಿಕತೆ ಮತ್ತು ವೃತ್ತಿಪರತೆಯ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದಿದ್ದಾರೆ.
ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ ಅವರು ಸಶಸ್ತ್ರ ನೇಮಕಾತಿಯೊಂದಿಗೆ ಪ್ರತೀ ವರ್ಷ ದೇಶದ ಲಕ್ಷಗಟ್ಟಲೆ ಯುವಕ, ಯುವತಿಯರಿಗೆ ಭದ್ರತೆಯ ಮತ್ತು ಧೀರ್ಘಕಾಲದ ಉದ್ಯೋಗ ಒದಗಿಸುವ ಮೂಲಗಳಾಗಿದ್ದವು . ಆದರೆ, ಈಗಿನ ಈ ಯೋಜನೆ ನವ ಉದಾರಿಕರಣ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಪ್ರತಿಯೊಂದು ಉದ್ಯೋಗ ಕ್ಷೇತ್ರವನ್ನು ಗುತ್ತಿಗೆಯವರಿಗೆ ಒಪ್ಪಿಸುವಂತದ್ದೇ ಹೊಸ ಯೋಜನೆಯಾಗಿದೆ. ಈ ನಡೆ ದೇಶದ ದುಡಿವ ಜನರ ಉದ್ಯೋಗ ಭದ್ರತೆ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಂಪೂರ್ಣವಾಗಿ ಇಲ್ಲದಂತಾಗಿಸುತ್ತಿದೆ. ಜೊತೆಗೆ ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ ತರಭೇತಿ ಹೊಂದಿದ ನಿರುದ್ಯೋಗಿ ಸೈನಿಕರು ಜಗತ್ತಿನ ಸಾಮ್ರಾಜ್ಯಶಾಹಿ ಶಕ್ತಿಗಳ ಕೂಲಿಕಾರರಾಗಿಸುವ ಅವಕಾಶದ ಹೆಬ್ಬಾಗಿಲನ್ನೂ ತೆರೆದಿಡಲಿದೆ ಎಂದಿದ್ದಾರೆ.
ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಕೇಂದ್ರ ಕಾರ್ಯಕಾರಿ ಸಮಿತಿ ಜನತೆ ಮತ್ತು ದೇಶದ ಸಾರ್ವಭೌಮತೆಯ ಮೇಲೆ ನವ ಉದಾರಿಕರಣ ದಾಳಿಯನ್ನು ಖಂಡಿಸಿದೆ ಮತ್ತು ತಕ್ಷಣವೇ ಈ ಮಾರಕ ಅಗ್ನಿಪಥ ಯೋಜನೆಯನ್ನು ರದ್ದುಪಡಿಸಿ ಈಗಾಗಲೇ ಚಾಲ್ತಿಯಲ್ಲಿದ್ದಂತೆಯೇ ಸೇನಾ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿದೆ.