ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಹಾಲಿನ ಉತ್ಪನ್ನಗಳು ಹಾಗೂ ದಿನ ಬಳಕೆ ಪದಾರ್ಥಗಳ ಮೇಲೆ ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಹೇರಿರುವುದನ್ನು ಖಂಡಿಸಿ ಇಂದು(ಜುಲೈ 20) ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) –ಎಸ್‌ಯುಸಿಐ(ಸಿ) ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‌ಯುಸಿಐ(ಸಿ) ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯ ಎನ್. ರವಿ `ಈಗಾಗಲೇ ಕೋವಿಡ್ ಆಕ್ರಮಣದಿಂದ ಆರ್ಥಿಕವಾಗಿ ತತ್ತರಿಸುತ್ತಿರುವ ಜನ ಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ತೆರಿಗೆಯನ್ನು ಹೇರಿಕೆ ಮಾಡಿದೆ. ಇದರಿಂದ ಸಾಮಾನ್ಯ ಜನರು ಪೌಷ್ಠಿಕ ಆಹಾರ ಸೇವಿಸುವುದನ್ನು ತ್ಯಜಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಮುಖ್ಯವಾಗಿ ಹೆಂಗಸರು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯು ಹೆಚ್ಚಿರುವುದರಿಂದ ಅವರಿಗೆ ಈ ಬರ್ಬರ ನೀತಿಯು ಶಾಪವಾಗಿ ಪರಿಣಮಿಸಲಿದೆ. ಹಾಗಾಗಿ ದೇಶದ ಜನರೆಲ್ಲಾ ಇಂತಹ ಜನ ವಿರೋಧಿ, ಬಡ ವಿರೋಧಿ ನೀತಯನ್ನು ಹಿಮ್ಮೆಟ್ಟಿಸಲು ಒಗ್ಗಟ್ಟಾಗಿ ಹೋರಾಟಗಳನ್ನು ನಡೆಸಬೇಕಿದೆ ಎಂದು ಕರೆ ಕೊಟ್ಟರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ. ವಿ. ಭಟ್ ಮಾತನಾಡುತ್ತಾ, ದಿನ ಬಳಕೆ ಪದಾರ್ಥಗಳಾದ ಅಕ್ಕಿ, ಗೋಧಿ, ಹಾಲು, ಮೊಸರು ಮೇಲಿನ ಕೇಂದ್ರ ಸರ್ಕಾರದ ಜಿಎಸ್‌ಟಿ ಹೇರಿಕೆಯು ಆರ್ಥಿಕ ಕೆಳಮಟ್ಟದಲ್ಲಿರುವ ಬಡ ಜನರ ಮೇಲೆ ಒಂದು ಕ್ರೂರ ಪ್ರಹಾರವಲ್ಲದೇ ಬೇರೇನೂ ಅಲ್ಲ. ಅಚ್ಛೆ ದಿನ್ ತರುತ್ತೇವೆ ಎಂದು ಹೇಳಿಕೊಂಡು ಬಂದ ಕೇಂದ್ರ ಸರ್ಕಾರ ಇಂದು ಶತ ಕೋಟ್ಯಾಧಿಪತಿಗಳಿಗೆ ಮಾತ್ರ ಅಚ್ಛೆ ದಿನ್ ತಂದಿದೆ, ಆದರೆ ಬಡ ಜನರನ್ನು, ಮಧ್ಯಮ ವರ್ಗದವರನ್ನು ಕಡೆಗಣಿಸಿ ಬೀದಿಪಾಲು ಮಾಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವು ಮೊದಲನೆಯದಾಗಿ ಜಿಎಸ್‌ಟಿ ಹೇರಿಕೆಯನ್ನು ಅನುಸರಿಸಿತು, ಆದ್ದರಿಂದ ಜನರು ಇಂತಹ ಪಕ್ಷಗಳನ್ನು ಧಿಕ್ಕರಿಸಿ ಐಕ್ಯ ಹೋರಾಟ ನಡೆಸಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯ ವಿನಯ್ ಸಾರಥಿ ವಹಿಸಿದ್ದರು.