ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣ : ಆರೋಪಿ ಆದಿತ್ಯ ರಾವ್‌ಗೆ 25 ವರ್ಷ ಜೈಲು ಶಿಕ್ಷೆ

ಮಂಗಳೂರು: 2020, ಜನವರಿ 20ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(MIA) ಇಟ್ಟಿದ್ದ ಆದಿತ್ಯ ರಾವ್ ದೋಷಿ ಎಂದಿರುವ ಸ್ಥಳೀಯ ನ್ಯಾಯಾಲಯ, ಅಪರಾಧಿಗೆ ಬುಧವಾರ 25 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಪ್ರಕರಣದಲ್ಲಿ ಪ್ರತ್ಯೇಕ ಎರಡು ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಆದಿತ್ಯ ರಾವ್​ಗೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967 ರ ಸೆಕ್ಷನ್ 16 ಅಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10000 ದಂಡ ವಿಫಲವಾದರೆ 6 ತಿಂಗಳ ಸರಳ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4 ರ ಪ್ರಕಾರ 5 ವರ್ಷಗಳ ಕಠಿಣ ಸೆರೆವಾಸ ಮತ್ತು 10000 ರೂ. ದಂಡ, ವಿಫಲವಾದರೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಅನುಭವಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕವನ್ನಿರಿಸಿ ಆರೋಪಿ ಆದಿತ್ಯ ರಾವ್ ನಾಪತ್ತೆಯಾಗಿ ಬಳಿಕ ಬೆಂಗಳೂರಿನಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ನಂತರ ಹೆಚ್ಚಿನ ವಿಚಾರಣೆಗೆ ಆತನನ್ನು ಮಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಆದಿತ್ಯ ವಿರುದ್ಧ 700 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಆತ ಮಾನಸಿಕ ಅಸ್ವಸ್ಥ ಎಂದು ಆಗ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದರು.

ಉಡುಪಿ‌ ಜಿಲ್ಲೆಯ ಮಣಿಪಾಲ ಮೂಲದ ಆದಿತ್ಯ ರಾವ್, ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, 2018ರಲ್ಲಿ ಬೆಂಗಳೂರು ಏರ್​ಪೋರ್ಟ್​ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ಇದರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಆದಿತ್ಯ ರವ್, ಅನೇಕ ಬಾರಿ ಏರ್​ಪೋರ್ಟ್​​ಗೆ ಕರೆ ಮಾಡಿ ಬಾಂಬ್ ಇರಿಸಿದ್ದಾಗಿ ಹೇಳಿದ್ದ. ಹೀಗೆ ಹಲವು ಬಾರಿ ಹುಸಿ ಬಾಂಬ್ ಕರೆ ನೀಡಿದ್ದ ಈತ ಒಮ್ಮೆ ನಿಜವಾಗಿಯೂ ಬಾಂಬ್ ಇರಿಸಿದ್ದ. ಈ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು.

Donate Janashakthi Media

Leave a Reply

Your email address will not be published. Required fields are marked *