ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ತಪ್ಪುಗಳು ನಡೆದಿವೆ. ಅಲ್ಲದೆ, ಪಠ್ಯದಲ್ಲಿ ಇರಬಹುದಾದ ಸೂಕ್ಷ್ಮ ಸಂಕೀರ್ಣ ವಿಷಯಗಳ ಕುರಿತು ಪರಿಶೀಲಿಸಿ ವರದಿ ನೀಡುವುದಕ್ಕೆ ರಚಿಸಲಾದ ರೋಹಿತ್ ಚಕ್ರವರ್ತಿ ಅಧ್ಯಕ್ಷೀಯ ಸಮಿತಿ ತನಗೆ ವಹಿಸಿದ ಜವಾಬ್ದಾರಿ ಮೀರಿ, ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾದ ದುಷ್ಕೃತ್ಯವನ್ನು ಸಿಪಿಐ(ಎಂ) ಪಕ್ಷ ಬಲವಾಗಿ ಖಂಡಿಸಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ವತಿಯಿಂದ ರಾಜ್ಯದಲ್ಲಿಂದು (ಜುಲೈ 1) ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಅಗ್ನಿಪಥ ಯೋಜನೆ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮಾಡಿರುವ ಪಠ್ಯಪುಸ್ತಕದ ಕೋಮುವಾದೀಕರಣ ಖಂಡಿಸಿ ರಾಜ್ಯದ ಎಲ್ಲೆಡೆ ಪ್ರತಿಭಟನೆಗಳು ನಡೆದಿವೆ.
ಜನತೆಯ ಪ್ರತಿರೋಧ ಹತ್ತಿಕ್ಕುವ ಯತ್ನ
ರಾಜ್ಯ ಬಿಜೆಪಿ ಸರಕಾರ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ಅನುಕೂಲವಾಗುವಂತಹ ಮತ್ತು ರೈತ-ಕಾರ್ಮಿಕ ಮತ್ತು ನಾಗರೀಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಅವುಗಳ ವಿರುದ್ಧ ಜನತೆಯ ಪ್ರತಿರೋಧವನ್ನು ಒಡೆಯುವ ನಿಟ್ಟಿನಲ್ಲಿ ಕೋಮುವಾದಿ ಅಜೆಂಡಾವನ್ನು ನಿರಂತರವಾಗಿ ಮುನ್ನೆಲೆಗೆ ತರುತ್ತಿದೆ. ಆ ಮೂಲಕ ಲೂಟಿಕೋರತನಕ್ಕೆ ಅನುವು ಮಾಡಿಕೊಡುತ್ತಿರುವ ಬಿಜೆಪಿ ಸರ್ಕಾರ ಹೋರಾಟವನ್ನು ನೇಪಥ್ಯಕ್ಕೆ ತಳ್ಳುವ ಸಂಚನ್ನು ಮುಂದುವರೆಸಿದೆ. ರಾಜ್ಯದ ದುಡಿಯುವ ಜನತೆ ಇಂತಹ ಸಂಚುಗಳನ್ನು ವಿಫಲಗೊಳಿಸಲಿದ್ದಾರೆಂದು ಸಿಪಿಐ(ಎಂ) ಪಕ್ಷ ತಿಳಿಸಿದೆ.
ರಾಜ್ಯದ ಸಮಗ್ರತೆ ಹಾಗೂ ಐಕ್ಯತೆಗೆ ಭಂಗ ಉಂಟು ಮಾಡುವ ದುಷ್ಕೃತ್ಯ ಕೈಬಿಟ್ಟು, ರೈತ – ಕೃಷಿ ಕೂಲಿಕಾರರ ಆಧಾರಿತ ಕೃಷಿಯನ್ನು ರಕ್ಷಿಸಬೇಕು, ಕೂಡಲೇ ಕೃಷಿಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು. ಅದೇ ರೀತಿ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆ ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಜಾತಿ ತಾರತಮ್ಯ ಹಾಗೂ ಅಸ್ಪೃಷ್ಯತೆಯನ್ನು ಮುಂದುವರೆಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಸಂರಕ್ಷಣೆಯ ಸುಗ್ರೀವಾಜ್ಞೆಗಳನ್ನು ವಾಪಾಸ್ಸು ಪಡೆಯಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಹೊಣೆಗೇಡಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಜಾಗೊಳಿಸಿ
ರಾಜ್ಯದ ಬಿಜೆಪಿ ಸರಕಾರದಲ್ಲಿ ಯಾರು ಹೇಗೆ ಬೇಕಾದರೂ ವರ್ತಿಸಬಹುದೆಂಬುದನ್ನು ಮತ್ತು ಆಡಳಿತದ ಮೇಲೆ ಸರಕಾರದ ಯಾವುದೇ ನಿಯಂತ್ರಣವಿಲ್ಲವೆಂಬುದು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಪಠ್ಯಪುಸ್ತಕದ ಅವಾಂತರಗಳೇ ಸಾಕ್ಷಿಯಾಗಿದೆ. ಯಾವುದೇ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೇ, ಸೂಕ್ತ ಆದೇಶ ಹೊರಡಿಸದೇ ತಮಗೆ ತಿಳಿದಂತೆ ಕಾರ್ಯನಿರ್ವಹಿಸುವುದು, ಸಂವಿಧಾನ ವಿರೋಧಿ ಕ್ರಮಗಳನ್ನು ರಾಜ್ಯ ಸರಕಾರ ಅನುಸರಿಸುತ್ತಿದೆ. ಅಧಿಕಾರ ದುರುಪಯೋಗದಿಂದ ಮತ್ತು ತಜ್ಞರಲ್ಲದವರ ದುರ್ನಡೆಯಿಂದ ನಾಡಿನ ಗಣ್ಯ ವ್ಯಕ್ತಿಗಳು ಅಪಮಾನಿತರಾಗುವಂತಾಯಿತು. ರಾಜ್ಯದ ಲಕ್ಷಾಂತರ ಶಾಲಾ ಮಕ್ಕಳು ಪಠ್ಯ ಪುಸ್ತಕ ಲಭ್ಯವಿಲ್ಲದೇ ವರ್ಷವೂ ತೊಂದರೆಗೀಡಾಗಿದ್ದು ಇಂತಹ ಎಡವಟ್ಟುಗಳಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ.
ಸಚಿವ ಬಿ.ಸಿ. ನಾಗೇಶ್ ಅವರ ಬೇಜವಾಬ್ದಾರಿತನದಿಂದ ರಾಜ್ಯದ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರಲಿದೆ. ಶಿಕ್ಷಣ ಸಚಿವರು ಹಾಗೂ ಪಠ್ಯಪುಸ್ತಕ ಪರಿಶೀಲನಾ ಸಮಿತಿ ವಜಾ ಮಾಡಿ ರಾಜ್ಯದ ಮತ್ತು ಸರ್ಕಾರದ ಘನತೆಯನ್ನು ಉಳಿಸಲು ಮುಂದಾಗಬೇಕೆಂದು ಸಿಪಿಐ(ಎಂ) ಪಕ್ಷ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ದೇಶದ್ರೋಹಿ ಅಗ್ನಿಪಥ ಯೋಜನೆ ಕೈಬಿಡಿ
ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯು ಗುತ್ತಿಗೆ ಆಧಾರದಲ್ಲಿ ಸುಮಾರು 46 ಸಾವಿರ ನಿರುದ್ಯೋಗಿ ಯುವಜನರನ್ನು ನಾಲ್ಕು ವರ್ಷಗಳ ಕಾಲ ಸೈನಿಕ ಸೇವೆಗೆ ನೇಮಿಸಿಕೊಂಡು ನಂತರ ಯಾವುದೇ ಪರಿಹಾರ ನೀಡದೇ ಬೀದಿಗೆ ದೂಡುವ ಯೋಜನೆ ಇದಾಗಿದೆ. ಮಾತ್ರವಲ್ಲಾ, ಇಂತಹ ವೃತ್ತಿಪರವಲ್ಲದ ಗುತ್ತಿಗೆ ಆಧಾರದ ಸೈನ್ಯದಿಂದ ದೇಶದ ಭದ್ರತೆಗೆ ಮಾರಕವಾಗಿದೆ.
ಈ ಕೂಡಲೇ ಕುಹಕದ ಯೋಜನೆಯನ್ನು ತಕ್ಷಣವೇ ಕೈ ಬಿಡಬೇಕು ಮತ್ತು ಸೈನ್ಯದಲ್ಲಿ ಖಾಲಿ ಇರುವ 1.46 ಲಕ್ಷ ಹುದ್ದೆಗಳನ್ನು ತುಂಬಿಕೊಳ್ಳಲು ಕ್ರಮವಹಿಸಬೇಕೆಂದು ಪ್ರಧಾನ ಮಂತ್ರಿಗಳನ್ನು ಸಿಪಿಐ(ಎಂ) ಪಕ್ಷದ ಒತ್ತಾಯವಾಗಿದೆ. ದೇಶದಾದ್ಯಂತ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ದೇಶದ ಭದ್ರತೆಗೆ ಧಕ್ಕೆ ತರುವ ಮತ್ತು ನಿರುದ್ಯೋಗಿ ಯುವಜನತೆಯನ್ನು ಅಗ್ನಿಪಥ ಯೋಜನೆಯನ್ನು ವಾಪಸ್ಸು ಪಡೆಯಬೇಕೆಂದು ಸಿಪಿಐ(ಎಂ) ಪ್ರತಿಭಟನೆ ಮೂಲಕ ಆಗ್ರಹಿಸಿದೆ.
ಬೆಂಗಳೂರು, ಬೀದರ್, ಮಂಡ್ಯ, ವಿಜಯನಗರ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಕೋಲಾರ, ಉಡುಪಿ, ಮೈಸೂರು, ಕಲಬುರಗಿ, ಹಾಸನ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನಾ ಪ್ರದರ್ಶನಗಳು ಜರುಗಿದೆ.