ಅಚ್ಛೇದಿನ್‌ ಎಂದು ಜನರಿಗೆ ಟೋಪಿ ಹಾಕಿದ ಮೋದಿ: ಸಿದ್ಧರಾಮಯ್ಯ

ವಿಜಯನಗರ: ಅಚ್ಛೇದಿನ್‌, ಅಚ್ಛೇದಿನ್‌ ಹೇಳಿಕೊಂಡೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ದೇಶದ ಜನರಿಗೆ ಟೋಪಿ ಹಾಕಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಸಹ ಜನರಿಗೆ ಕಷ್ಟಗಳು ತಪ್ಪಲಿಲ್ಲ ಎಂದು ಕಾಂಗ್ರೆಸ್‌ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಆರೋಪಿಸಿದರು.

ಇಂದು ಜಿಲ್ಲೆಯ ಸಂಡೂರಿನಲ್ಲಿ ಶಾಸಕ ತುಕಾರಾಂ ಅವರು ಆಯೋಜಿಸಿದ್ದ ಜನತೆಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧರಾಮಯ್ಯ ಅವರು ಸತತವಾಗಿ ಗಗನಕ್ಕೇರುತ್ತಿರುವ ಪೆಟ್ರೋಲ್‌ ಬೆಲೆಗಳ ಬಗ್ಗೆ ಪ್ರಸ್ತಾಪಿಸಿ ʻʻಪೆಟ್ರೋಲ್‌ಗೆ ರೂ.31.84 ಪೈಸೆ ಕೇಂದ್ರ ಸರಕಾರ ತೆರಿಗೆ ವಿಧಿಸುತ್ತಿದೆ.  ಅದೇ ರೀತಿಯಲ್ಲಿ ರಾಜ್ಯ ಸರಕಾರ ರೂ. 37.98 ಪೈಸೆ ವಿಧಿಸುತ್ತಿದೆ. ಕೇಂದ್ರ ರಾಜ್ಯ ಸರ್ಕಾರಗಳ ತೆರಿಗೆ ಫಲವಾಗಿ ಇಂದು ಪೆಟ್ರೋಲ್‌ ಬೆಲೆ ರೂ.100ಕ್ಕೂ ಹೆಚ್ಚಾಗಿವೆ. ಪಕ್ಕದ ಪಾಕಿಸ್ತಾನದಲ್ಲಿ ಪೆಟ್ರೋಲ್‌ ಬೆಲೆ ರೂ.57 ಇದೆʼʼ ಎಂದರು.

ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆಯಿಂದ ಟ್ರಾಕ್ಟರ್ , ಆಟೋ ಡ್ರೈವರ್ , ಬೈಕ್ ಇಟ್ಟುಕೊಂಡಿರುವ  ಇಟ್ಕೋಂಡೋರ್ ಕಥೆ ಏನು, ಇಷ್ಟೊಂದು ಬೆಲೆಗಳು ಏರಿಕೆಯಾದರೆ ಹೇಗೆ, ಗ್ಯಾಸ್ ಸಿಲಿಂಡರ್‌ ಬೆಲೆಗಳ ಸಹ ಗಗನಕ್ಕೇರಿದೆ. ಹೀಗಾದರೆ. ಜನರು ಜೀವಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದರು.

ದಿಲ್ಲಿಯಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಡಬಲ್‌ ಇಂಜಿನ್‌ ಸರಕಾರ ಇದ್ದರೂ ಸಹ ಸ್ವರ್ಗವಂತೂ ಬಂದಿಲ್ಲ ಎಂದು ಸಿದ್ಧರಾಮಯ್ಯ ಅವರು ಆರೋಪಿಸಿದರು.

ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಯೂ ಸಂಪೂರ್ಣವಾಗಿ ನೆಲಕಚ್ಚಿದೆ. ಸಂಡೂರಿನಲ್ಲಿ ನಮ್ಮ ಕಾಂಗ್ರೆಸ್‌ ಪಕ್ಷದ ಅಧಿಕಾರಾವಧಿಯಲ್ಲಿ ಕೊಟ್ಟ ಅನುದಾನಗಳೇ ಕೊನೆ. ಬಿಜೆಪಿ ಸರಕಾರ ಏನೇನೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.

ಬಿಜೆಪಿ ಪಕ್ಷದ ಸಾಧನೆ ಶೂನ್ಯವಾಗಿದೆ. ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಬೇಗ ಒಳ್ಳೆಯದು. ಮುಂದಿನ ಚುನಾವಣೆಯಲ್ಲಿಯೂ ತುಕಾರಾಂ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ಆಶೀರ್ವಾದ ಮಾಡಬೇಕು. ಬಿಜೆಪಿಯನ್ನು ಕಿತ್ತೆಸೆದು ಕಾಂಗ್ರೆಸ್‌ ಸರಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಂತೋಷ್ ಲಾಡ್, ಮಾಜಿ ಸಂಸದ ಉಗ್ರಪ್ಪ, ಶಾಸಕರಾದ ನಾಗೇಂದ್ರ, ಬೈರತಿ ಸುರೇಶ್, ಪ್ರಕಾಶ್ ರಾಥೋಡ್, ಭೀಮಾ ನಾಯಕ್, ಗಣೇಶ್, ಮಾಜಿ ಶಾಸಕರಾದ ಅಶೋಕ್ ಪಟ್ಟಣ, ತರೀಕೆರೆ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *