ಅಚ್ಛೇದಿನ್ ಹಾಡು

ಪಿ.ಆರ್. ವೆಂಕಟೇಶ್, ಬಳ್ಳಾರಿ

ಕೋಟೆ ಕೊರಳ ಭೋಂಗಾದಲ್ಲಿ
ಅಚ್ಛೇದಿನ್ ಹಾಡು
ಬಟಾಬಯಲ ಕರುಳಲ್ಲಿ
ಗಾಳಿ ಗಾಳಿ ಗಾಳೀ.. ಜೀವದ ಪಾಡು.
ಹೊರಗೆ ಸೋಂಕಿನ ಸೂರು ಒಳಗೆ ಸಾವಿನ ಊರು
ಹಸಿವಿನ ತತ್ತರ ಒಳಗೆ ಸಾವಿನ ಉತ್ತರ ಹೊರಗೆ.

 

ಕೈಕಾಲು ರೆಕ್ಕೆ ಮುರಿದ ಕೋಳಿ ಬದುಕು
ಗುಡಿಸಲೊಡಲಿನ ಬೆಂಕಿ
ಅರಳಲಿಲ್ಲ, ನಿಗಿಯಲಿಲ್ಲ
ಹೊಗೆಯ ಬಲೆ ತುಂಬಿದ ಒಲೆ
ಹಾತೊರೆದ ಕರುಳ ಸಂಕಟಕೆ
ಕಾಳು ಹೆಕ್ಕಲು ಗುಳೆ
ಮತ್ತೆಲ್ಲಿಗೆ ಎನ್ನುವ ಮಾತೇ ಇಲ್ಲ
ಮಸಣದೆಡೆಗೆ ಎಲ್ಲಾ
ಹಸಿದ ಸಾವಿಗಿಂತ ತಿಂದುಂಡಸಾವೇ ಲೇಸು
ತುತ್ತು ತುಟಿ ಮುಟ್ಟುವ ಮೊದಲೇ ದುತ್ತನೆ ಎರಗುವ ಸಾವು.

 

ರೋಗದ ಕುಸ್ತಿಕಣದಲ್ಲಿ ಕೋಟೆ ಪಟ್ಟುಗಳೆಲ್ಲ ಟಿಸ್ ಮುರಲಿ
ಲೆಖ್ಖದ ತರ್ಕದಲಿ ಜಗದ ವೀರತ್ವದ ಕನಸುಂಡ
ದುರಂತಕ್ಕೆ ಬುದ್ಧಿ ಮಾರಿಕೊಂಡ ಆಧ್ಯಾತ್ಮ ಗುರು
ತಂಪಿನ ತಿಳಿಕೊಳದ ತಳದಲ್ಲಿ ಆಮೆದೊರೆ ಮೌನ.
ಆತನಿಗೆಲ್ಲ ಸಮಾನ
ಸೋಲು, ಗೆಲವು, ಪ್ರಾಣಿ, ಮನುಷ್ಯ.

 

ಹಬ್ಬುತಿದೆ ಬಳ್ಳಿ ಸಾವ ಹೊತ್ತು
ಹಸಿರು ತುಂಬಿದ ಮರಕ್ಕೆ
ಕೊಂಬೆ ರೆಂಬೆಗೂ ಹೀಚಿ ಕರುಳ ಕತ್ತರಿಸಿ.
ಬಳಬಳನೆ ಉದುರುತ್ತಿವೆ ಹುಳು ಹುಪ್ಪಟೆಯಂತೆ
ಹಣ್ಣೆಲೆ ಹದಿಹರೆಯದೆಲೆ ಚಿಗುರೆಲೆ
ಹೀಚುವ ಮಸಣಕ್ಕೆ ತೋರಣವಾಗಿ.

 

ಇಲ್ಲಿ
ಪ್ರಾಣ ಗಾಳಿಯ ತಲ್ಲಣದಲ್ಲಿ
ಅವತಾರ ಪವತಾರಗಳೆಲ್ಲ ಕೆಟ್ಟು ಕೆರ ಹಿಡಿದವು
ಒಡಲು ಒಡೆವಷ್ಟು ಹೆಣ ಸುಟ್ಟು ಸುಸ್ತಾದ ಬೆಂಕಿ ಎದುರು
ದೇವರು ದಿಂಡಿರು ಧರ್ಮಕರ್ಮ ಪಾಪಪುಣ್ಯ
ಎಲ್ಲ ಸಾವರಿಸಿ ತಿಪ್ಪೆಗೆಸೆದ ಕಸ
ಸಾವೇ
ಮನುಷ್ಯತ್ವದ ಪಾಠ ಕಲಿಸುತ್ತಿದೆ ಇಲ್ಲಿ.

 

ಇದರ ನಡುವೆಯೂ ವಿಜೃಂಬಿಸಿದೆ ಮೇಳ
ಸಾವಿನ ಕುಂಭ ಹೊತ್ತು.
ನಡೆದಿದೆ ಕುರ್ಚಿ ಚಟದ
ದುಷ್ಟತನದೋಟಿನಾಟ
ಸಾವಿನ ಮೊದಲೊಂದೋಟಿಗೆ
ಆಭ್ಯರ್ಥಿಯ ಅವಲೊತ್ತು.
ಅಷ್ಟೇ ಅಲ್ಲ
ಸದ್ದುಗದ್ದಲದೊಳಗೆ ಹೆಣದ ಮೈ ತಪಾಸಣೆ
ಬದುಕುವ ಸುಲಭ ಮಾರ್ಗಕ್ಕೆ.
ನಡು ನಡುವೆ ಬಣ್ಣದ ಮಂದಿಯ ಬಿಂಕ
ಹೇಳಿ ಎಲ್ಲಿದೆ ಮನುಷ್ಯತ್ವ?
ತಲ್ಲಣಗಳು ಪಲ್ಲಟಗೊಂಡ ವಿದ್ರಾವಕತೆಯಲ್ಲೂ
ಪ್ರಾಣವಾಯು ಮಾಲಕನ ಸೆರೆ.
ಕುರುಡು ಕಾಂಚಣದ ನೃತ್ಯ ಮಂಟಪದಲ್ಲಿ
ದರನಿಗದಿಯ ಮಂದ ನಗೆ ಸಾವ ಬೆಳೆಗೆ.
ಆದರೂ
ಕೋಟೆ ಕೊರಳ ಬೋಂಗಾ ಹಾಡುತ್ತಲೆ ಇದೆ
ಅಚ್ಛೇದಿನ್ ಕವಾಲಿ.

Donate Janashakthi Media

Leave a Reply

Your email address will not be published. Required fields are marked *