ಆಡಳಿತ ಜವಾಬ್ದಾರಿಯೂ ಸಾರ್ವಜನಿಕ ಹಿತಾಸಕ್ತಿಯೂ – ಭಾಗ 1

-ನಾ ದಿವಾಕರ

(ಕಾಂಗ್ರೆಸ್ ಸರ್ಕಾರದ ಆಯ್ಕೆಗಳೂ ಜನಸಾಮಾನ್ಯರ ಆದ್ಯತೆಗಳೂ ಲೇಖನದ ಮುಂದುವರೆದ   ಭಾಗ)

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ವಿಶೇಷವಾಗಿ ಭಾರತದಲ್ಲಿ ಅನುಸರಿಸಲಾಗುತ್ತಿರುವ ಮತದಾನ ವ್ಯವಸ್ಥೆಯಲ್ಲಿ, ಆಡಳಿತ ನಡೆಸಲು ಜನಬೆಂಬಲ ಪಡೆಯುವ ಪಕ್ಷಗಳು ಸೂಕ್ಷ್ಮಮತಿಗಳಾಗಿರುವುದಷ್ಟೇ ಅಲ್ಲದೆ ಕುಶಾಲಮತಿಗಳೂ ಆಗಿರುವುದು ಅತ್ಯವಶ್ಯ.  ಏಕೆಂದರೆ ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಬಹುಮತ ಪಡೆಯುವ ಪಕ್ಷಗಳು ಸಮಸ್ತ ಜನಕೋಟಿಯ ಆಯ್ಕೆಯಾಗಿರುವುದಿಲ್ಲ. ಮತದಾನಕ್ಕೆ ಅರ್ಹರಾದ ಪ್ರಜೆಗಳ ಪೈಕಿ ಶೇ 40ರಷ್ಟು ಮತಗಳನ್ನು ಪಡೆದು ಅಧಿಕಾರದ ಗದ್ದುಗೆ ಏರುವ ಪಕ್ಷಗಳು ಇನ್ನುಳಿದ ಶೇ 60ರಷ್ಟು ಮತದಾರರಿಂದ ತಿರಸ್ಕೃತವಾಗಿರುತ್ತವೆ. ಇದಲ್ಲದೆ ಮತದಾನಕ್ಕೆ ಅರ್ಹರಲ್ಲದ ಒಂದು ಜನಸ್ತೋಮವೂ ಸಹ ಇದ್ದೇ ಇರುತ್ತದೆ. First Past the Post  ಮತದಾನ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಮತಗಳಿಸುವ ಪಕ್ಷವು ಸರ್ಕಾರ ರಚಿಸುತ್ತದೆ. ಹಾಗಾಗಿ ಅಧಿಕಾರದ ಗದ್ದುಗೆ ಏರುವ ಪಕ್ಷಗಳಲ್ಲಿ ಇಡೀ ದೇಶ ಅಥವಾ ರಾಜ್ಯವನ್ನು, ಸಮಸ್ತ ಜನಕೋಟಿಯ ಬೆಂಬಲ ಪಡೆದಿದ್ದೇವೆ ಎಂಬ ಅಹಮಿಕೆ ಇರಬೇಕಿಲ್ಲ. ಈ ಎಚ್ಚರಿಕೆಯಿಂದ ತನ್ನ ಆಡಳಿತಾವಧಿಯನ್ನು ಪೂರ್ಣಗೊಳಿಸುವ ಪಕ್ಷಗಳು ಜನಾದೇಶವನ್ನು ಸಂವಿಧಾನದ ಆಶಯಗಳ ಚೌಕಟ್ಟಿನೊಳಗೇ ಪರಿಗಣಿಸಬೇಕಾಗುತ್ತದೆ.

 ಆದರೆ ಭಾರತದ ಸಂದರ್ಭದಲ್ಲಿ ಈ ಪ್ರಜಾಸತ್ತಾತ್ಮಕ ಪ್ರಬುದ್ಧತೆಯನ್ನು ನಮ್ಮ ರಾಜಕೀಯ ಪಕ್ಷಗಳಲ್ಲಿ ಕಾಣಲಾಗುವುದಿಲ್ಲ. ಎರಡನೆ ಮೂರರಷ್ಟು ಅಥವಾ ಸ್ಪಷ್ಟ ಬಹುಮತ ಗಳಿಸಿದ ಕೂಡಲೇ ತಾವು ಇಡೀ ದೇಶದ ಮೇಲೆ ದಿಗ್ವಿಜಯ ಸಾಧಿಸಿದ್ದೇವೆ ಎಂಬ ಹಿರಿಮೆ ಅಥವಾ ಮೇಲರಿಮೆ ಆಡಳಿತ ನೀತಿಗಳ ಮೇಲೆ ಪರಿಣಾಮ ಬೀರುತ್ತವೆ. 75 ವರ್ಷಗಳ ಸ್ವತಂತ್ರ ಆಳ್ವಿಕೆಯ ಇತಿಹಾಸದಲ್ಲಿ ಭಾರತ ಇಂತಹ ʼ ಬಹುಮತದ ಅಹಮಿಕೆಯʼ ಹಲವು ನಿದರ್ಶನಗಳನ್ನು ಕಂಡಿದೆ. 1970ರಲ್ಲಿ, 1990ರ ಆದಿಯಲ್ಲಿ ಮತ್ತು 2014ರ ನಂತರದ ಅವಧಿಯಲ್ಲಿ ಕೇಂದ್ರ ಸರ್ಕಾರಗಳು ಸ್ಪಷ್ಟ ಬಹುಮತವನ್ನೇ ತಮ್ಮ ನಿರಂಕುಶಾಧಿಕಾರಕ್ಕೆ ಬಳಸಿಕೊಂಡಿರುವುದನ್ನು ಕಂಡಿದ್ದೇವೆ. ಕರ್ನಾಟಕದ ಜನತೆ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿರುವುದಿಂದ ಸರ್ಕಾರದ ಪ್ರತಿಯೊಂದು ನಡೆಯೂ ಸಹ ಸಾರ್ವಜನಿಕರ ಪರಾಮರ್ಶೆಗೊಳಗಾಗುವುದು ಸಹಜ. ಹೊಸ ಸರ್ಕಾರದ ರಚನೆ ಎಂದರೆ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸುವುದೊಂದೇ ಆದ್ಯತೆಯಾಗಬೇಕಿಲ್ಲ. ಬದಲಾಗಿ ಆ ಸರ್ಕಾರದ ಅಧಿಕಾರಾವಧಿಯಲ್ಲಿ ನೆನೆಗುದಿಗೆ ಬಿದ್ದಿರುವಂತಹ, ಕೈಗೊಳ್ಳಲಾಗದ ಜನಪರ ಯೋಜನೆಗಳನ್ನು ಪೂರೈಸುವುದು ಪ್ರಥಮ ಆದ್ಯತೆಯಾಗಬೇಕು. ಹಾಗೆಯೇ ಹಿಂದಿನ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಸರಿಪಡಿಸುವುದೂ ಸಹ ಆದ್ಯತೆಯಾಗಬೇಕು.

 ಕಾಯ್ದೆ ಕಾನೂನು  ಮತ್ತು ಸಮಾಜ

ಈ ನಿಟ್ಟಿನಲ್ಲಿ ರಾಜ್ಯದ ಹೊಸ ಸರ್ಕಾರದ ಜವಾಬ್ದಾರಿಗಳು ಮತ್ತು ಆದ್ಯತೆಗಳು ಭಿನ್ನವಾಗಿರಬೇಕಿದೆ. ರಾಜಕೀಯ ನಾಯಕರ ವ್ಯಕ್ತಿಗತ ಅತ್ಯುತ್ಸಾಹಗಳು ಆಡಳಿತ ವ್ಯವಸ್ಥೆಯ ನಿರ್ವಹಣೆಯಲ್ಲಿ ನಿಷ್ಕ್ರಿಯವಾಗಿಬಿಡುವ ಸಂದರ್ಭಗಳೂ ಎದುರಾಗುತ್ತವೆ. ಏಕೆಂದರೆ ಒಂದು ಚುನಾಯಿತ ಸರ್ಕಾರ ಜಾರಿಗೊಳಿಸುವ ಕಾಯ್ದೆ ಕಾನೂನು, ಅಳವಡಿಸುವ ನಿಯಮಗಳು ಮತ್ತು ಆಡಳಿತ ನೀತಿಗಳು ಸಮಸ್ತ ಜನಕೋಟಿಗೆ ಅನ್ವಯಿಸುತ್ತದೆ. ಈ ವಿವೇಕದ ಗೆರೆ ಮೀರಿದರೆ ಏನಾಗುತ್ತದೆ ಎನ್ನುವುದಕ್ಕೆ ಕರ್ನಾಟಕದ ಮತದಾರರು ಸ್ಪಷ್ಟ ಉತ್ತರ ನೀಡಿದ್ದಾರೆ. ಭಾರತದಂತಹ ಬಹುಸಾಂಸ್ಕೃತಿಕ ದೇಶವನ್ನು ಆಡಳಿತಾತ್ಮಕವಾಗಿ ನಿರ್ವಹಣೆ ಮಾಡಬಹುದೇ ಹೊರತು ಆಳಲು ಆಗುವುದಿಲ್ಲ ಎಂಬ ವಾಸ್ತವವನ್ನು ದಿನನಿತ್ಯದ ಘಟನೆಗಳೇ ನಿರೂಪಿಸುತ್ತಿವೆ. ಹಾಗಾಗಿ ಈ ಮುಂಜಾಗರೂಕತೆಯೊಂದಿಗೇ ಸಿದ್ಧರಾಮಯ್ಯ ಸರ್ಕಾರ, ಹಿಂದಿನ ಸರ್ಕಾರದ ಕೆಲವು ವಿವಾದಾಸ್ಪದ ನಿರ್ಧಾರಗಳನ್ನು ಪರಾಮರ್ಶಿಸಬೇಕಿದೆ. ಪ್ರಮುಖವಾಗಿ ಹಿಜಾಬ್‌ ಆದೇಶ , ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧದ ಕಾಯ್ದೆಗಳನ್ನು ಪುನರ್ ಪರಿಶೀಲಿಸುವ ಮುನ್ನ ರಾಜ್ಯ ಸರ್ಕಾರ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಮುನ್ನಡೆಯಬೇಕಾಗುತ್ತದೆ.

ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ಸಂಗತಿ ಎಂದರೆ ಹಿಜಾಬ್‌ ನಿಷೇಧಿಸುವ ಹಿಂದಿನ ಸರ್ಕಾರದ ಆದೇಶ ಆಡಳಿತ ವ್ಯವಸ್ಥೆಯ ಸ್ವಪ್ರೇರಣೆಯಿಂದ ಹೊರಮೂಡಿದ್ದಲ್ಲ.  ಸರ್ಕಾರೇತರ ಸಂಘಟನೆಗಳ ಒತ್ತಾಸೆ ಹಾಗೂ ಈ ಮತೀಯ ಪಡೆಗಳು ಸೃಷ್ಟಿಸಿದ ವಿಷಮ ವಾತಾವರಣದಲ್ಲಿ ಸರ್ಕಾರ ತನ್ನ ಹಿಂದುತ್ವದ ಆಶಯಗಳಿಗೆ ಪೂರಕವಾಗಿ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸಿತ್ತು. ಈ ವಿವಾದ ಈಗ ನ್ಯಾಯಾಂಗದ ಕಟಕಟೆಯಲ್ಲಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯಬೇಕಿದೆ. ಈ ನಡುವೆ ಒಂದು ಜವಾಬ್ದಾರಿಯುತ ಸರ್ಕಾರ ಯೋಚಿಸಬೇಕಿರುವುದು ಹಿಜಾಬ್‌ ನಿಷೇಧದಿಂದ ಶಿಕ್ಷಣ ವಂಚಿತರಾಗಿರುವ ಲಕ್ಷಾಂತರ ಹೆಣ್ಣುಮಕ್ಕಳ ಬಗ್ಗೆ. ಹಿಜಾಬ್‌ ಒಂದು ಧಾರ್ಮಿಕ ಉಡುಪೋ ಅಥವಾ ವ್ಯಕ್ತಿಗತ ಆಯ್ಕೆಯ ವಸ್ತ್ರವೋ ಎನ್ನುವ ಜಿಜ್ಞಾಸೆಯಿಂದ ಹೊರಬಂದು, ಹಿಜಾಬ್‌ ಧರಿಸಿ ಬರುವ ಹೆಣ್ಣುಮಕ್ಕಳು ಯಾವ ರೀತಿಯಲ್ಲಿ ಇತರರ ವಿದ್ಯಾರ್ಜನೆಗೆ ಅಡ್ಡಿಯಾಗುತ್ತಾರೆ ಎಂದು ಯೋಚಿಸಬೇಕಿದೆ. ವಿದ್ಯಾರ್ಥಿ ದೆಸೆಯಲ್ಲಿ ಜಾತಿ-ಮತಧರ್ಮ-ಪಂಥಗಳ ಹಂಗಿಲ್ಲದೆ ಮುಕ್ತ ಪ್ರಪಂಚದಲ್ಲಿ ವಿಹರಿಸಬೇಕಾದ ಯುವ ಸಮೂಹದ ನಡುವೆ ಧಾರ್ಮಿಕ ಭಾವನೆಗಳನ್ನು ಉದ್ಧೀಪನಗೊಳಿಸುವ ಪ್ರಯತ್ನಗಳನ್ನು ತಡೆಗಟ್ಟುವುದು ಸರ್ಕಾರದ ಆದ್ಯತೆಯಾಗಬೇಕಿದೆ.

ತಮ್ಮ ಜ್ಞಾನ ವಿಕಸನಕ್ಕಾಗಿ ಶಾಲಾ ಕಾಲೇಜುಗಳಿಗೆ ಬರುವ ಹರೆಯದ ಮಕ್ಕಳಿಗೆ ಬುದ್ಧಿ ವಿಕಸನದ ಮಾರ್ಗಗಳನ್ನೂ ಸಹ ಜಾತಿ-ಧರ್ಮಗಳ ಅಸ್ಮಿತೆಗಳಿಂದ ಮುಕ್ತಗೊಳಿಸುವುದು ಜವಾಬ್ದಾರಿಯುತ ಸಮಾಜದ ಹಾಗೂ ಸರ್ಕಾರದ ಆದ್ಯತೆಯಾಗಬೇಕಿದೆ. ರಾಷ್ಟ್ರದ ಅಥವಾ ಸುತ್ತಲಿನ ಸಮಾಜದ ಭವಿಷ್ಯದ ಅಮೂಲ್ಯ ಆಸ್ತಿ ಎಂದೇ ಪರಿಗಣಿಸಲ್ಪಡುವ ಈ ಬೃಹತ್‌ ಜನಸಂಖ್ಯೆಯ ನಡುವೆ –ಜಾತಿ-ಮತಾಂಧತೆಯ ಬೀಜಗಳನ್ನು ಬಿತ್ತುವುದರಿಂದ ಸಮಾಜಮುಖಿ ಮನೋಧರ್ಮದ ಸಸಿಗಳಿಗೆ ವಿಷ ಉಣಿಸಿದಂತಾಗುತ್ತದೆ. ಹಿಜಾಬ್‌ ವಿವಾದದಲ್ಲಿ ನಾವು ಇದನ್ನೇ ಕಂಡಿದ್ದೇವೆ. ಹಿಜಾಬ್‌ ಒಂದು ಧಾರ್ಮಿಕ ಚಿಹ್ನೆ ಹಾಗಾಗಿ ಅದನ್ನು ಧರಿಸದೆ ಹೆಣ್ಣುಮಕ್ಕಳನ್ನು ಹೊರಗೆ ಕಳುಹಿಸುವುದಿಲ್ಲ ಎಂಬ ಮೂಲಭೂತವಾದಿ ಪ್ರತಿಪಾದನೆಯಷ್ಟೇ ಅಪಾಯಕಾರಿಯಾದುದು ಹಿಜಾಬ್‌ ಧರಿಸಿದವರು ಶಾಲೆಗೆ ಬಂದರೆ ಅನ್ಯ ಧರ್ಮದ ವಿದ್ಯಾರ್ಥಿಗಳಲ್ಲಿ ಮನೋಕ್ಷೋಭೆ ಉಂಟಾಗುತ್ತದೆ ಎಂಬ ವಾದ. ಈ ಎರಡೂ ವಾದಗಳನ್ನು ಮೀರಿದ ವ್ಯಕ್ತಿಗತ ಸ್ವಾತಂತ್ರ್ಯ ಇಲ್ಲಿ ಗಜಮಾರ್ಗದ ತರಗೆಲೆಗಳಂತಾಗುತ್ತದೆ.

ಈ ವಿವಾದದಲ್ಲಿ ಹಿಜಾಬ್‌ ಧರಿಸುವ ಹೆಣ್ಣುಮಗಳು ತನ್ನ ವ್ಯಕ್ತಿಗತವಾದ ಭೌತಿಕ-ಬೌದ್ಧಿಕ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದನ್ನು ಪ್ರಜ್ಞಾವಂತ ಸಮಾಜ ಗಮನಿಸಬೇಕಿದೆ. ಬದುಕುವ ಹಕ್ಕು, ಆಹಾರದ ಹಕ್ಕು , ಧಾರ್ಮಿಕ ಹಕ್ಕುಗಳಂತೆಯೇ ಪ್ರತಿಯೊಬ್ಬ ವ್ಯಕ್ತಿಗೂ ತಾನು ಧರಿಸುವ ಉಡುಪು ಹೇಗಿರಬೇಕು ಎಂಬ ಹಕ್ಕು ಸಹ ಎಷ್ಟು ಸಾರ್ವತ್ರಿಕವಾದದ್ದೋ ಅಷ್ಟೇ ವ್ಯಕ್ತಿಗತವಾದದ್ದು. ಈ ದೃಷ್ಟಿಯಿಂದ ನೋಡಿದಾಗ ಧರ್ಮ ರಕ್ಷಣೆಯ ದೃಷ್ಟಿಯಿಂದ ಹೇರಲ್ಪಡುವ ಉಡುಪು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುವಂತೆಯೇ, ವಿರೋಧಿಸಲ್ಪಡುವ ಉಡುಪು ಸಹ ಧಕ್ಕೆ ಉಂಟುಮಾಡುತ್ತದೆ. ವ್ಯಕ್ತಿಗತ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲಿ ನಿಂತು ಯೋಚಿಸಿದಾಗ, ಹಿಜಾಬ್‌ ವಿಚಾರದಲ್ಲಿ ಹೆಣ್ಣು ಮಕ್ಕಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿರುವುದು ದೊಡ್ಡ ವಿರೋಧಾಭಾಸ ಅಲ್ಲವೇ ? ಈ ವಿವಾದವು ನ್ಯಾಯಾಲಯದಲ್ಲಿರುವುದರಿಂದ ಹೊಸ ಸರ್ಕಾರ ನ್ಯಾಯಾಂಗದ ತೀರ್ಪು ಬರುವವರೆಗೂ ತಾಳ್ಮೆಯಿಂದಿರಬೇಕಾಗಿದೆ. ಅದೇ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯದ ಮುಂದೆ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪ್ರಬಲ ವಾದ ಮಂಡಿಸಬೇಕಿದೆ.

ಹಿಂದಿನ ಸರ್ಕಾರ ಜಾರಿಗೊಳಿಸಿರುವ ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳ ವಿಚಾರದಲ್ಲೂ ಸರ್ಕಾರ ಸೂಕ್ಷ್ಮವಾಗಿ ಮುಂದುವರೆಯಬೇಕಿದೆ. ಈ ಎರಡೂ ಕಾಯ್ದೆಗಳ ಹಿಂದಿರುವ ಧಾರ್ಮಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ತಳಮಟ್ಟದ ಸಮಾಜದ ಜನಸಮುದಾಯಗಳ ಬದುಕಿನಲ್ಲಿ ಇಂತಹ ಕಾಯ್ದೆಗಳು ಉಂಟುಮಾಡುವ ಆರ್ಥಿಕ ಸಂಕಷ್ಟಗಳು, ಸಾಮಾಜಿಕ ಕ್ಷೋಭೆ ಮತ್ತು ಸಾಂಸ್ಕೃತಿಕ ಇಕ್ಕಟ್ಟುಗಳನ್ನು ಗಮನದಲ್ಲಿಟ್ಟು ಇಡೀ ಕಾಯ್ದೆಯನ್ನು ಪರಾಮರ್ಶೆ ಮಾಡಬೇಕಿದೆ. ಈ ಎರಡೂ ಕಾಯ್ದೆಗಳು ಜಾರಿಯಲ್ಲಿರುವ ಎಲ್ಲ ರಾಜ್ಯಗಳಲ್ಲೂ ನ್ಯಾಯಾಂಗದ ಪ್ರವೇಶದ ಮೂಲಕವೇ ಅಂತಿಮ ಪರಿಹಾರ ಕಂಡುಬಂದಿದೆ. ಸಂವಿಧಾನವು ಈ ಕಾಯ್ದೆಗಳನ್ನು ಜಾರಿಗೊಳಿಸುವ ವಿವೇಚನಾ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡುವುದರಿಂದ, ಆಡಳಿತಾರೂಢ ಸರ್ಕಾರಗಳು ತಮ್ಮ ಸೈದ್ಧಾಂತಿಕ ಚಿಂತನೆಗಳಿಗನುಗುಣವಾಗಿ ನಡೆದುಕೊಳ್ಳುತ್ತವೆ. ಸರ್ಕಾರಗಳು ಬದಲಾದಂತೆಲ್ಲಾ ಈ ಕಾಯ್ದೆಗಳನ್ನೂ ಬದಲಾಯಿಸುವುದರ ಮೂಲಕ ಸಾಮಾಜಿಕ ಕ್ಷೋಭೆ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಮತ್ತಷ್ಟು ಜಟಿಲಗೊಳಿಸಿದಂತಾಗುತ್ತದೆ. ಎಲ್ಲ ಜನಸಮುದಾಯಗಳನ್ನೂ ಒಳಗೊಳ್ಳುವಂತಹ, ತಳಮಟ್ಟದ ಜನಜೀವನ ಮತ್ತು ಜೀವನೋಪಾಯದ ಮಾರ್ಗಗಳಿಗೆ ಧಕ್ಕೆ ಉಂಟುಮಾಡದಂತಹ ನೀತಿಯನ್ನು ಅನುಸರಿಸುವುದು ಪ್ರಜಾಸತ್ತಾತ್ಮಕ ಸರ್ಕಾರಗಳ ಆದ್ಯತೆಯಾಗಬೇಕಿದೆ. ಈ ಎರಡೂ ಕಾಯ್ದೆಗಳು ವಿವಿಧ ರೂಪದಲ್ಲಿ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದ್ದರೂ, ಇದರಿಂದ  ತಳಮಟ್ಟದ ಜನಜೀವನ ಮತ್ತು ಜೀವನೋಪಾಯದ ಮೇಲೆ ಉಂಟಾಗುವ ಭೀಕರ ಪರಿಣಾಮಗಳ ಬಗ್ಗೆ ಯಾವುದೇ ಸಮಾಜಶಾಸ್ತ್ರೀಯ ಅಧ್ಯಯನಗಳು ನಡೆಯದೆ ಇರುವುದು ಸೋಜಿಗ ಮೂಡಿಸುತ್ತದೆ.

 ಸರ್ಕಾರದ ನೈತಿಕ ಜವಾಬ್ದಾರಿ

ಈ ನಿಟ್ಟಿನಲ್ಲಿ ಹೊಸ ಸರ್ಕಾರವು ನಾಗರಿಕ ಸಮಾಜದ ವಿವಿಧ ಗುಂಪುಗಳೊಡನೆ, ಯಾವುದೇ ಮಡಿವಂತಿಕೆ ಅಥವಾ ಮೇಲರಿಮೆ ಇಲ್ಲದೆ, ಪೂರ್ವಗ್ರಹಗಳಿಲ್ಲದೆ ಸಂವಾದ ನಡೆಸಬೇಕಿದೆ. ವಿಶಾಲ ನಾಗರಿಕ ಸಮಾಜದಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜದ ಔನ್ನತ್ಯದ ಬಗ್ಗೆ ಯೋಚಿಸುವ ಮನಸುಗಳು ಹೇರಳವಾಗಿರುತ್ತವೆ. ಇಂತಹ ಮನಸುಗಳನ್ನು ಬೌದ್ಧಿಕವಾಗಿ ಒಳಗೊಳ್ಳುವ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಅರಿತು ಹೊಸ ಸಂಕಥನಗಳನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಿದೆ. ವಿಶಾಲ ಸಮಾಜದ ಔನ್ನತ್ಯದ ಪ್ರಶ್ನೆ ಎದುರಾದಾಗ ಎಡ-ಬಲ-ಮಧ್ಯ ಪಂಥೀಯ ರಾಜಕೀಯ ಸಿದ್ಧಾಂತಗಳನ್ನೂ ಮೀರಿದ ಸಾಮಾಜಿಕ ಸ್ವಾಸ್ಥ್ಯವು ಮುನ್ನೆಲೆಗೆ ಬರುತ್ತದೆ. ಹಿಜಾಬ್‌ ವಿವಾದದಲ್ಲಿ ಬಾಧಿತ ಹೆಣ್ಣುಮಕ್ಕಳು, ಮತಾಂತರದ ವಿವಾದದಲ್ಲಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ವ್ಯಕ್ತಿಗಳು, ಗೋ ಹತ್ಯೆ ವಿವಾದದಲ್ಲಿ ಗೋ ಸಾಕಣೆದಾರರು ಮತ್ತು ವ್ಯಾಪಾರಸ್ಥರು ಸಾರ್ವಜನಿಕ ಸಂಕಥನದಲ್ಲಿ ತಮ್ಮ ಅಸ್ತಿತ್ವವನ್ನೇ ಕಂಡುಕೊಳ್ಳಲಾಗಲಿಲ್ಲ. ಸರ್ಕಾರದ ನೀತಿ ನಿಯಮಗಳಿಂದ ಬಾಧಿತರಾಗುವ ಈ ಭಾಗಿದಾರರ ಅಭಿಪ್ರಾಯ ಸಾರ್ವಜನಿಕ ಸಂಕಥನದಲ್ಲಿ ಅಂಚಿಗೆ ತಳ್ಳಲ್ಪಟ್ಟು ಪ್ರಾತಿನಿಧಿಕ ಸಂಘಟನೆಗಳ ಧ್ವನಿಯೇ ಮುನ್ನೆಲೆಗೆ ಬರುವುದರಿಂದ ಪ್ರಜಾಪ್ರಭುತ್ವದ ಬೇರುಗಳು ಇನ್ನೂ ಬೇಗನೆ ಶಿಥಿಲವಾಗುತ್ತವೆ. ಈ ಪ್ರಾತಿನಿಧಿಕ ಸಂಘಟನೆಗಳಿಗೆ ವಿಶಾಲ ಸಮಾಜದ ಸ್ವಾಸ್ಥ್ಯ ಮತ್ತು ಯೋಗಕ್ಷೇಮಕ್ಕಿಂತಲೂ ತಮ್ಮ ಪ್ರಾತಿನಿಧ್ಯ, ಭವಿಷ್ಯ ಮತ್ತು ಅಸ್ತಿತ್ವಗಳೇ ಪ್ರಧಾನವಾಗಿಬಿಡುತ್ತವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾತಿನಿಧಿಕ ಅಭಿವ್ಯಕ್ತಿ ಎಷ್ಟೇ ಅಪ್ಯಾಯಮಾನವಾಗಿ ಕಂಡರೂ, ಅಂತಿಮವಾಗಿ ಕಟ್ಟಕಡೆಯ ಪ್ರಜೆಯ ಧ್ವನಿಯೇ ಸಾಂವಿಧಾನಿಕ ಮಾನ್ಯತೆ ಪಡೆಯಬೇಕಾಗುತ್ತದೆ. ಪ್ರತಿಯೊಂದು ಚುನಾಯಿತ ಸರ್ಕಾರದಲ್ಲೂ ಈ ಸೂಕ್ಷ್ಮ ಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿರಬೇಕಾಗುತ್ತದೆ. ಸಮಾಜದ ಅಂತರಂಗದ ನಾಡಿಮಿಡಿತವನ್ನು ಗ್ರಹಿಸುವ ಕಾರ್ಯಕ್ಷಮತೆ ಅಥವಾ ಮನೋಭಾವ ಇಲ್ಲದ ಸರ್ಕಾರಗಳು ಯಾವುದೋ ಒಂದು ನಿರ್ದಿಷ್ಟ ಸಮೂಹದ ಒತ್ತಾಸೆಗಳಿಗೆ ಮಣಿದು ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸುವಂತಹ ಆಡಳಿತ ನೀತಿಗಳನ್ನು ಜಾರಿಗೊಳಿಸುತ್ತವೆ. ಭಾರತದಂತಹ ಬಹುಸಾಂಸ್ಕೃತಿಕ ದೇಶಗಳಲ್ಲಿ ತಳಮಟ್ಟದ ಸಾಮಾಜಿಕ ನಾಡಿಮಿಡಿತವನ್ನು ಗ್ರಹಿಸಲು ಕೇವಲ ರಾಜಕೀಯ ಪ್ರಜ್ಞೆಯೊಂದೇ ಸಾಲದು. ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಗ್ರಹಿಸುವ, ಸಂವೇದನಾಶೀಲ ಚಿಂತನೆಗಳನ್ನು ರೂಢಿಸಿಕೊಂಡ ಹಾಗೂ ಎಲ್ಲರನ್ನೂ ಒಳಗೊಳ್ಳುವ ಮನೋಭಾವವನ್ನು ಮೈಗೂಡಿಸಿಕೊಂಡ ಒಂದು ಉದಾತ್ತ ಪ್ರಜ್ಞೆಯನ್ನು ಹೊಂದಿರಬೇಕಾಗುತ್ತದೆ. ರಾಜಕೀಯ ನಾಯಕರಲ್ಲಿ ಈ ಔದಾತ್ಯದ ಕೊರತೆಯೇ ಇಂದಿನ ಭಾರತದ ಎಲ್ಲ ಸಮಸ್ಯೆಗಳಿಗೂ ಕಾರಣವಾಗಿದೆ.

ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾಂವಿಧಾನಿಕ ಆಶಯಗಳು ಈಡೇರುವುದೆಂದರೆ ಈ ಬೌದ್ಧಿಕ ಔದಾತ್ಯದ ನೆಲೆಯಲ್ಲಿ ಆಡಳಿತ ನಡೆಸುವುದೇ ಆಗಿದೆ. ಕರ್ನಾಟಕದ ಜನತೆ ಆಯ್ಕೆ ಮಾಡಿರುವ ಹೊಸ ಸರ್ಕಾರ ಈ ಚಿಂತನಾವಾಹಿನಿಯ ಒಂದಂಶವನ್ನಾದರೂ ಅಳವಡಿಸಿಕೊಂಡು ಆಡಳಿತ ನಡೆಸಿದರೆ, ಬಹುಶಃ ಕರ್ನಾಟಕ ಮತ್ತೊಮ್ಮೆ “ ಸರ್ವಜನಾಂಗದ ಶಾಂತಿಯ ತೋಟ ”ದಂತೆ ನಳನಳಿಸುತ್ತದೆ.

(ಮುಂದುವರೆಯುತ್ತದೆ)

-೦-೦-೦-೦-

Donate Janashakthi Media

Leave a Reply

Your email address will not be published. Required fields are marked *