ಆದಿವಾಸಿ ಮಹಿಳೆ ಮೇಲೆ ಹಲ್ಲೆ-ಅರೆಬೆತ್ತಲೆಗೊಳಿಸಿ ವಿಡಿಯೋ: ದುಷ್ಕರ್ಮಿಗಳ ವಿರುದ್ಧ ಶೇಖರ್ ಲಾಯಿಲ ಆಕ್ರೋಶ

ಬೆಳ್ತಂಗಡಿ: ಸರ್ಕಾರಿ ಜಮೀನಿನಲ್ಲಿ ನಿವೇಶನದ ವಿಚಾರವಾಗಿ ದುಷ್ಕರ್ಮಿಗಳ ಗುಂಪೋಂದು ಆದಿವಾಸಿ ಸಮುದಾಯದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕ ರಸ್ತೆಯಲ್ಲಿ ಆಕೆಯ ಉಟ್ಟ ಬಟ್ಟೆಗಳನ್ನು ಹರಿದು ಹಾಕಿ ಅರೆಬೆತ್ತಲೆಗೊಳಿಸಿ ಕೇಕೆ ಹಾಕಿದ್ದಲ್ಲದೆ, ವಿಡಿಯೋ ಚಿತ್ರೀಕರಣ ಮಾಡಿದ ಹೃದಯವಿದ್ರಾವಕ ಘಟನೆಯೊಂದು ಉಜಿರೆ ಗ್ರಾಮದ ಅಳಕೆ ಎಂಬಲ್ಲಿ ನಡೆದಿದೆ.

ಅಮಾನವೀಯ ಘಟನೆಯನ್ನು ಖಂಡಿಸಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ. ಆದಿವಾಸಿಗಳ ಮೇಲೆ ದಾಳಿ ನಡೆಸಿ ಮಹಿಳೆಯನ್ನು ಅರಬೆತ್ತಲೆಗೊಳಿಸಿದ ಕೃತ್ಯ ಅತ್ಯಂತ ಅಮಾನವೀಯವಾದುದು. ಇದರ ನೇತೃತ್ವವನ್ನು ಬಿಜೆಪಿ ಎಸ್‌ಟಿ ಮೋರ್ಚಾದ ಅಧ್ಯಕ್ಷ ವಹಿಸಿರುವುದು, ಮಹಿಳೆಯರನ್ನು ಮಾತೆ, ದೇವತೆ ಎನ್ನುವವರ ನಿಜ ಬಣ್ಣ ಬಯಲಾಗಿದೆ ಎಂದು ಖಂಡಿಸಿದೆ.

ಉಜಿರೆ ಗ್ರಾಮದಲ್ಲಿ ನಡೆದ ಈ ಅಮಾನವೀಯ ಕೃತ್ಯ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮಹಿಳೆಯರನ್ನು ಮಾತೆ, ದೇವತೆ ಎನ್ನುವ ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಎಂಬಾತನ ನೇತೃತ್ವದಲ್ಲಿ ಮಹಿಳೆಯನ್ನು ನಡು ರಸ್ತೆಯಲ್ಲಿ ಅರಬೆತ್ತಲೆಗೊಳಿಸಿರುವುದು ರಾಮರಾಜ್ಯದ ಪರಿಕಲ್ಪನೆಯೇ? ಮಹಿಳೆಯರರನ್ನು ಗೌರವಿಸುವ ಮೇಲ್ನೋಟದ ಹೇಳಿಕೆಗಳು ನಿಮ್ಮ ಕಪಟ ನಾಟಕವೇ? ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಶಾಸಕ ಹರೀಶ್ ಪೂಂಜಾರ ಮೌನ ಮಹಿಳೆಯನ್ನು ನಡು ಬೀದಿಯಲ್ಲಿ ಅರಬೆತ್ತಲೆಗೊಳಿಸಿರುವುದಕ್ಕೆ ಮೌನ ಸಮ್ಮತಿಯೇ ? ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಸಂಘಪರಿವಾರದ ಸಂಘಟನೆಗಳ ಹೋರಾಟ ಏಕಿಲ್ಲ? ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಪ್ರಶ್ನಿಸಿದ್ದಾರೆ.

ಈ ಘಟನೆ ಉತ್ತರ ಪ್ರದೇಶ, ಗುಜರಾತ್ ಮಾದರಿಯಂತಿದೆ , ಇಂತಹ ಘಟನೆಯ ಹಿಂದೆ ಶಾಸಕ ಹರೀಶ್ ಪೂಂಜಾರ ಮುಂದಿನ ಚುನಾವಣಾ ರಾಜಕೀಯದ ಹಿಡನ್ ಅಜೆಂಡಾ ಅಡಗಿದೆ. ತಪ್ಪಿತಸ್ಥ ಆರೋಪಿಗಳನ್ನು 36 ಘಂಟೆಗಳಲ್ಲಿ ಬಂಧಿಸದಿದ್ದರೆ ಪೊಲೀಸ್ ಠಾಣೆ ಚಲೋ ಕಾರ್ಯಕ್ರಮ ಹಮ್ಮಿಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ

ಏ.19 ರಂದು ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ್ದ 94ಸಿ ಅರ್ಜಿಯ ಅಳತೆಗೆಂದು ಅಧಿಕಾರಿಗಳು ಬಂದಿದ್ದರು. ಈ ಸಂದರ್ಭ ಜಾಗದ ಬಗ್ಗೆ ಒಂದು ಗುಂಪು ತಕರಾರು ತೆಗೆದಿದೆ. ಇದರಿಂದಾಗಿ ಅಳತೆಗೆ ಬಂದವರು ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಅಧಿಕಾರಿಗಳು ತೆರಳಿದ ಬಳಿಕ ಸಾರ್ವಜನಿಕ ರಸ್ತೆಯಲ್ಲಿ ನಿಂತಿದ್ದ ಮಹಿಳೆಯರ ಮೇಲೆ ಗುಂಪೊಂದು ಧಾಳಿ ನಡೆಸಿದೆ.

ಮಹಿಳೆಯರೂ ಇದ್ದ ತಂಡ ಮೊದಲು ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅಕ್ಕನ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ನೋಡಿ ಅಕ್ಕನ ರಕ್ಷಣೆಗೆ ತೆರಳಿದ ತಂಗಿಯ ಮೇಲೆಯೂ ಮುಗಿಬಿದ್ದು ಆಕೆಯ ಬಟ್ಟೆಗಳನ್ನು ಸಂಪೂರ್ಣವಾಗಿ ಹರಿದು ಹಾಕಿದ್ದಾರೆ. ಅಲ್ಲದೆ ಅನಾಗರಿಕರಂತೆ ಕೇಕೆ ಹಾಕಿ ಅರೆಬೆತ್ತಲೆಯಾಗಿದ್ದ ಮಹಿಳೆಯ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಮನೆಯ ಕಡೆಗೆ ಹೋಗಲೂ ಬಿಡದೆ ಹಲ್ಲೆ ಮಾಡಿದ್ದಾರೆ.

ಇದನ್ನು ನೋಡಿ ಬಂದ ಆಕೆಯ ತಾಯಿಯ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಅಲ್ಲಿಂದ ತೆರಳಿದ ಬಳಿಕವಷ್ಟೇ ಈ ಮಹಿಳೆಯರಿಗೆ ಮನೆಗೆ ಹೋಗಲು ಸಾಧ್ಯವಾಯಿತು ಎಂದು ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ಸುಮಾರು ಮೂವತ್ತಕ್ಕೂ ಅಧಿಕ ಜನರಿದ್ದರು ಆದರೆ, ಯಾರೂ ಅದನ್ನು ತಡೆಯಲು ಮುಂದಾಗಿಲ್ಲ. ಉಜಿರೆ ಗುರಿಪಳ್ಳ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು‌, ಹತ್ತಾರು ವಾಹನಗಳು ಸಂಚಾರ ನಡೆಸಿದರೂ ಸಹ ಪ್ರಯಾಣಿಕರು ಇದೆಲ್ಲ ನೋಡಿಕೊಂಡು ಹೋಗಿದ್ದಾರೆ. ಆದರೆ ಯಾರೂ ನಮ್ಮ ನೆರವಿಗೆ ಬರಲಿಲ್ಲ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ ದೌರ್ಜನ್ಯಕ್ಕೀಡಾದ ಮಹಿಳೆಯರು.

ಘಟನೆಗೆ ಸಂಬಂಧಿಸಿದಂತೆ, ಅಳಕೆ ನಿವಾಸಿ ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರು ಈ ಕೃತ್ಯವನ್ನು ಎಸಗಿದವರು ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *