- ಗೌರಿ-ಗಣೇಶ ಹಬ್ಬಕ್ಕೆ ಹೆಚ್ಚುವರಿ 500 ಬಸ್ ಸಂಚಾರ
- ಕೆಎಸ್‌ಆರ್‌ಟಿಸಿಯಿಂದ ಪ್ರಯಾಣಿಕರಿಗೆ ಸೌಲಭ್ಯ
- ಬೆಂಗಳೂರಿನಿಂದ ಹೊರಜಿಲ್ಲೆ, ಹೊರರಾಜ್ಯಗಳಿಗೆ ಸಂಚಾರ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಗೌರಿ ಗಣೇಶ ಹಬ್ಬದ ಪ್ರಯುಕ್ತ ಆ.29 ಮತ್ತು 30ರಂದು ಬೆಂಗಳೂರಿನಿಂದ ರಾಜ್ಯ ಮತ್ತು ಹೊರ ರಾಜ್ಯದ ನಾನಾ ಪ್ರದೇಶಗಳಿಗೆ ಹೆಚ್ಚುವರಿಯಾಗಿ 500 ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಹಾಗೆಯೇ, ಆ. 31ರಂದು ರಾಜ್ಯ ಮತ್ತು ಹೊರ ರಾಜ್ಯದ ನಾನಾ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಸೇವೆ ಒದಗಿಸಲಾಗಿದೆ.
ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ಸಿಗಲಿದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಾರಿಗೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಗಣೇಶ ಚತುರ್ಥಿಯನ್ನು ಆಚರಿಸಲು ತಮ್ಮತಮ್ಮ ಊರುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಜನರಿಗೆ ಸೂಕ್ತ ಸಾರಿಗೆ ಸೌಲಭ್ಯವನ್ನು ಒದಗಿಸಲು, ನೂಕುನುಗ್ಗಲಿಲ್ಲದೆ ಪ್ರಯಾಣಿಸಲು ಸುಲಭವಾಗಲೆಂದು ಕೆಎಸ್‌ಆರ್‌ಟಿಸಿ ಈ ಕ್ರಮವನ್ನು ಕೈಗೊಂಡಿದೆ. ಕೆಎಸ್‌ಆರ್‌ಟಿಸಿ ಹೊರಡಿಸಿರುವ ವಿಶೇಷ ಬಸ್‌ಗಳು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ತಿರುಪತಿ, ವಿಜಯವಾಡ, ಹೈದರಬಾದ್ ಮುಂತಾದ ಸ್ಥಳಗಳಿಗೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ.
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ನಿಲ್ದಾಣದಿಂದ ವಿಶೇಷ ಬಸ್‌ಗಳು ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮರ್ಕಾರ ಕಡೆಗೆ ಪ್ರತ್ಯೇಕವಾಗಿ ಚಲಿಸಲಿವೆ. ಶಾಂತಿನಗರ(ಟಿಟಿಎಂಸಿ) ಯಿಂದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮ್ಮತ್ತೂರು, ತಿರುಚ್ಚಿ, ಪಾಲಕ್ಕಾಡ್ ಮುಂತಾದ ತಮಿಳುನಾಡು ಮತ್ತು ಕೇರಳ ರಾಜ್ಯದ ಇತರ ಸ್ಥಳಗಳಿಗೆ ಎಲ್ಲಾ ಪ್ರೀಮಿಯರ್ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ಸೆಪ್ಟೆಂಬರ್ 1 ಮತ್ತು 2ನೇ ತಾರೀಕಿನಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ವ್ಯವಸ್ತೆಯನ್ನು ಕೆಎಸ್‌ಆರ್‌ಟಿಸಿ ನಿಯೋಜಿಸಿದೆ ಮತ್ತು ಕರ್ನಾಟಕ ಸರ್ಕಾರ ಹೊರಡಿಸಿರುವ ಕೋವಿಡ್-19ರ ಮಾರ್ಗಸೂಚಿಗಳನ್ನು ಪ್ರಯಾಣಿಕರು ತಪ್ಪದೆ ಪಾಲಿಸಬೇಕೆಂದು ಮನವಿ ಮಾಡಿದೆ.