‘ಅಗ್ನಿಪಥ್’ ಎಂದು ಹೆಸರಿಸಿರುವ ಬಿಜೆಪಿ ಸರಕಾರದ ತೀರಾ ಇತ್ತೀಚಿನ ಯೋಜನೆ ದೇಶದ ಸಶಸ್ತ್ರ ಪಡೆಗಳಲ್ಲಿ ಕೂಡ ನಿಗದಿತ ಅವಧಿಯ ಒಪ್ಪಂದದ ಮೇಲೆ, ಅದೂ,ಯಾವುದೇ ಪಿಂಚಣಿಯಿಲ್ಲದೆ, ನೇಮಕಾತಿ ಮಾಡುವ ತಂತ್ರ ಎಂದು ದೇಶದ ಪ್ರಮುಖ ಕಾರ್ಮಿಕ ಸಂಘಟನೆ ಸಿಐಟಿಯು ತೀವ್ರ ಕಳವಳ ಮತ್ತು ಆಘಾತವನ್ನು ವ್ಯಕ್ತಪಡಿಸಿದೆ. ಇದು ನವ ಉದಾರವಾದಿ ಸರ್ಕಾರ ಒಟ್ಟಾರೆಯಾಗಿ ಉದ್ಯಮಗಳು ಮತ್ತು ಸೇವೆಗಳಲ್ಲಿನ ನೇಮಕಾತಿಗಳಲ್ಲಿ ಜೋರಾಗಿ ಪ್ರೋತ್ಸಾಹಿಸುತ್ತಿರುವ ಕಾಂಟ್ರಾಕ್ಟೀಕರಣ/ಕ್ಯಾಶುವಲೀಕರಣದ ಅದೇ ಪ್ರಕ್ರಿಯೆಯನ್ನು ಸೇನಾಪಡೆಗಳಲ್ಲೂ ತರುವ ಧೈರ್ಯಮಾಡುತ್ತದೆ. ಇದರ ಅಪಾಯಕಾರಿ ಪರಿಣಾಮಗಳ ಪರಿವೆಯೇ ಅದಕ್ಕೆ ಇದ್ದಂತಿಲ್ಲ. ಇದು ಹುಸಿ ರಾಷ್ಟವಾದ ಮತ್ತು ನಕಲಿ ದೇಶಭಕ್ತಿಯನ್ನು ಉತ್ತೇಜಿಸಲು ಮೋದಿ ಸರಕಾರ ‘ನಮ್ಮ ಜವಾನರು’ ಎಂದು ವ್ಯಕ್ತಪಡಿಸುತ್ತಿರುವ ಕಾಳಜಿ ಕೇವಲ ಬೂಟಾಟಿಕೆ ಎಂಬುದನ್ನು ಬಯಲಿಗೆಳೆಯುತ್ತಿದೆ ಎಂದು ಸಿಐಟಿಯು ಕಟುವಾಗಿ ಟೀಕಿಸಿದೆ.
ಇಂತಹ ಪ್ರತಿಗಾಮಿ ಕ್ರಮವು ನಮ್ಮ ಸಶಸ್ತ್ರ ಪಡೆಗಳಲ್ಲಿ ಉದ್ಯೋಗದ ಗುಣಮಟ್ಟ ಮತ್ತು ದಕ್ಷತೆಯನ್ನು ತೀವ್ರವಾಗಿ ತಟ್ಟುತ್ತದೆ, ಅವುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಒಟ್ಟಾರೆಯಾಗಿ ದೇಶದ ಭದ್ರತೆಯ ವಿರುದ್ಧದ ಮತ್ತು ಅದರಲ್ಲಿ ಉದ್ಯೋಗದ ಗುಣಮಟ್ಟ, ದೃಢತೆ ಮತ್ತು ವೃತ್ತಿಪರತೆಯನ್ನು ಬಾಧಿಸುವ ತೀವ್ರ ಕ್ರಮವಾಗುತ್ತದೆ , ಇದೆಲ್ಲ ರಾಷ್ಟ್ರೀಯ ಹಿತಾಸಕ್ತಿಗಳಿಗೆ ತೀವ್ರ ಹಾನಿಯುಂಟು ಮಾಡುತ್ತದೆ.
ಇದಲ್ಲದೆ, ಸಶಸ್ತ್ರ ಪಡೆಗಳ ಮಟ್ಟದ ತರಬೇತಿ ಪಡೆದ ಮತ್ತು ‘ಅಗ್ನಿಪಥ್’ ಯೋಜನೆಯಡಿ ನಿಯೋಜಿಸಲಾದ ಯುವ ಸೈನಿಕರನ್ನು ನಾಲ್ಕು ವರ್ಷಗಳ ನಂತರ ಅನಿಶ್ಚಿತ ಭವಿಷ್ಯದತ್ತ ಎಸೆಯಲಾಗುತ್ತದೆ. ಇದು ಪ್ರಸಕ್ತ ನಿರಂಕುಶ ಮತ್ತು ವಿಭಜನಕಾರೀ ಶೈಲಿಯ ಆಳ್ವಿಕೆಯ ಅಡಿಯಲ್ಲಿ ಇಡೀ ಸಮಾಜಕ್ಕೆ ಗಂಭೀರ ಕೇಡುಂಟುಮಾಡುತ್ತದೆ.
ಇಂತಹ, ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ “ಅಗ್ನಿಪಥ್” ಎಂಬುದು ಪ್ರತಿಗಾಮಿ ಹುನ್ನಾರ ಎಂದು ಸಿಐಟಿಯು ಖಂಡಿಸಿದೆ. ಮತ್ತು ದೇಶದ ವಿವಿಧ ಭಾಗಗಳಲ್ಲಿ ಅದರ ವಿರುದ್ಧ ಸ್ವಯಂಪ್ರೇರಿತ ಪ್ರತಿಭಟನೆಗಳು ನಡೆಯುತ್ತಿರುವುದನ್ನು ಸ್ವಾಗತಿಸಿದೆ. ದೇಶದ ಸಶಸ್ತ್ರ ಪಡೆಗಳಿಗೆ ಸಂಬಂಧಪಟ್ಟಂತೆ ಇಂತಹ ವಿನಾಶಕಾರಿ ಪ್ರಯೋಗಗಳನ್ನು ಸರ್ಕಾರವು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಅದು ದೇಶಾದ್ಯಂತ ಇಂತಹ ದೇಶವಿರೋಧಿ ಹುನ್ನಾರದ ವಿರುದ್ಧ ದೇಶಪ್ರೇಮಿಗಳು ಪ್ರತಿಭಟನೆ ಮತ್ತು ಅಸಮ್ಮತಿಯ ಧ್ವನಿ ಎತ್ತಬೇಕೆಂದು ಕರೆ ನೀಡಿದೆ.