ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ವ್ಯಾಪಕ ಭ್ರಷ್ಟಾಚಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ರವರಿಗೆ ವರ್ಗಾವಣೆ ಮಾಡಿಸುವುದಾಗಿ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಯವರು ಪರೋಕ್ಷವಾಗಿ ನ್ಯಾಯಮೂರ್ತಿಗಳಿಗೆ ಬೆದರಿಸಿರುವುದು ನ್ಯಾಯಾಂಗದ ಸ್ವತಂತ್ರ ಕಾರ್ಯನಿರ್ವಹಣೆಗೆ ನೇರವಾಗಿ ಹಾಕಿರುವ ಬೆದರಿಕೆಯಾಗಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟ ತಿಳಿಸಿದೆ.
ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎಐಎಲ್‌ಯು ರಾಜ್ಯ ಅಧ್ಯಕ್ಷ ಎಸ್. ಶಂಕರಪ್ಪ ಅವರು, ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ರವರ ಮುಕ್ತ ಹಾಗೂ ನಿರ್ಭೀತವಾಗಿ ನ್ಯಾಯಾಂಗದ ಕರ್ತವ್ಯವನ್ನು ನಿರ್ವಹಿಸಲು, ನ್ಯಾಯಮೂರ್ತಿಗಳು ತೆಗೆದುಕೊಂಡಿರುವ ನಿಲುವನ್ನು ಅಖಿಲ ಭಾರತ ವಕೀಲರ ಒಕ್ಕೂಟ ಬೆಂಬಲಿಸುತ್ತದೆ ಎಂದಿದ್ದಾರೆ.
ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸ್ವತಂತ್ರ ಕಾರ್ಯ ನಿರ್ವಹಣೆಗೆ ಬೇಕಾದ ಯಂತ್ರಾಂಗವನ್ನು ರೂಪಿಸಿದ್ದರು ಸಹ ಎಡಿಜಿಪಿ ಹೇಮಂತ್ ಕುಮಾರ್ ಸಿಂಗ್ ತರಹದ ಉನ್ನತ ಅಧಿಕಾರಿಗಳು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ರವರಿಗೆ ಬೆದರಿಸುವಷ್ಟು ಧೈರ್ಯ ತೋರಿಸುತ್ತಿರುವುದು ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದಿರುವುದರ ದ್ಯೋತಕವಾಗಿದ್ದು, ಕೂಡಲೇ ಎಡಿಜಿಪಿ ಹೇಮಂತ್ ಕುಮಾರ್ ಸಿಂಗ್ ರವರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಎಐಎಲ್‌ಯು ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ್ ಅವರು, ಸರ್ಕಾರದ ಎಡಿಜಿಪಿ ಯಂತಹ ಉನ್ನತ ಅಧಿಕಾರಿ ಹೈಕೋರ್ಟ್ ನ್ಯಾಯಮೂರ್ತಿಯವರಿಗೆ ಬೆದರಿಕೆ ಹಾಕಿದ್ದರು ಸಹ ಅವರಂತಹ ಅಧಿಕಾರಿಯನ್ನು ನಿಯಂತ್ರಿಸಲು ಸಾಧ್ಯವಾಗದಿರುವ ಸರ್ಕಾರದ ಗೃಹ ಸಚಿವರು ತಕ್ಷಣ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ರವರಿಗೆ ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಎಂದು ಆಗ್ರಹಿಸಿದ್ದಾರೆ.
ಸರ್ಕಾರ ನ್ಯಾಯಾಂಗದ ಸ್ವತಂತ್ರ ನ್ಯಾಯಾವಿತರಣಾ ವ್ಯವಸ್ಥೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲವೆಂದು ಆಶ್ವಾಸನೆಯನ್ನು ನೀಡಿ, ಜನರ ದೃಷ್ಟಿಯಲ್ಲಿ ಜನರು ನ್ಯಾಯ ವಿತರಣಾ ವ್ಯವಸ್ಥೆ ಬಗ್ಗೆ ವಿಶ್ವಾಸ ಕಳೆದುಕೊಳ್ಳದಂತೆ ಆಸ್ವಾಸನೆ ನೀಡಬೇಕಾಗಿ ಅಖಿಲ ಭಾರತ ವಕೀಲರ ಒಕ್ಕೂಟ ಆಗ್ರಹವಾಗಿದೆ.