ರಮೇಶ್ ಜಾರಕಿಹೊಳಿ ವಕೀಲರು ಪ್ರಭಾವಶಾಲಿಯಾಗಿದ್ದು, ಮಾಧ್ಯಮಗಳ ಮುಖಾಂತರ ಕಪೋಲಕಲ್ಪಿತ ಸುದ್ದಿ ಹರಿಬಿಟ್ಟಿದ್ದಾರೆ.
ಬೆಂಗಳೂರು: ಸಿ.ಡಿ ಪ್ರಕರಣದ ಸಂತ್ರಸ್ತ ಯುವತಿ ಯಾವುದೇ ಉಲ್ಟಾ ಹೇಳಿಕೆ ಹೊಡೆದಿಲ್ಲ. ಆ ಯುವತಿ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ ಎಂದು ಯುವತಿ ಪರ ವಕೀಲ ಸೂರ್ಯ ಮುಕುಂದ ರಾಜ್ ಸ್ಪಷ್ಟಪಡಿಸಿದ್ದಾರೆ.
ಆರೋಪಿ ಜೊತೆಗಿನ ಮಾತುಕತೆ ಸಂಬಂಧ ದಾಖಲೆಯ ಪತ್ರವನ್ನು ಎಸ್‍ಐಟಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಯಾವುದೇ ರೀತಿಯ ಉಲ್ಟಾ ಹೇಳಿಕೆಗಳನ್ನು ನೀಡಿಲ್ಲ. ಇದೊಂದು ರೀತಿ ಏಪ್ರಿಲ್ ಫೂಲ್ ಆದಂಗೆ ಆಯ್ತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಎಸ್‍ಐಟಿ ಅಧಿಕಾರಿಗಳ ಎದುರು ಇಂದು ಯುವತಿ ದಿಢೀರ್ ಹಾಜರಾಗಿ ಹೇಳಿಕೆ ನೀಡಿದ್ದಾಳೆ. ಮತ್ತೆ ನ್ಯಾಯಾಧೀಶರ ಎದುರು ಹಾಜರಾಗಿ ಹೇಳಿಕೆ ನೀಡಲಿದ್ದಾಳೆ ಎಂಬ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಸೂರ್ಯ ಮುಕುಂದರಾಜ್, ಆ ಯುವತಿ ಯಾವುದೇ ಹೇಳಿಕೆಗಳನ್ನು ಕೊಟ್ಟೇ ಇಲ್ಲ. ಯುವತಿ ಸ್ವತಂತ್ರವಾಗಿ ಹೇಳಿಕೆ ಕೊಡುತ್ತಿದ್ದಾಳೆ. ಈ ಪ್ರಕರಣವನ್ನು ಹೈಕೋರ್ಟ್ ನಿರ್ವಹಣೆ ಮಾಡುತ್ತಿದೆ ಎಂದರು.
ಇದನ್ನೂ ಓದಿ : ಸಿಡಿ ಪ್ರಕರಣ: ಸಿಡಿ ಗ್ಯಾಂಗ್ ಗೆ ಹಣ ಸಂದಾಯ ಮಾಡಿದ್ದ ರಮೇಶ್ ಜಾರಕಿಹೊಳಿ
ಎ.11ರಂದು ಸಿಟ್ ಅಧಿಕಾರಿಗಳು ಸಂತ್ರಸ್ತೆಗೆ ಪ್ರಕರಣ ಸಂಬಂಧ ಏನಾದರೂ ವಾಟ್ಸಾಪ್ ಚಾಟ್, ಸ್ಕ್ರೀನ್ ಶಾಟ್ ಸೇರಿದಂತೆ ಅಗತ್ಯ ಸಾಕ್ಷ್ಯಾಧಾರವಿದ್ದರೆ ಸಲ್ಲಿಸಿ ಎಂದು ನೋಟಿಸ್ ಕೊಟ್ಟಿದ್ದರು. ಅದರಂತೆ ನಮ್ಮ ಕಕ್ಷಿದಾರರು ಸೋಮವಾರ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ದಾಖಲಾತಿ ಸಲ್ಲಿಸಿ ತನಿಖೆಗೆ ಸಹಕರಿಸಿದ್ದಾರೆ ಎಂದರು.
ಸೆಕ್ಷನ್ 164 ರಡಿ ನ್ಯಾಯಾಲಯದಲ್ಲಿ ಮತ್ತೊಮ್ಮೆ ಯುವತಿ ಹೇಳಿಕೆ ನೀಡುವುದಿಲ್ಲ. ಈ ಹಿಂದೆ ಕೋರ್ಟ್ ನಲ್ಲಿ ನೀಡಿದ ಹೇಳಿಕೆಗೆ ಯುವತಿ ಬದ್ಧವಾಗಿದ್ದಾರೆ ಎಂದ ಅವರು, ಪ್ರಕರಣದಲ್ಲಿ ಆರೋಪಿ ಪರ ವಕೀಲರು ತುಂಬಾ ಪ್ರಭಾವ ಶಾಲಿಗಳಾಗಿದ್ದು, ಮಾಧ್ಯಮಗಳ ಮುಖಾಂತರ ಕಪೋಲಕಲ್ಪಿತ ಸುದ್ದಿ ಹರಿಬಿಟ್ಟಿದ್ದಾರೆ ಎಂದು ದೂರಿದರು.
ನ್ಯಾಯವಾದಿ ಜಗದೀಶ್ ಕೆ.ಎನ್.ಮಹದೇವ್ ಪ್ರತಿಕ್ರಿಯಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆಧಾರರಹಿತ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಕೆಲ ಮಾಧ್ಯಮಗಳಲ್ಲಿ ನೋಡಿ ನನಗೂ ಗಾಬರಿಯಾಗಿದೆ. ಹನಿಟ್ರ್ಯಾಪ್, 164 ಹೇಳಿಕೆ ಎಲ್ಲವೂ ಸುಳ್ಳು. ಆ ರೀತಿ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.