ಮುಂಬೈ: ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಇತ್ತೀಚೆಗೆ ಹೊಸ ತನಿಖಾ ವರದಿಯನ್ನು ಪ್ರಕಟಿಸಿದ್ದು, ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಹೊಸ ಆರೋಪಗಳನ್ನು ಮಾಡಿದೆ. ಅದಾನಿ ಗ್ರೂಪ್ನಿಂದ ಭಾರತೀಯ ಷೇರು ಮಾರುಕಟ್ಟೆ ನಿಯಮಗಳ ಸಂಭಾವ್ಯ ಉಲ್ಲಂಘನೆ ನಡೆದಿದೆ ಎಂದು ವರದಿಯು ಬಹಿರಂಗಪಡಿಸಿದೆ. ದಿ ಫೈನಾನ್ಷಿಯಲ್ ಟೈಮ್ಸ್ ಮತ್ತು ದಿ ಗಾರ್ಡಿಯನ್ ಸಹಯೋಗದೊಂದಿಗೆ ಮಾಡಲಾಗಿರುವ ವರದಿಯು, ಮಾರಿಷಸ್ ಮೂಲದ ಅಪಾರದರ್ಶಕ ಹೂಡಿಕೆ ನಿಧಿಗಳ ಮೂಲಕ ಅದಾನಿ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿರುವ ಇಬ್ಬರು ವ್ಯಕ್ತಿಗಳು ಸಂಘಟಿತ ಷೇರುಗಳಲ್ಲಿ ಮಾಡಿದ ಗಮನಾರ್ಹ ಹೂಡಿಕೆಗಳ ಮೇಲೆ ಬೆಳಕು ಚೆಲ್ಲಿದೆ.
ತೈವಾನ್ನ ಚಾಂಗ್ ಚುಂಗ್-ಲಿಂಗ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನ ನಾಸರ್ ಅಲಿ ಶಬಾನ್ ಅಹ್ಲಿ ಎಂಬ ವಿವಾದಿತ ವ್ಯಕ್ತಿಗಳಿಬ್ಬರು ಅದಾನಿ ಕುಟುಂಬದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಅದಾನಿ ಗ್ರೂಪ್ ಕಂಪನಿಗಳಲ್ಲಿ ನಿರ್ದೇಶಕರು ಮತ್ತು ಷೇರುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಈ ಇಬ್ಬರೂ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿಯೊಂದಿಗೆ ಆಪ್ತ ಸಂಬಂಧಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಮೋದಿ ಭಾರತದಲ್ಲಿ ಅದಾನಿ ಏಳು-ಬೀಳು ದೇಶಕ್ಕೆ ಬಂಟತನದ ಕೇಡುಗಳ ಕತೆ
ಚಾಂಗ್ ಚುಂಗ್ ಮತ್ತು ಶಬಾನ್ ಅಹ್ಲಿ ಮಾರಿಷಸ್ ನಿಧಿಗಳಿಗೆ ಗಣನೀಯ ಪ್ರಮಾಣದ ಹಣವನ್ನು ಹರಿಸಿದ್ದಾರೆ ಎಂದು ದಾಖಲೆಗಳು ಸೂಚಿಸುತ್ತವೆ ಎಂದು OCCRP ವರದಿ ಉಲ್ಲೇಖಿಸಿದೆ. ಈ ಹಣವನ್ನು ನಂತರ 2013 ಮತ್ತು 2018 ರ ನಡುವೆ ಅದಾನಿ ಪವರ್, ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಟ್ರಾನ್ಸ್ಮಿಷನ್ಸ್ ಸೇರಿದಂತೆ ಅದಾನಿಯ ಪ್ರಮುಖ ಕಂಪನಿಗಳ ವ್ಯಾಪಾರ ಷೇರುಗಳಿಗೆ ಬಳಸಲಾಯಿತು ಎಂದು ವರದಿ ಹೇಳಿದೆ.
ಚಾಂಗ್ ಚುಂಗ್ ಮತ್ತು ಶಬಾನ್ ಅಹ್ಲಿಯ ಹೂಡಿಕೆಗಳ ಮೂಲವನ್ನು ಅದಾನಿ ಕುಟುಂಬಕ್ಕೆ ನೇರವಾಗಿ ಸಂಪರ್ಕಿಸುವ ಯಾವುದೇ ಪುರಾವೆಗಳಿಲ್ಲದಿದ್ದರೂ, ಅವರಿಬ್ಬರು ಮತ್ತು ಅದಾನಿ ಕುಟುಂಬದ ನಡುವೆ ಸಂಘಟಿತ ವ್ಯಾಪಾರ ಚಟುವಟಿಕೆಗಳು ನಡೆದಿವೆ ಎಂದು OCCRP ವರದಿ ಆರೋಪಿಸಿದೆ. 2017ರ ಮಾರ್ಚ್ನಲ್ಲಿ ಅದಾನಿ ಗ್ರೂಪ್ ಷೇರುಗಳಿಗೆ ಈ ಇಬ್ಬರು ವ್ಯಕ್ತಿಗಳು 430 ಮಿಲಿಯನ್ ಡಾಲರ್ವರೆಗಿನ ಮೌಲ್ಯದ ಹೂಡಿಕೆ ಮಾಡಿದ್ದಾಗ ವರದಿ ಹೇಳಿದೆ.
ಇದನ್ನೂ ಓದಿ: ಜನರ ಬೆವರಲ್ಲಿ ಕಟ್ಟಿದ ವಿದ್ಯುತ್ ಕ್ಷೇತ್ರವನ್ನು ಅದಾನಿ – ಅಂಬಾನಿಗೆ ಮಾರಲು ಹೊರಟ ಸರ್ಕಾರ : ಮಹಮ್ಮದ್ ಸಮೀವುಲ್ಲಾ ಕಿಡಿ
ಇಬ್ಬರು ವ್ಯಕ್ತಿಗಳು ಹೂಡಿಕೆಯು ಸೆಕ್ಯುರಿಟೀಸ್ ಕಾಂಟ್ರಾಕ್ಟ್ (ನಿಯಂತ್ರಣ) ಕಾಯಿದೆಯ ಸಂಭಾವ್ಯ ಉಲ್ಲಂಘನೆ ಮಾಡುತ್ತದೆ ಎಂದು ವರದಿಯು ಹೇಳಿದೆ. ಈ ಕಾಯಿದೆಯು ಪಟ್ಟಿ ಮಾಡಲಾಗಿರುವ ಕಂಪನಿಗಳಲ್ಲಿ ಕನಿಷ್ಠ 25% ಸಾರ್ವಜನಿಕ ಷೇರುಗಳು ಹೊಂದಿರುವುದು ಕಡ್ಡಾಯವಾಗಿದೆ ಎಂದು ಹೇಳುತ್ತದೆ.
ಅದಾನಿ ಸ್ಟಾಕ್ಗಳ ವಹಿವಾಟು ನಡೆಸಿರುವ ಚಾಂಗ್ ಚುಂಗ್ ಮತ್ತು ಶಬಾನ್ ಅಹ್ಲಿ ಷೇರುಗಳ ಬೆಲೆಯನ್ನು ತಿರುಚಿದ್ದಾರೆ ಎಂಬ ಆರೋಪಗಳು ಎದ್ದಿವೆ. ಕಂಪನಿಯ 75% ಕ್ಕಿಂತ ಹೆಚ್ಚು ಷೇರುಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಕೃತಕ ಕೊರತೆ ಉಂಟಾಗಲಿದ್ದು, ಇದರಿಂದಾಗಿ ಷೇರು ಬೆಲೆಗಳನ್ನು ಮತ್ತು ಮಾರುಕಟ್ಟೆ ಬಂಡವಾಳೀಕರಣವನ್ನು ಹೆಚ್ಚಿಸಬಹುದಾಗಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಚಾಂಗ್ ಚುಂಗ್ ಮತ್ತು ಶಬಾನ್ ಅಹ್ಲಿ ಅವರು ಅದಾನಿ ಕಂಪೆನಿಗಳ ಮೇಲೆ ಅತೀ ಹೆಚ್ಚು ಹೂಡಿಕೆ ಮಾಡಿದ್ದ ವೇಳೆ ನಾಲ್ಕು ಅದಾನಿ ಕಂಪನಿಗಳ 8% ಮತ್ತು 13.5% ನಡುವಿನ ಮುಕ್ತ ಫ್ಲೋಟಿಂಗ್ ಷೇರುಗಳನ್ನು ನಿಯಂತ್ರಿಸಿದ್ದಾರೆ ಎಂದು OCCRP ವರದಿ ಸೂಚಿಸಿದೆ.
ಇದನ್ನೂ ಓದಿ: “ಮೋದಿ-ಅದಾನಿ-ನೀತಿ ಆಯೋಗದ ಕೃಷಿಯ ಕಾರ್ಪೊರೇಟೀಕರಣದ ಕುತಂತ್ರ ಬಯಲು”
ಇತ್ತೀಚೆಗಷ್ಟೆ ಅಮೇರಿಕದ ಹೂಡಿಕೆ ಸಂಸ್ಥೆಯಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕೂಡಾ OCCRP ವರದಿಯದೇ ರೀತಿಯ ಆರೋಪವನ್ನು ಮಾಡಿತ್ತು. ”ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರು ಮಾರುಕಟ್ಟೆಯನ್ನು ತಿರುಚಲು ಮತ್ತು ಮನಿ ಲಾಂಡರಿಂಗ್ನಂತಹ ಉದ್ದೇಶಗಳಿಗಾಗಿ ವಿದೇಶಗಳಲ್ಲಿ ಶೆಲ್ ಘಟಕಗಳ ಜಾಲವನ್ನು ರಚಿಸುತ್ತಿದ್ದಾರೆ ಮತ್ತು ಅದನ್ನು ನಿರ್ವಹಿಸುತ್ತಿದ್ದಾರೆ” ಎಂದು ಹಿಂಡೆನ್ಬರ್ಗ್ ವರದಿಯು ಆರೋಪಿಸಿತ್ತು.
ಹಿಂಡೆನ್ಬರ್ಗ್ ವರದಿಯಲ್ಲಿನ ಆರೋಪಗಳನ್ನು ಅದಾನಿ ಗ್ರೂಪ್ ತಿರಸ್ಕರಿಸಿದರೂ, ವರದಿಯ ನಂತರ ಕಂಪನಿಯ ಷೇರು ಬೆಲೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು ಹಾಗೂ ಭಾರಿ ಇಳಿಕೆ ಕಂಡಿತ್ತು. OCCRP ವರದಿಗೆ ಕೂಡಾ ಅದಾನಿ ಗ್ರೂಪ್ ಪ್ರತಿಕ್ರಿಯಿಸಿದ್ದು, ಆರೋಪಗಳನ್ನು ನಿರಾಕರಿಸಿದೆ.
ವಿಡಿಯೊ ನೋಡಿ: ಹಿಂಡೆನ್ಬರ್ಗ್ ರಿಸರ್ಚ್ನ ವರದಿಯಲ್ಲಿ ಏನಿದೆ?ಇದು ಬೃಹತ್ ಹಣಕಾಸು ವಂಚನೆಯ ಜಾಲವೇ?! || Janashakthi Media