ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಶಾಸಕರು ಕುಮ್ಮಕ್ಕು: ಆದಿನಾರಾಯಣರೆಡ್ಡಿ

ಗುಡಿಬಂಡೆ: ತಾಲೂಕಿನಲ್ಲಿ  ಸರ್ಕಾರಿ ಕಛೇರಿಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರಕ್ಕೆ ಸ್ಥಳೀಯ ಶಾಸಕರು ಕುಮ್ಮಕ್ಕು ನೀಡುತ್ತಿರುವುದರಿಂದ ಭ್ರಷ್ಟಾಚಾರ ನಡೆಯಲು ಮೂಲ ಕಾರಣ ಎಂದು ಕೋಚಿಮಲ್ ನಿರ್ದೇಶಕ ಆದಿನಾರಾಯಣರೆಡ್ಡಿ ಗಂಭೀರ ಆರೋಪ ಮಾಡಿದರು.

ಪಟ್ಟಣದಲ್ಲಿನ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂಭಾಗ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ತಾಲೂಕು ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಆದಿನಾರಾಯಣರೆಡ್ಡಿ, ಕ್ಷೇತ್ರದಲ್ಲಿನ ಶಾಸಕರು ಅಧಿಕಾರಿಗಳ ಮೇಲೆ ಹಿಡಿತವಿಲ್ಲದೇ ಇರುವುದರಿಂದ ಗ್ರಾಮ ಪಂಚಾಯಿತಿಗಳಲ್ಲಿನ ಪಿಡಿಒಗಳು ವ್ಯಾಪಕ ಭ್ರಷ್ಟಚಾರವನ್ನು ಮಾಡಲು ಸಾಧ್ಯವಾಗುತ್ತಿದೆ. ಒಂದು ಖಾಸಗಿ ಸುದ್ದಿ ಮಾಧ್ಯಮದ ಗೌಪ್ಯ ಕಾರ್ಯಾಚರಣೆ ನಡೆಸಿದ್ದು, ಪಿಡಿಒಗಳು ಹಾಗೂ ಇಒ ಮಾಡುತ್ತಿರುವ ಭ್ರಷ್ಟಾಚಾರದ ವ್ಯವಹಾರದ ಸುದ್ದಿಯನ್ನು ಪ್ರಚಾರ ಮಾಡಿದ್ದನ್ನು ನೋಡಿದರೇ ಗೊತ್ತಾಗುತ್ತದೆ. ತಾಲೂಕಿನಲ್ಲಿ ಅಧಿಕಾರಿಗಳ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಇದೇ ಅಂತ. ಅವರನ್ನು ಅಮಾನತ್ತು ಮಾಡುವುದಲ್ಲದೇ ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಸಿಪಿಐ(ಎಂ) ಪಕ್ಷದ ತಾಲೂಕು ಕಾರ್ಯದರ್ಶಿ ಹೆಚ್ ಪಿ ಲಕ್ಷ್ಮೀನಾರಾಯಣ ಮಾತನಾಡಿ, ಶಾಸಕರು ಹಾಗೂ ಅವರ ಭಾಮೈದರ ಬೆಂಬಲದಿಂದ  ಸರ್ಕಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕ್ಷೇತ್ರದ ಜನತೆಗೆ ತಿಳಿದಿರುವ ವಿಷಯ. ಅಭಿವೃದ್ದಿ ಕೆಲಸಗಳ ಕಳಪೆ ಗುತ್ತಿಗೆದಾರರಿಂದ ಪರ್ಸೇಂಟೇಜ್ ತೆಗೆದುಕೊಳ್ಳುತ್ತಿರುವುದರಿಂದ ಕಾಮಗಾರಿಗಳು ಕಳಪೆಯಾಗುತ್ತಿವೆ. ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ನೋಡಲೇ ಇಲ್ಲ. ಪಿಡಿಒ ಮತ್ತು ಇಒರವರನ್ನು ಅಮಾನತ್ತು ಮಾಡುವುದು ಅಲ್ಲದೇ ಸೇವೆಯಿಂದಲೇ ಅಮಾನತ್ತು ಮಾಡಬೇಕು. ನಿರುದ್ಯೋಗ ಜಾಸ್ತಿ ಇದೇ ಅಂಥವರನ್ನು ಗುರುತಿಸಿ ಸರ್ಕಾರಿ ಕೆಲಸಗಳನ್ನು ನೀಡಲು ಆಗಬೇಕು. ಸರ್ಕಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಬೇಕು ಇಲ್ಲವಾದರೇ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಗಳ ಮುಂದೆ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನಾಕಾರರು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ದ ಹಾಗೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಈ ವೇಳೆ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ತಾಲೂಕು ಸಮಿತಿ ಸದಸ್ಯ ಪೋಲಂಪಲ್ಲಿ ಮಂಜುನಾಥ್, ವರ್ಲಕೊಂಡ ಬಾಬು, ಹಂಪಸಂದ್ರ ರಾಜು, ನಾಗರಾಜು, ಶ್ರೀನಿವಾಸ್ ಮುಖಂಡರಾದ ರಹಮತ್, ದೇವರಾಜು, ಸೋಮೇಹಳ್ಳಿ ಅಶ್ವತ್ಥಪ್ಪ, ರಾಮಮೂರ್ತಿ, ಹಂಪಸಂದ್ರ ಅಶ್ವತ್ಥಪ್ಪ, ರಮಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

 

ವರದಿ : ಎಲ್‌.ಈಶ್ವರಪ್ಪ

Donate Janashakthi Media

Leave a Reply

Your email address will not be published. Required fields are marked *