ಯುಪಿ: ದಲಿತ ಬಾಲಕನಿಗೆ ಥಳಿಸಿ ಮೇಲ್ಜಾತಿ ಆರೋಪಿಯ ಪಾದವನ್ನು ನೆಕ್ಕಿಸಿದ ದುಷ್ಕರ್ಮಿಗಳು!

ರಾಯ್‌ ಬರೇಲಿ: ಉತ್ತರ ಪ್ರದೇಶ ರಾಜ್ಯದ ರಾಯ್ ಬರೇಲಿಯಿಂದ ಒಂದು ಅತ್ಯಂತ ಆಘಾತಕಾರಿ ಪ್ರಕರಣವೊಂದರ ವರದಿಯಾಗಿದ್ದು, ಅಪ್ರಾಪ್ತ ದಲಿತ ಬಾಲಕನೊಬ್ಬನಿಗೆ ಮೇಲ್ಜಾತಿಯ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಲ್ಲದೇ, ಆತನಿಂದ ಬಲವಂತವಾಗಿ ಆರೋಪಿಗಳಲ್ಲೊಬ್ಬನ ಪಾದವನ್ನು ನೆಕ್ಕಿಸಲಾಗಿದೆ. ಘಟನೆ ಕುರಿತಾದ 2 ನಿಮಿಷ 30 ಸೆಕೆಂಡ್ ಅವಧಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ.

ಘಟನೆ ಎಪ್ರಿಲ್ 10ರಂದು ನಡೆದಿದೆ ಎನ್ನಲಾಗಿದ್ದು, ವಿಡಿಯೋದಲ್ಲಿ ಬಾಲಕ ಅದರಲ್ಲಿ ಕೈಗಳನ್ನು ಕಿವಿಗೆ ಹಿಡಿದು ನೆಲದಲ್ಲಿ ಕುಳಿತಿರುವುದು ಕಾಣಿಸುತ್ತದೆ. ಆತ ಭಯದಿಂದ ನಡುಗುತ್ತಿರುವುದನ್ನು ಕಂಡು ಮೋಟಾರ್ ಸೈಕಲ್‍ಗಳಲ್ಲಿ ಕುಳಿತಿರುವ ಆರೋಪಿಗಳು ನಗುತ್ತಿರುವುದೂ ಕಾಣಿಸುತ್ತದೆ. ಆರೋಪಿಗಳಲ್ಲೊಬ್ಬಾತ ಬಾಲಕನಿಗೆ ಠಾಕುರ್ ಎಂದು ಹೇಳು ಎಂದು ಹೇಳಿ ನಂತರ ಆತನಿಗೆ ನಿಂದಿಸಿ “ಮತ್ತೆ ಇಂತಹ ತಪ್ಪು ಮಾಡುತ್ತೀಯಾ?” ಎಂದು ಹೇಳುವುದು ಕೇಳಿಸುತ್ತದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತದನಂತರ ಕಾಲು ನೆಕ್ಕಲು ಹೇಳಿದಾಕ್ಷಣ ಆತ ನಡುಗುತ್ತಲೇ ದುಷ್ಕರ್ಮಿಗಳ ಬಳಿ ಹೋಗಿ ಕಾಲು ನೆಕ್ಕುವುದನ್ನು ನೋಡಬಹುದಾಗಿದೆ.

ಬಾಲಕ ಗಾಂಜಾ ಮಾರಾಟ ಮಾಡಿದ್ದಾನೆ ಎಂದು ಆರೋಪಿಗಳು ದೂರಿದ್ದಾರೆ ಎಂದು ವರದಿಯಾಗಿದೆ. ಆದರೆ, ಅದೇ ಶಾಲೆಯಲ್ಲಿ ಓದಿದ್ದ ಹಳೆ ವಿದ್ಯಾರ್ಥಿಗಳ ಸುಲಿಗೆಗೆ ಸಹಕರಿಸದ ಕಾರಣ ದಲಿತ ಬಾಲಕನಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿಡಿಯೋ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಯ್ ಬರೇಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದುಷ್ಕರ್ಮಿಗಳ ಪತ್ತೆ ಮತ್ತು ಕ್ರಮ ಜರುಗಿಸಲು ಐದು ತಂಡಗಳನ್ನು ರಚಿಸಿದ್ದರು. ಈಗಾಗಲೇ ಏಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಬಾಲಕನಾಗಿದ್ದು, ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಉಳಿದ 6 ಮಂದಿ ಆರೋಪಿಗಳನ್ನು ಅಭಿಷೇಕ್, ವಿಕಾಸ್ ಪಾಸಿ, ಮಹೇಂದ್ರ ಕುಮಾರ್, ಹೃತಿಕ್ ಸಿಂಗ್, ಅಮನ್ ಸಿಂಗ್ ಮತ್ತು ಯಶ್ ಪ್ರತಾಪ್ ಎಂದು ಗುರುತಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ದಲಿತ ಬಾಲಕ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾನೆ. ಆರೋಪಿಗಳಲ್ಲಿ ಕೆಲವರು ಮೇಲ್ವರ್ಗಕ್ಕೆ ಸೇರಿದವರು ಎಂದು ಹೇಳಲಾಗಿದೆ.

ಆದರೆ ಪೊಲೀಸರು ದಾಖಲಿಸಿರುವ ಎಫ್‍ಐಆರ್ ನಲ್ಲಿ ಪ್ರಕರಣದ ಸೂಕ್ಷ್ಮ ವಿಚಾರಗಳನ್ನು ಉಲ್ಲೇಖಿಸಿಲ್ಲ ಎಂದು ತಿಳಿದು ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *