ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಆಕ್ಸಿಜನ್, ಹಾಸಿಗೆ, ಔಷಧಿ ಕೊರತೆ ಸೋಂಕಿತರನ್ನು ಸಂಕಷ್ಟಕ್ಕೆ ತಳ್ಳುವುದರ ಜೊತೆ ಪ್ರಾಣಹಾನಿ ಸಂಭವಿಸುತ್ತಿದೆ.
ನಿನ್ನೆ ರಾಜ್ಯದಲ್ಲಿ 17,489 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 11,404 ಜನರಿಗೆ ಸೋಂಕು ತಗುಲಿದೆ. 80 ಜನ ಸೋಂಕಿತರು ಮರಣಹೊಂದಿದ್ದಾರೆ.
ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ಗೆ ತತ್ವಾರ ಶುರುವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸಾವು ಬದುಕಿನ ಮಧ್ಯೆ ಹೊರಾಡ್ತಿದ್ದಾರೆ. ಉಸಿರಾಡಲು ಆಗದೆ ಒದ್ದಾಡ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿರುವುದು.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ದಿನೆ ದಿನೆ ಹೆಚ್ಚಾಗುತ್ತದೆ. ಸರಕಾರ ಸರಿಯಾದ ಯೋಜನೆಗಳನ್ನು, ತಯಾರಿಗಳನ್ನು ರೂಪಿಸದ ಕಾರಣ ಇಂತಹ ಅನಾಹುತ ಸೃಷ್ಟಿಯಾಗಿದೆ. ಆಸ್ಪತ್ರೆ ಹಾಗೂ ಹಾಸಿಗೆ ಕುರಿತು ಸರಕಾರದ ನಿರ್ಲಕ್ಷ್ಯವನ್ನು ಇದು ಎತ್ತಿ ತೋರಿಸುತ್ತದೆ.
ದಿಢೀರನೆ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ಗೆ ಡಿಮಾಂಡ್ ಹೆಚ್ಚಾಗಿದೆ. ಅದರಲ್ಲೂ ಕೆಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ಪರದಾಟ ಶುರುವಾಗಿದೆ. ಇದ್ರಿಂದಾಗಿ ತಮ್ಮ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಮತ್ತೊಂದೆಡೆ ಆಕ್ಸಿಜನ್ ಸಪ್ಲೈ ಮಾಡುವವರ ಬಳಿಗೆ ಹೋಗಿ ಕೇಳಿದ್ರೆ, ಅಲ್ಲಿ ಆಕ್ಸಿಜನ್ ಸಿಲಿಂಡರ್‌ಗಳು ಸಾಲುಗಟ್ಟಿ ನಿಂತಿವೆ. ಆದ್ರೆ ಬೇಡಿಕೆ ಬರುತ್ತಿರುವಷ್ಟು ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗದೆ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಇತ್ತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ – ಅತ್ತ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ – ಸೋಂಕಿತರ ಸಮಸ್ಯೆ ಕೇಳೋರು ಯಾರು?
ಇಷ್ಟೆಲ್ಲಾ ಸಮಸ್ಯೆಯಿರುವಾಗ ಬೇರೆ ರಾಜ್ಯಗಳಿಂದಲೂ ಆಕ್ಸಿಜನ್ ಸಪ್ಲೈ ಆಗುವುದು ಅನುಮಾನ. ಸರ್ಕಾರ ಸ್ಟೀಲ್ ಕಂಪನಿಗಳಿಂದ ಆಕ್ಸಿಜನ್ ತರಿಸಿಕೊಳ್ಳಬಹುದು ಎಂಬ ಸಲಹೆಯನ್ನು ಗ್ಯಾಸ್ ಏಜೆನ್ಸಿಯವರು ನೀಡುತ್ತಿದ್ದಾರೆ. ಮತ್ತೊಂದೆಡೆ ಆಕ್ಸಿಜನ್ ಸಿಲಿಂಡರ್ ಕೊರತೆ ಬಗ್ಗೆ ಸಚಿವ ಸುಧಾಕರ್ಗೆ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಅಸೋಸಿಯೇಷನ್ ತುರ್ತು ಪತ್ರ ಬರೆದಿದೆ. ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ ಕಾಡುತ್ತಿದೆ. ಆಕ್ಸಿಜನ್ ಸಪ್ಲೈಯರ್ಸ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿರುವ ಸರ್ಕಾರಿ ಕೊವಿಡ್ ಬೆಡ್ ಭರ್ತಿಯಾಗಿದ್ದು, ಲೈಫ್ ಸೇವಿಂಗ್ ಆಕ್ಸಿಜನ್ ಸಪೋರ್ಟ್ ಇಲ್ಲದೆ ಪರದಾಡುತ್ತಿದ್ದಾರೆ. ಈಗಲೇ ಕ್ರಮಕೈಗೊಳ್ಳದಿದ್ದರೆ ಮೆಡಿಕಲ್ ಡಿಸಾಸ್ಟರ್ ಆಗಲಿದೆ ಎಂದು ಎಚ್ಚರಿಸಿದೆ. ಆಕ್ಸಿಜನ್ ಸಿಲಿಂಡರ್ ಇಲ್ಲದಿದ್ದರೆ ರೋಗಿಗಳ ಪ್ರಾಣಕ್ಕೆ ಹಾನಿಯಾಗಲಿದೆ. ಹಾಗಾಗಿ ಕೂಡಲೇ ಕ್ರಮಕೈಗೊಳ್ಳುವಂತೆ ಫನಾ ಅಧ್ಯಕ್ಷ ಡಾ.ಪ್ರಸನ್ನ ಸಚಿವ ಡಾ.ಕೆ.ಸುಧಾಕರ್ಗೆ ಪತ್ರ ಬರೆದಿದ್ದಾರೆ. ಆದ್ರೆ ಆಕ್ಸಿಜನ್ ಸಿಲಿಂಡರ್ ಸಮಸ್ಯೆ ಕುರಿತಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರದಿಂದ ಜಂಬೋ ಸಿಲಿಂಡರ್‌ಗಳು ಬರುತ್ತವೆ ಎಂಬ ಆಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ : ರೆಮಿಡಿಸಿವರ್ ಔಷಧ ಅಭಾವದಿಂದ ಸಾವಿನ ಪ್ರಮಾಣ ಹೆಚ್ಚಳ, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್‌ನ ತೀವ್ರ ಕೊರತೆ ಉಂಟಾಗಿದೆ. ನಿತ್ಯ 300 ಟನ್ ಮೆಡಿಕಲ್ ಆಕ್ಸಿಜನ್ ಅಗತ್ಯವಿದ್ದರೆ ಕೇವಲ 100 ಟನ್ ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ‘ವೈದ್ಯಕೀಯ ವಿಪತ್ತು’ ಎಚ್ಚರಿಕೆ ನೀಡಿರುವ ಖಾಸಗಿ ಆಸ್ಪತ್ರೆಗಳು, ಆಕ್ಸಿಜನ್ ಸಪೋರ್ಟ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೀವಗಳನ್ನು ಉಳಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿವೆ.
ಉಸಿರಾಡಲು ತೊಂದರೆ ಅನುಭವಿಸುವವರಿಗೆ ಆಕ್ಸಿಜನ್ ಕೊಡಿಸುವುದು ಕೊರೊನಾ ಚಿಕಿತ್ಸೆಯ ಸಂದರ್ಭದಲ್ಲಿ ಅನಿವಾರ್ಯ. ಆದ್ರೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆಯಲ್ಲಾಗಿರುವ ತೊಂದರೆಯನ್ನು ಸರ್ಕಾರ ಸರಿಪಡಿಸದಿದ್ದರೆ ಸಾವಿನ ಪ್ರಮಾಣ ಇನ್ನಷ್ಟು ಜಾಸ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇದರ ಅಪಾಯವನ್ನು ಸರಕಾರ & ಆರೋಗ್ಯ ಸಚಿವರು ಅರಿಯಬೇಕಾಗಿದೆ.
ಆಕ್ಸಿಜನ್ ಕೊರತೆ ಇಲ್ಲ : ಆಕ್ಸಿಜನ್ ಅಭಾವ ತಲೆದೋರಿದೆ ಎಂದು ಖಾಸಗ ಆಸ್ಪತ್ರೆಗಳನ್ನು ಹೇಳುತ್ತಿದ್ದರೆ, ಇತ್ತ ಸುಧಾಕರ್ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಕಳೆದ ಒಂದು ವರ್ಷದಿಂದ 800 ಟನ್ ಆಕ್ಸಿಜನ್‌ಗೆ ನಮ್ಮ ರಾಜ್ಯದ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ. ಕೇಂದ್ರದಿಂದ 300 ಟನ್ ಆಕ್ಸಿಜನ್ ರಾಜ್ಯಕ್ಕೆ ಲಭ್ಯವಾಗುತ್ತಿದೆ. ಕೇಂದ್ರ ನೀಡುತ್ತಿರುವ ಆಕ್ಸಿಜನ್ ಪ್ರಮಾಣ ಹೆಚ್ಚಿಸುವಂತೆಯೂ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದರು.
‘ರಾಜ್ಯದಲ್ಲಿ ಆಕ್ಸಿಜನ್ ಅಭಾವ ಇದೆ ಎಂದು ಹೇಳುವುದು ಸರಿಯಲ್ಲ. ಕೆಲವು ಖಾಸಗಿ ನರ್ಸಿಂಗ್ ಹೋಂನವರು ಅವರು ಒಡಂಬಡಿಕೆ ಮಾಡಿಕೊಂಡಿರುವವರಿಂದ ಆಕ್ಸಿಜನ್ ಪೂರೈಕೆ ಆಗದಿದ್ದರೆ, ರಾಜ್ಯದಲ್ಲೇ ಆಕ್ಸಿಜನ್ ಕೊರತೆ ಆಗಿದೆ ಎಂದು ಅರ್ಥ ಅಲ್ಲ. ಖಾಸಗಿ ನರ್ಸಿಂಗ್ ಹೋಂನವರು ಆಕ್ಸಿಜನ್ ಸರಬರಾಜು ಮಾಡುವವರಿಗೆ ಕೊಡಬೇಕಾದ ಬಾಕಿ ಪಾವತಿ ಮಾಡದೇ ಇರುವುದರಿಂದ ಅವರಿಗೆ ಅಕ್ಸಿಜನ್ ಕೊರತೆ ಆಗಿದೆ. ಅದೂ ಕೂಡ ಒಂದೋ ಎರಡೋ ಖಾಸಗಿ ನರ್ಸಿಂಗ್ ಹೋಂ ಗಳಲ್ಲಿ ಮಾತ್ರ’ ಎಂದರು.