- ಕನ್ಹಯ್ಯ ಕುಮಾರ್ ಪೌರತ್ವ ರದ್ದುಗೊಳಿಸಿ ಎಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ನಾಗೇಶ್ವರ ಮಿಶ್ರಾ
ಅಲಹಾಬಾದ್: ಪ್ರತಿಷ್ಠಿತ ಜವಹರ್ಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಹಾಗೂ ಕಮ್ಯೂನಿಸ್ಟ್ ಪಕ್ಷದ ಯುವ ನಾಯಕ ಕನ್ಹಯ್ಯ ಕುಮಾರ್ ಅವರ ಪೌರತ್ವವನ್ನು ರದ್ದುಪಡಿಸುವಂತೆ ಕೋರಿ ವಾರಣಾಸಿಯ ನಾಗೇಶ್ವರ ಮಿಶ್ರಾ ಎಂಬವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. “ಉಗ್ರ ಅಫ್ಜಲ್ ಗುರು ಅವರನ್ನು ನೇಣಿಗೇರಿಸಿದ್ದನ್ನು ವಿರೋಧಿಸಿ 2016ರಲ್ಲಿ ಜೆಎನ್ಯು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಕನ್ಹಯ್ಯ ಕುಮಾರ್ ರಾಷ್ಟ್ರವಿರೋಧಿ ಘೋಷಣೆ ಕೂಗಿದ್ದರು” ಎಂದು ಆರೋಪಿಸಿ ಅವರ ಪೌರತ್ವ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಇಂದು ಈ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್ ಅರ್ಜಿಯನ್ನು ವಜಾ ಮಾಡಿದ್ದು ಕೋರ್ಟ್ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 25,000 ರೂ. ದಂಡ ವಿಧಿಸಿ ಆದೇಶಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೆ.ಗುಪ್ತಾ ಮತ್ತು ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ,”ಅಗ್ಗದ ಪ್ರಚಾರ ಪಡೆಯಲು ಮತ್ತು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿ ಸಲ್ಲಿಸಿದ್ದ ವಾರಣಾಸಿಯ ನಾಗೇಶ್ವರ ಮಿಶ್ರಾ ಅವರಿಗೆ 25,000 ಸಾವಿರ ದಂಡ ವಿಧಿಸಿ ಆದೇಶಿಸಲಾಗುತ್ತಿದೆ. ಅರ್ಜಿದಾರರು ರಿಜಿಸ್ಟರ್ ಮೂಲಕ ಕೋರ್ಟ್‌ಗೆ ದಂಡ ಪಾವತಿಸಬೇಕು” ಎಂದು ಸೂಚಿಸಲಾಗಿದೆ.
“ಅರ್ಜಿದಾರರ ಅರ್ಜಿಯು 1955 ರ ಭಾರತೀಯ ಪೌರತ್ವ ಕಾಯ್ದೆಯ ಸೆಕ್ಷನ್ 10 ಅನ್ನು ಅವಲಂಬಿಸಿರುವುದರಿಂದ ಅರ್ಜಿಯು ‘ಅರ್ಹತೆಯಿಲ್ಲದ’ ಮತ್ತು ‘ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲ್ಪಟ್ಟಿದೆ. ಈ ಕಾಯ್ದೆಯು ನಾಗರಿಕರಲ್ಲದವರಿಗೆ ಕೇಂದ್ರ ಸರ್ಕಾರವು ಪೌರತ್ವವನ್ನು ನೀಡುವ ಸಂದರ್ಭಗಳಲ್ಲಿ ಅನ್ವಯಿಸುತ್ತದೆ. ಆದರೆ ಹುಟ್ಟಿನಿಂದ ಭಾರತೀಯ ಪ್ರಜೆಯಾಗಿದ್ದವರಿಗೆ ಈ ಕಾನೂನು ಅನ್ವಯವಾಗುವುದಿಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
“ಇನ್ನೂ ಕನ್ಹಯ್ಯ ಕುಮಾರ್ ಪೌರತ್ವವನ್ನು ಕಳೆದುಕೊಳ್ಳುವ ಪ್ರಶ್ನೆಯು ಉದ್ಭವಿಸುವುದಿಲ್ಲ, ಏಕೆಂದರೆ ಅವರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿಯ ನ್ಯಾಯಾಲಯದ ಮುಂದೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಅಂತಹ ಘೋಷಣೆ ಕೂಗಿಲ್ಲ ಮತ್ತು ಆ ವಿಡಿಯೋ ನಕಲಿ ಎಂದು ಕನ್ಹಯ್ಯ ಈಗಾಗಲೇ ಸಮರ್ಥಿಸಿಕೊಂಡಿದ್ದಾರೆ.
ಇದಲ್ಲದೆ, ಕನ್ಹಯ್ಯ ಕುಮಾರ್ ಮತ್ತು ಅವರ ಸಂಗಡಿಗರ ಭಯೋತ್ಪಾದಕ ಗುಂಪುಗಳ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಅವರು ಐಕ್ಯತೆಯನ್ನು ಅಸ್ಥಿರಗೊಳಿಸಲು ಮತ್ತು ನಮ್ಮ ದೇಶದ ಶಾಂತಿಯನ್ನು ಭಂಗಗೊಳಿಸಲು ಪಾಕಿಸ್ತಾನದ ಪ್ರಚೋದನೆಯ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂಬ ಯಾವ ಆರೋಪಗಳಿಗೂ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.