ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಶಾಸಕರ ಪ್ರತಿಭಟನೆ: ಸಿದ್ದರಾಮಯ್ಯ ಸಲಹೆಯಿಂದ ಧರಣಿ ವಾಪಸ್‌

ಬೆಂಗಳೂರು: ಪಂಚಮಸಾಲಿ ಸಮುದಾಯದ ಮೀಸಲಾತಿ ಬಗ್ಗೆ ಸರ್ಕಾರದ ನಿಲುವು ಘೋಷಣೆ ವಿಚಾರವಾಗಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್ ಹಾಗೂ ಅರವಿಂದ ಬೆಲ್ಲದ ವಿಧಾನಸಭೆ ಕಲಾಪದ ವೇಳೆಯಲ್ಲಿ ಸದನದ ಬಾವಿಗಿಳಿದು ಆಡಳಿತ ಪಕ್ಷದ ವಿರುದ್ಧವೇ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ʻʻಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾನೂನು ಸಚಿವರು ವಿಧಾನ ಪರಿಷತ್‌ನಲ್ಲಿರುವ ಕಾರಣ ಅವರು ಸದನಕ್ಕೆ ಬಂದ ಬಳಿಕ ಉತ್ತರ ಕೊಡಿಸುವುದಾಗಿ ಹೇಳಿದರೂ ಸಹ ಸಮಾಧಾನಗೊಳ್ಳದ ಬಸನಗೌಡ ಪಾಟೀಲ್ ಯತ್ನಾಳ್ ಸದನದ ಬಾವಿಗಿಳಿದು ಧರಣಿ ನಡೆಸಿದರು. ಯತ್ನಾಳ್ ಪ್ರತಿಭಟನೆಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಧ್ವನಿಗೂಡಿಸಿದರು.

ಇದನ್ನು ಓದಿ: ಚರ್ಚೆ ಇಲ್ಲದೆ ಚಾಣಕ್ಯ ವಿವಿ ವಿಧೇಯಕ ಅಂಗೀಕಾರ: ಸಿದ್ದರಾಮಯ್ಯ ವಿರೋಧ

ಕಾಂಗ್ರೆಸ್‌ ಶಾಸಕ ಗಣೇಶ್‌ ಸಹ ಇವರ ಜೊತೆ ಎಸ್ ಟಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸದನದ ಬಾವಿಗಿಳಿದು ಧರಣಿಗೆ ಮುಂದಾದರು. ಈ ವೇಳೆ ಮಧ್ಯಪ್ರವೇಶಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಿ ಸಿ ಪಾಟೀಲ್ ಉತ್ತರ ಕೊಡ್ತೀನಿ ಎಂದು ಹೇಳಿದ್ದಾರೆ. ಒಂದೋ ಅವರ ಉತ್ತರ ಕೇಳ್ಬೇಕು. ಈಗ ಸಿಎಂ ಇಲ್ಲ, ಅವರು ಬರುವ ತನಕ‌ ಕಾಯಬೇಕು.‌ ಸದನದ ಸಮಯ ಯಾಕೆ ಹಾಳು ಮಾಡುತ್ತೀರಿ? ಈಗ ಸುಮ್ನೆ ನಿಮ್ಮ ಸ್ಥಳದಲ್ಲಿ ಹೋಗಿ ಕೂತ್ಕೊಳ್ಳಿ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಕಾಗೇರಿ ಸೂಚನೆಯ ಬಳಿಕ ಶಾಸಕರು ಧರಣಿ ವಾಪಸ್ ಪಡೆದು ತಮ್ಮ ಸ್ಥಳಕ್ಕೆ ತೆರಳಿದರು.

ಆಡಳಿತ ಪಕ್ಷದ ಶಾಸಕ ರಾಜೂಗೌಡ ಗರಂ

ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕ ರಾಜೂಗೌಡ ಕೂಡಾ ಅತ್ಯಂತ ಗಂಭೀರವಾದ ವಿಚಾರವೊಂದನ್ನು ಪ್ರಸ್ತಾಪಿಸಿ ‘ನಮಗೆ ಏಕೆ ಇಷ್ಟೊಂದು ಸತಾಯಿಸ್ತಾ ಇದೀರಿ? ರಾಮನ ಹೆಸರು ಹೇಳಿ ಅಧಿಕಾರಕ್ಕೆ ಬರೋದು ಗೊತ್ತಿದೆ. ರಾಮನನ್ನ ಬೆಳಕಿಗೆ ತಂದ ವಾಲ್ಮೀಕಿ ಜನಾಂಗದ ಬಗ್ಗೆ ಏಕೆ ಇಷ್ಟು ನಿರ್ಲಕ್ಷ್ಯʼ ಎಂದು ತಮ್ಮದೇ ಸರ್ಕಾರವನ್ನು ಪ್ರಶ್ನಿಸಿದರು.

ಇದನ್ನು ಓದಿ: ಮೈಸೂರು ಅತ್ಯಾಚಾರ ಪ್ರಕರಣ : ಸರಕಾರ, ಪೊಲೀಸ್ ಇಲಾಖೆಯ ವೈಫಲ್ಯ – ಸಿದ್ದರಾಮಯ್ಯ

ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದಂತೆ ಮೀಸಲಾತಿ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು. 7.5%ರಷ್ಟು ಮೀಸಲಾತಿ ಕೊಡಬೇಕು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಶಿಫಾರಸ್ಸಿನಂತೆ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು. ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಮೀಸಲಾತಿ ವಿಚಾರದ ಬಗ್ಗೆ ನಾಳೆ ಮುಖ್ಯಮಂತ್ರಿ ಉತ್ತರ ಕೊಡ್ತಾರೆ ಎಂದು ಬಿಜೆಪಿ ಶಾಸಕ ರಾಜೂಗೌಡ ಅವರನ್ನು ಸಮಾಧಾನಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *