ಚೆನ್ನೈ: ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಭವಿಷ್ಯದಲ್ಲಿ ರಾಜಕೀಯ ಪ್ರವೇಶಕ್ಕೆ ವೇದಿಕೆ ಎಂಬಂತೆ ಗುರತಿಸಿಕೊಂಡಿದ್ದ ರಜನಿ ಮಕ್ಕಳ್ ಮಂದ್ರಮ್(ಆರ್‌ಆರ್‌ಎಂ) ಸಂಘಟನೆಯನ್ನು ವಿಸರ್ಜಿಸುವ ಮೂಲಕ ರಾಜಕೀಯ ರಂಗ ಪ್ರವೇಶಕ್ಕೆ ಇತಿಶ್ರೀ ಹಾಕಿದ್ದಾರೆ.
ಆರ್ ಎಂಎಂ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದ ನಂತರ ಹೇಳಿಕೆ ನೀಡಿದ ರಜನಿಕಾಂತ್ ʻʻವಿವಿಧ ಸಮಸ್ಯೆಗಳಿಂದಾಗಿ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ರಜಿನಿ ಮಕ್ಕಳ್ ಮಂದ್ರಾಮ್ ನ್ನು ವಿಸರ್ಜಿಸಲಾಗುವುದು, ಅದು ರಜನಿಕಾಂತ್ ರಾಸಿಗರ್ ನರ್ಪಾಣಿ ಮಂದ್ರಾಮ್ ಫ್ಯಾನ್ಸ್ ಕ್ಲಬ್ ಆಗಿ ಮುಂದುವರೆಯಲಿದೆ. ಈ ಮೊದಲಿನಂತೆಯೇ ಕಾರ್ಯನಿರ್ವಹಿಸಲಿದೆ. ಈ ವೇದಿಕೆಯ ಅಡಿಯಲ್ಲಿ ಅಭಿಮಾನಿಗಳು ಕಾರ್ಯಚಟುವಟಿಕೆಗಳನ್ನು ಮುಂದುವರಿಸಲಿದ್ದಾರೆʼʼ ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನ ರಾಜಕೀಯಕ್ಕೆ ಸಿನಿಮಾ ಮಂದಿಯ ನಂಟು ಬಹಳ ಹಳೆಯದು. ಈಗಲೂ ರಾಜ್ಯದ ರಾಜಕೀಯ ಪಕ್ಷಗಳಲ್ಲಿ ಸಕ್ರಿಯ ರಾಜಕಾರಣಿಗಳ ಹಿನ್ನೆಲೆಯನ್ನು ಗಮನಿಸಿದರೆ ಸಿನಿಮಾ ರಂಗದಿಂದ ಹೊರಗುಳಿಯುವುದಿಲ್ಲ. ಅದೇ ರೀತಿಯಲ್ಲಿ 70 ವರ್ಷದ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯ ಮುಂಚಿತ ಕೆಲವು ಚಟುವಟಿಕೆಗಳು ಸ್ಪಷ್ಟಪಡಿಸಿದ್ದವು.
ಇದನ್ನು ಓದಿ: ಮುನ್ನಲೆ ಪಡೆಯುವುದೇ ಹೊಸ ಪಕ್ಷಗಳ ಚುನಾವಣಾ ಹಣಾಹಣಿ
ರಜನಿಕಾಂತ್ ಅಭಿಮಾನಿಗಳ ಒಕ್ಕೂಟವನ್ನು 2018ರಲ್ಲಿ ‘ಆರ್‌ಎಂಎಂ‘ ವೇದಿಕೆಯನ್ನು ರಾಜಕೀಯೇತರ ಕಲ್ಯಾಣ ಸಂಘಟನೆಯಾಗಿ ಪರಿವರ್ತಿಸಲಾಗಿತ್ತು. ನಂತರ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಈ ವೇದಿಕೆಯ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದವು.
ಕಳೆದ ಆರು ತಿಂಗಳ ಹಿಂದೆ ರಾಜಕೀಯದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದ ರಜನಿಕಾಂತ್ ಆರ್‌ಆರ್‌ಎಂ ಸಂಘಟನೆಯ ಪ್ರಮುಖರೊಂದಿಗೆ ಚರ್ಚಿಸಿದ ನಂತರ ಸ್ಪಷ್ಟನೆಯನ್ನು ನೀಡಿದ್ದರು. ಅಲ್ಲದೆ, ಕಳೆದ ಡಿಸೆಂಬರ್‌ನಲ್ಲಿ ರಜನಿ, ಆರೋಗ್ಯದ ಕಾರಣ ನೀಡಿ ‘ರಾಜಕೀಯ ಪ್ರವೇಶಿಸುವುದಿಲ್ಲ‘ ಎಂದು ಘೋಷಿಸಿದ್ದರು.
‘ಕಳೆದ ವರ್ಷ ನಾನು ರಾಜಕೀಯ ಪ್ರವೇಶಿಸುವುದಿಲ್ಲ ಎಂದಿದ್ದೆ. ರಾಜಕೀಯ ಪ್ರವೇಶಕ್ಕಾಗಿಯೇ ರಚಿಸಲಾಗಿದ್ದ ಆರ್‌ಆರ್‌ಎಂ ವೇದಿಕೆಯ ಕರ್ತವ್ಯ ಮತ್ತು ಗುರಿಗಳ ಬಗ್ಗೆಯೂ ಸ್ಪಷ್ಟಪಡಿಸುವುದು ನನ್ನ ಕರ್ತವ್ಯವಾಗಿತ್ತು. ಆ ಕೆಲಸವನ್ನು ಈಗ ಮಾಡಿದ್ದೇನೆ ಎಂದು ರಜನಿ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ 3, 2020ರಂದು, ‘ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ‘ ನಟ ರಜನಿಕಾಂತ್ ಪ್ರಕಟಿಸಿದ್ದರು. 2020ರ ಡಿಸೆಂಬರ್ 29 ರಂದು ಕೆಲವು ಪ್ರಮುಖ ಕಾರಣಗಳನ್ನು ನೀಡಿ ರಾಜಕೀಯಕ್ಕೆ ಬರುವುದಿಲ್ಲ. ಅನಾರೋಗ್ಯದ ಸಮಸ್ಯೆಯೂ ಇರುವುದಾಗಿ ತಿಳಿಸಿದ್ದರು.
ರಜನಿ ಅವರ ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದರಿಂದ ಅವರು ಹೆಚ್ಚು ಓಡಾಡುವುದು ಸೂಕ್ತವಲ್ಲ ಮತ್ತು ಕೋವಿಡ್‌ನಿಂದ ತೀವ್ರ ಅಪಾಯವಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದರು. ಇತ್ತೀಚೆಗೆ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಚೆನ್ನೈಗೆ ಹಿಂತಿರುಗಿದ್ದಾರೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಅಂತ್ಯಗೊಂಡಿದೆ ಎಂಬ ಅಂಶ ತಿಳಿದು ಬಂದಿದೆ. ರಜನಿ ಮುಂದಿನ ನಡೆ ಏನೆಂಬುದು ಇನ್ನು ಸ್ಪಷ್ಟಗೊಂಡಿಲ್ಲ.