ಮಂಗಳೂರು: ಜಾಗದ ತಕರಾರಿನ ವಿಚಾರಕ್ಕೆ ಸಂಬಂಧಿಸಿದಂತೆ, ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಿಜೆಪಿ ಮುಖಂಡ ಸೇರಿದಂತೆ 9 ಮಂದಿ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಎಂಬಲ್ಲಿ ಘಟನೆ ನಡೆದಿದೆ. ನೆರೆಹೊರೆಯ ಮನೆಯವರ ಜಾಗದ ತಕರಾರಿನ ವಿಚಾರವಾಗಿ ಮಹಿಳೆಯರ ಬಟ್ಟೆ ಹರಿದು ಅರೆನಗ್ನಗೊಳಿಸಿ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ.
ಇದನ್ನು ಓದಿ: ಆದಿವಾಸಿ ಮಹಿಳೆ ಮೇಲೆ ಹಲ್ಲೆ-ಅರೆಬೆತ್ತಲೆಗೊಳಿಸಿ ವಿಡಿಯೋ: ದುಷ್ಕರ್ಮಿಗಳ ವಿರುದ್ಧ ಶೇಖರ್ ಲಾಯಿಲ ಆಕ್ರೋಶ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣಾ ಪೊಲೀಸರು ಬಿಜೆಪಿ ಎಸ್‌ಟಿ ಮೋರ್ಚಾದ ಅಧ್ಯಕ್ಷ ಸೇರಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಸುಗುಣ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರ ವಿರುದ್ದ ಐಪಿಸಿ 143, 147, 148, 323, 324, 504, 354, 354(B), 506, 149 ಅಡಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ್ದ 94ಸಿ ಅರ್ಜಿಯ ಅಳತೆಗೆಂದು ಅಧಿಕಾರಿಗಳು ಬಂದಿದ್ದರು. ಈ ಸಂದರ್ಭ ಜಾಗದ ಬಗ್ಗೆ ಇನ್ನೊಂದು ತಂಡ ತಕರಾರು ತೆಗೆದಿದೆ. ಇದರಿಂದಾಗಿ ಅಳತೆಗೆ ಬಂದ ಅಧಿಕಾರಿಗಳು ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಅಧಿಕಾರಿಗಳು ತೆರಳಿದ ಬಳಿಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತ ಮಹಿಳೆಯ ಸಹೋದರಿ ಸುರೇಖಾ ಮಾತನಾಡಿ, “94ಸಿ ಜಾಗಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಆದರೆ ಆ ಜಾಗಕ್ಕೆ ನೆರೆಹೊರೆಯವರ ಭಾರೀ ತಕರಾರು ಇತ್ತು. ಪಿಡಿಒ, ವಿಎ ಅಧಿಕಾರಿಗಳು ಜಾಗದ ಪರಿಶೀಲನೆಗೆ ಬಂದಿದ್ದರು. ಆದರೆ ಅಲ್ಲಿ ಮಾತಿಗೆ ಮಾತು ಬೆಳೆದಿದ್ದರಿಂದ ಪಿಡಿಒ ಮತ್ತು ಗ್ರಾಮ ಕರಣಿಕ ಅಧಿಕಾರಿಗಳು ಸ್ಥಳದಿಂದ ತೆರಳಿದ್ದರು” ಎಂದರು.
“ಆ ಬಳಿಕ ಸ್ಥಳೀಯ ಮುಖಂಡನ ಸೂಚನೆಯಂತೇ ಮಹಿಳೆಯರು ನನ್ನ ಸಹೋದರಿ ಮೇಲೆ ಹಲ್ಲೆ ಮಾಡಿದ್ದಾರೆ. ಬಟ್ಟೆಗಳನ್ನು ಹರಿದು ದೌರ್ಜನ್ಯ ಎಸಗಿದ್ದಾರೆ. ಈಗ ಕೇಸ್ ಹಿಂಪಡೆಯಲು ಒತ್ತಾಯ ಮಾಡಿದ್ದಾರೆ. ನಮಗೆ ನ್ಯಾಯ ಸಿಗಬೇಕು” ಎಂದು ಆಗ್ರಹಿಸಿದರು.
ಅರೆಬೆತ್ತಲೆಯಾಗಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ಥೆಯ ತಾಯಿಯ ಮೇಲೂ ಹಲ್ಲೆ ನಡೆದಿದೆ. ದುಷ್ಕರ್ಮಿಗಳ ತಂಡ ಅಲ್ಲಿಂದ ತೆರಳಿದ ಬಳಿಕವಷ್ಟೇ ಈ ಮಹಿಳೆಯರಿಗೆ ಮನೆಗೆ ಹೋಗಲು ಸಾಧ್ಯವಾಯಿತು ಎಂದು ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.