ಬೆಂಗಳೂರು: ಯೋಗ- ವಸುದೈವ ಕುಟಂಬಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಹಾಗೂ ಆರೋಗ್ಯ ಕುಟುಂಬ ಇಲಾಖೆ ವತಿಯಿಂದ ಬುಧವಾರ 9ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಯಿತು. ವಿಧಾನಸೌಧದ ಮುಂಭಾಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲಾಗಿದ್ದು,ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯುಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯರಾದ ಟಿ.ಎ. ಶರವಣ, ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಅಂಜು ಬಾಬಿ ಜಾರ್ಜ್, ಚಿತ್ರ ನಟಿ ಭಾವನ್ ರಾಮಣ್ಣ, ಅದಿತಿ ಪ್ರಭುದೇವಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಯೋಗವು ಇಡೀ ಜಗತ್ತಿಗೆ ಭಾರತ ನೀಡಿದ ಕೊಡುಗೆಯಾಗಿದೆ, ಇದು ಸಾವಿರಾರು ವರ್ಷಗಳ ಹಿಂದೆ ಹುಟ್ಟಿಕೊಂಡ ಪುರಾತನ ಅಭ್ಯಾಸವಾಗಿದ್ದು, ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಪ್ರಧಾನಿ ಮೋದಿ ರಾಜ್ಯ ಭೇಟಿ: ಹೆಚ್ಚಿದ ಭದ್ರತೆ-ಎಲ್ಲೆಲ್ಲೂ ಪೊಲೀಸರೇ!
ದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಾಗಿದ್ದು, ಇದಕ್ಕೆ ಜನರ ಕಳಪೆ ಜೀವನಶೈಲಿ ಪ್ರಾಥಮಿಕ ಕಾರಣವಾಗಿದೆ ಎಂದು ತಿಳಿಸಿದರು.ಇದೇ ವೇಳೆ ಜನರು ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಒತ್ತಿ ಹೇಳಿದ ಸಚಿವರು, ಯೋಗಾಭ್ಯಾಸ ದೇಹದೊಂದಿಗೆ ಮನಸ್ಸು ಮತ್ತು ಆತ್ಮವನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದರು. ಬಹು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಯೋಗದ ಪ್ರಯೋಜನಗಳನ್ನು ಸಂಶೋಧನೆ ದೃಢಪಡಿಸಿದೆ. ರಾಜ್ಯದಾದ್ಯಂತ 376 ಆಯುಷ್ ಕೇಂದ್ರಗಳು ಮತ್ತು 7,270 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಪ್ರತಿದಿನ ಒಂದು ಗಂಟೆ ಯೋಗ ತರಗತಿಗಳನ್ನು ನಡೆಸುತ್ತಿದ್ದು, ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಬೇಕು. ಮನೆ. ಶಾಲಾ-ಕಾಲೇಜುಗಳ ಮಟ್ಟದಲ್ಲಿ ಯೋಗವನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಸಚಿವರೊಂದಿಗೆ ಯೋಗ ಮಾಡಿದ ನಂತನ ಮಾತನಾಡಿದ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು, ಜನರು ತಮ್ಮ ದೈನಂದಿನ ಜೀವನಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಭಾರತದಾದ್ಯಂತ ಯೋಗಾಭ್ಯಾಸ ಮಾಡುವಲ್ಲಿ ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಯೋಗವು “ವಸುಧೈವ ಕುಟುಂಬಕಂ” ಎಂಬ ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ, ಇದರರ್ಥ ಯೋಗವು ಎಲ್ಲರ ಕಲ್ಯಾಣಕ್ಕಾಗಿ ಆಗಿದೆ ಎಂಬುದಾಗಿದೆ. ಜನವರಿ 2023 ರಲ್ಲಿ ರಾಷ್ಟ್ರೀಯ ಯುವ ಉತ್ಸವ ದಿನದಂದು ದೊಡ್ಡ ಮಟ್ಟದಲ್ಲಿ ಯೋಗವನ್ನು ಆಯೋಜಿಸಿದ್ದು ಗಿನ್ನೆಸ್ ದಾಖಲೆ ಸೇರಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಜ್ಯದ ಜನತೆಯನ್ನು ಅಭಿನಂದಿಸಿದರು.
ವಿಧಾನಸೌಧ ಮುಂಭಾಗ ಇಂದು ಬೆಳಿಗ್ಗೆ 6.30ರಿಂದ 7.30ರವರೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಯುವಕರು, ವಯಸ್ಕರು ಮತ್ತು ಹಿರಿಯ ನಾಗರೀಕರು ಸೇರಿದಂದೆ ನೂರಾರು ಜನರು ಯೋಗಾಭ್ಯಾಸ ಮಾಡಿದರು.