ಪ್ರತಿ ಖರ್ಚಿನ ಲೆಕ್ಕ ನೀಡಿ; ಕಲ್ಯಾಣ ಮಂಡಳಿಗೆ ಹೈಕೋರ್ಟ್ ತಾಕೀತು

ಹೈಕೋರ್ಟ್ ಮಧ್ಯಂತರ ಆದೇಶದಂತೆ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡ ಸಹಿತ ಹಣ ಪಾವತಿಸಿದ ಕಲ್ಯಾಣ ಮಂಡಳಿ
ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಇದುವರೆಗೂ ಮಾಡಿರುವ ಪ್ರತಿ ಖರ್ಚಿನ ಲೆಕ್ಕವನ್ನು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದೆ ಮಂಡಿಸಬೇಕೆಂದು ಹೈಕೋರ್ಟ್ ತಾಕೀತು ಮಾಡಿದೆ. ಲೆಕ್ಕ 

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಮತ್ತಿತರರು ಹೈಕೋರ್ಟ್ ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ‌ ನಾಗಪ್ರಸನ್ನ ಏಕಸದಸ್ಯ ಪೀಠ ಇಂದು ನೆಡೆಸಿತು. ಲೆಕ್ಕ 

ವಿಚಾರಣೆಯಲ್ಲಿ ಮಂಡಳಿ ಪ್ರತಿನಿಧಿಸಿ ಹಾಜರಾಗಿದ್ದ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಹಾಜರಿದ್ದ ವೇಳೆಯಲ್ಲೇ ನ್ಯಾಯಮೂರ್ತಿಗಳು ಮಂಡಳಿ ಅಧಿಕಾರಿಗಳಿಗೆ ಇಂದು ಈ ಆದೇಶ ನೀಡಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ವಿಪಕ್ಷ ನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು: ಸಿಎಂ ಸಿದ್ದರಾಮಯ್ಯ

ನಾಲ್ಕು ವಾರದೊಳಗೆ ಎಲ್.ಎಲ್.ಬಿ ಹಾಗೂ ಎಂ.ಬಿ.ಎ ವಿದ್ಯಾಭ್ಯಾಸ ಮಾಡುವ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಲು ಕಳೆದ‌ ಏಪ್ರಿಲ್ 23 ರಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಆದರೆ ಮಂಡಳಿ ಹಣವನ್ನು ಪಾವತಿಸಲು ವಿಫಲವಾದ್ದನ್ನು ಗಮನಿಸಿದ್ದ ನ್ಯಾಯಮೂರ್ತಿಗಳು ಮಂಡಳಿಯಲ್ಲಿ ಸಂಗ್ರಹವಿರುವ ರೂ 6700 ಕೋಟಿ ಹಣದ ವಿವರಗಳನ್ನು ಪೀಠದ ಮುಂದೆ ಮಂಡಿಸಲು ಕಳೆದ ಬಾರಿಯ ವಿಚಾರಣೆಯಲ್ಲಿ ಸೂಚನೆ ನೀಡಿತ್ತು .

ಇಂದು ಪೀಠದ ಮುಂದೆ ಹಾಜರಾದ ರಾಜ್ಯ ಸರ್ಕಾರದ ಅಡ್ವೋಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಕಲ್ಯಾಣ ಮಂಡಳಿಯು ಈಗಾಗಲೇ 6 ಲಕ್ಷ ವಿದ್ಯಾರ್ಥಿಗಳಿಗೆ ರೂ 500 ಕೋಟಿ ಶೈಕ್ಷಣಿಕ ಧನ ಸಹಾಯಧನ ವಿತರಿಸಿದೆ ಅಲ್ಲದೆ ಮಂಡಳಿಯಲ್ಲಿ 19 ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ಕಟ್ಟಡ ಕಾರ್ಮಿಕರಿಗಾಗಿ ಜಾರಿಗೊಳಿಸುತ್ತಿದೆ ಆದ್ದರಿಂದ 2021 ಅಧಿಸೂಚನೆ ಅನ್ವಯ ಶೈಕ್ಷಣಿಕ ಧನಸಹಾಯ ನೀಡಲು‌ ಕಷ್ಟವಾಗಲಿದೆ ಎಂದು ವಾದಿಸಿದರು. ಆದರೆ ಅವರ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು ರಾಜ್ಯದಲ್ಲಿ ನಿರ್ಮಾಣ ಕಾಮಗಾರಿಗಳಿಂದ ಸಂಗ್ರಹವಾಗುವ ಸೆಸ್ ಹಣ ಕಾರ್ಮಿಕರ ಕಲ್ಯಾಣ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕ್ಕಾಗಿ ಖರ್ಚು‌ಮಾಡಬೇಕೇ ಅಥವಾ ಮಂಡಳಿ ಅಧಿಕಾರಿಗಳ ಐಶರಾಮಿ ಓಡಾಟಕ್ಕೆ ಖರ್ಚು‌ಮಾಡಬೇಕಾ ? ಎಂದು ಪ್ರಶ್ನಿಸಿದರು.

ಇದಕ್ಕೆ ಪೂರಕವೆಂಬಂತೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ಆದಿತ್ಯ ಚಟರ್ಜಿ 2019 ರ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ)ಯ ವರದಿಯು ಕರ್ನಾಟಕ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯು ತನ್ನ ಆಡಳಿತಾತ್ಮಕ ವೆಚ್ಚವನ್ನು ಕಾನೂನು ನಿಗದಿಪಡಿಸಿದ ಶೇ‌5 ರಷ್ಟನ್ನು ಮೀರಿ ಶೇ 9. ರಿಂದ ಶೇ 72 ರಷ್ಟು ಹೆಚ್ಚಾಗಿ ಖರ್ಚು ಮಾಡಿದೆ ಎಂದು ಸಿಎಜಿ ವರದಿಯ ಅಂಶವನ್ನು ಉಲ್ಲೇಖಿಸಿದರು ಅಲ್ಲದೆ ಹಿಂದೆ ಘಟನೋತ್ತರ ಅನುಮೋದನೆ‌ ಮೂಲಕ ಮಂಡಳಿಯು ಇನ್ನೋವಾ‌ ಕಾರುಗಳನ್ನು ಖರೀದಿಸುವ‌ ಮೂಲಕ ಮಂಡಳಿ ನಿಧಿಯನ್ನು ಅನಗತ್ಯವಾಗಿ ಖರ್ಚು ಮಾಡಿರುವ ಅಂಶಗಳತ್ತ ಬೆಳಕು ಚೆಲ್ಲಿದರು ಮತ್ತು ಇದುವರೆಗೂ ಮಧ್ಯಂತರ ಆದೇಶದಂತೆ ಇಬ್ಬರು ವಿದ್ಯಾರ್ಥಿನಿಯರಿಗೆ ಹಣ ಪಾವತಿ ‌ಮಾಡಿಲ್ಲ ಎನ್ನುವ ಸಂಗತಿಯನ್ನು ಪೀಠದ ಗಮನಕ್ಕೆ ತಂದರು.

ಈ ಬಗ್ಗೆ ಕಲ್ಯಾಣ ಮಂಡಳಿ ಪರವಾಗಿ ಹಾಜರಿದ್ದ ವಕೀಲರು ಇಬ್ಬರು ವಿದ್ಯಾರ್ಥಿನಿಯರಿಗೆ ಕೋರ್ಟ್ ಆದೇಶದಂತೆ ರೂ 60000 ಹಾಗೂ ರೂ 55000 ಹಣ ಪಾವತಿಸಿದೆ ಎಂದು ಹೇಳಿ ಅದರ ಜೆರಾಕ್ಸ್ ಪ್ರತಿಯನ್ನು ಅರ್ಜಿದಾರ ವಕೀಲರಿಗೆ ನೀಡಿದರು.

ಎರಡು ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಮೂರ್ತಿಗಳು ಕಲ್ಯಾಣ‌ ಮಂಡಳಿಯಲ್ಲಿರುವ ಪ್ರತಿಯೊಂದು ರುಪಾಯಿಯು ಬಡ ಕಾರ್ಮಿಕರ ಕಲ್ಯಾಣ ಕಲ್ಯಾಣ ಮತ್ತು‌ ಮಕ್ಕಳ ಶೈಕ್ಷಣಿಕ ಬದುಕಿಗೆ ಖರ್ಚು‌ ಮಾಡಬೇಕು ಮಂಡಳಿಯಲ್ಲಿ ಸಾವಿರಾರು ‌ಕೋಟಿ ಸೆಸ್ ಇದ್ದರೂ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಶೇ 60-70 ರಷ್ಟು ಕಡಿತ ಮಾಡಿರುವ ಕ್ರಮವನ್ನು ಯಾವುದೇ ಕಾರಣದಿಂದಲೂ ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಕಲ್ಯಾಣ ಮಂಡಳಿಯು ಮಾಡುತ್ತಿರುವ ಪ್ರತಿಯೊಂದು ಖರ್ಚಿನ ಲೆಕ್ಕವನ್ನು ನ್ಯಾಯಾಲಯದ ಮುಂದೆ ಮಂಡಿಸಲು ತಾಕೀತು ಮಾಡಿ ಮುಂದಿನ ವಿಚಾರಣೆಯನ್ನು ಜುಲೈ 26 ಕ್ಕೆ ಮುಂದೂಡಿದರು.

ಇದನ್ನೂ ನೋಡಿ: ಅಂಗನವಾಡಿಗಳ ಕತ್ತು ಹಿಸುಕಬೇಡಿ – ಕಾರ್ಯಕರ್ತರನ್ನು ತರಬೇತಿಗೊಳಿಸಿ Janashakthi Media

Donate Janashakthi Media

Leave a Reply

Your email address will not be published. Required fields are marked *