ಅಮೆರಿಕ ಸಂಯುಕ್ತ ಸಂಸ್ಥಾನ ಅಫಘಾನಿಸ್ತಾನದಲ್ಲಿ ಒಂದು ಅವಮಾನಕಾರೀ ಸೋಲನ್ನು ಉಂಡಿದೆ. ಆಗಿದ್ದ ತಾಲಿಬಾನ್ ಆಳ್ವಿಕೆಯನ್ನು ಉರುಳಿಸಿದ ಇಪ್ಪತ್ತು ವರ್ಷಗಳ ನಂತರ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಅಶ್ರಫ್ ಘನಿ ನೇತೃತ್ವದ ಸರಕಾರ ಮತ್ತು ರಾಷ್ಟ್ರೀಯ ಸೇನೆ ಕುಸಿದು ಬಿದ್ದಿರುವುದು ಅಮೆರಿಕ ಮತ್ತು ಅದರ ನಾಟೋ ಮಿತ್ರರು ರಚಿಸಿದ ಪ್ರಭುತ್ವದ ಟೊಳ್ಳುತನವನ್ನು ತೋರಿಸಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ-ಸಿಪಿಐ ಜಂಟಿ ಹೇಳಿಕೆಯಲ್ಲಿ ಹೇಳಿವೆ.
ಭಾರತೀಯ ಸರಕಾರದ ಅಫಘಾನ್ ಧೋರಣೆಯೆಂದರೆ ಅಮೆರಿಕನ್ನರನ್ನು ಕಣ್ಣುಮುಚ್ಚಿ ಅನುಸರಿಸುವುದು. ಇದರ ಫಲಿತಾಂಶವಾಗಿ , ಈ ಪ್ರದೇಶದಲ್ಲಿ ಭಾರತ ಒಬ್ಬಂಟಿಯಾಗಿ ಬಿಟ್ಟಿದೆ, ಅದರಿಂದಾಗಿ ಅದರ ಮುಂದೆ ಹೆಚ್ಚೇನೂ ಆಯ್ಕೆಗಳಿಲ್ಲದಂತಾಗಿದೆ.
ಈ ಹಿಂದಿನ 1990ರ ದಶಕದ ತಾಲಿಬಾನ್ ಸರಕಾರದಲ್ಲಿ ಉಗ್ರ ಮೂಲಭೂತವಾದೀ ನಿಲುವು ಎದ್ದು ಕಾಣುತ್ತಿತ್ತು. ಅದು ಮಹಿಳೆಯರು, ಹೆಣ್ಣುಮಕ್ಕಳು ಮತ್ತು ದಮನಿತ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿತು.
ಇದನ್ನು ಓದಿ: ಭಾರತದ ರಾಜತಾಂತ್ರಿಕ ಕಛೇರಿಯ 130 ಸಿಬ್ಬಂದಿಗಳು ಕಾಬೂಲ್‌ನಿಂದ ಪ್ರಯಾಣ
ತಾಲಿಬಾನ್ ಹತೋಟಿಯಲ್ಲಿ ರಚಿಸುವ ಹೊಸ ವ್ಯವಸ್ಥೆ ಮಹಿಳೆಯರ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸೂಕ್ತ ಗೌರವ ಮತ್ತು ಮಾನ್ಯತೆ ಕೊಡಲೇಬೇಕಾಗಿದೆ.
ಅಫಘಾನಿಸ್ತಾನ ಇಸ್ಲಾಮಿಕ್ ಸ್ಟೇಟ್, ಅಲ್‌ಖೈದಾದಂತಹ ಭಯೋತ್ಪಾದಕ ಗುಂಪುಗಳಿಗೆ ಆಶ್ರಯದಾಣವಾಗಬಾರದು ಎಂಬ ಅಂತ ರ‍್ರಾಷ್ಟ್ರೀಯ ಸಮುದಾಯದ ಆತಂಕವನ್ನು ಆಗಸ್ಟ್ 16ರಂದು ನಡೆದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ತನ್ನ ತುರ್ತು ಸಭೆಯಲ್ಲಿ ಸಾಮೂಹಿಕವಾಗಿ ವ್ಯಕ್ತಗೊಳಿಸಿದೆ.
ಅಫ್ಘಾನ್ ಜನತೆ ಒಂದು ಶಾಂತಿಯುತ ಮತ್ತು ಸ್ಥಿರ ಪರಿಸರದಲ್ಲಿ ಬದುಕಲು ಸಾಧ್ಯವಾಗುವಂತೆ ಭಾರತ ಇಲ್ಲಿನ ಪ್ರಾದೇಶಿಕ ಶಕ್ತಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕಾಗಿದೆ. ಭಾರತ ಸರಕಾರ ಕೂಡಲೇ ಅಫಘಾನಿಸ್ತಾನದಲ್ಲಿ ಸಿಲುಕಿರುವ ಎಲ್ಲ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಪಾರು ಮಾಡಲು ಕೆಲಸ ಮಾಡಬೇಕು ಎಂದು ಸಿಪಿಐ(ಎಂ) ಮತ್ತು ಸಿಪಿಐ ಆಗ್ರಹಿಸಿವೆ.