ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಮುಂದುವರಿದ ಅಪಘಾತ ಸರಣಿ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಅಪಘಾತ ಪ್ರಕರಣಗಳು ಮುಂದುವರಿದಿದ್ದು ರಾಮನಗರ ತಾಲೂಕಿನ ಬಸವನಪುರ ಬಳಿ ಮೇಲ್ಸೇತುವೆಯ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಲಾರಿ ಹಾಗೂ ಕಾರು ಚಾಲಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದ ನಂತರ ಲಾರಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಹಿಂಭಾಗ ಕಾರಿನ ಮೇಲೆ ಬಿದ್ದಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಲಾರಿ ಹಾಗೂ ಕಾರಿನ ಚಾಲಕರು ಜೀವಹಾನಿಯಿಂದ ಪಾರಾಗಿದ್ದಾರೆ ಸ್ಥಳಕ್ಕೆ ಆಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್ ಪ್ರೆಸ್‌ ವೇ ವಿನ್ಯಾಸಗೊಳಿಸಲಾಗಿದ್ದರೂ ಅಪಘಾತ ತಡೆಗೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಅಳವಡಿಸದಿರುವುದು ಅಪಘಾತ, ಸಾವು-ನೋವುಗಳಿಗೆ ಕಾರಣವಾಗಿದೆ. ಕಳೆದ 6 ತಿಂಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 335ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 84ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ರಾಮನಗರ ಜಿಲ್ಲಾ ವ್ಯಾಪ್ತಿಯೊಂದರಲ್ಲೇ 41 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದ 225 ಅಪಘಾತದಲ್ಲಿ 43 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಲಕ್ಷ್ಮೀಪುರ ಗೇಟ್-ಮಣಿಪಾಲ್ ಆಸ್ಪತ್ರೆವರೆಗಿನ ಹೆದ್ದಾರಿಯಲ್ಲಿ ಈವರೆಗೆ ಸಂಭವಿಸಿದ್ದು, 30 ಅಪಘಾತ ಪ್ರಕರಣಗಳು ನಡೆದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ  : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಬಸ್ ಪ್ರಯಾಣ ದರ ಮತ್ತಷ್ಟು ದುಪ್ಪಟ್ಟು

ಮುಂದಿನ ವಿಧಾನಸಭೆ ಚುನಾವಣೆಯ ಗೆಲುವನ್ನ ಗುರಿಯಾಗಿಸಿಕೊಂಡಿರುವ ಬಿಜೆಪಿ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ  ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯನ್ನು ಉದ್ಘಾಟಿಸಿ ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಬಿಜೆಪಿಯ ನಡೆ ವಿರುದ್ಧ ಆಕ್ರೋಶಗೊಳ್ಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *