ಹಾವೇರಿ : ‘ಹಿಂದೂ – ಮುಸ್ಲಿಂ ಏಕ್ ಹೈ’ ಎಂದು ಘೋಷಣೆ ಮೊಳಗಿಸುತ್ತಿದ್ದ ವಿದ್ಯಾರ್ಥಿಗಳಿಗೆ ಎಬಿವಿಪಿ ಕಾರ್ಯಕರ್ತರು ಅಡ್ಡಿ ಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಎಬಿವಿಪಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದ-ದೇಶದ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ಜಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲುಗಳಿಂದ ಶೈಕ್ಷಣಿಕ ವಾತಾವರಣ ಹದಗೆಡುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೋಮು ಪ್ರಚೋದನೆ ಶಕ್ತಿಗಳಿಗೆ ಒಳಗಾಗಿ ತಮ್ಮತನವನ್ನು ಕಳೆದುಕೊಳ್ಳದೆ ಶೈಕ್ಷಣಿಕ ವಾತಾವರಣ ಹದಗೆಡಲು ಬಿಡಬಾರದೆಂದು ಎಂಬ ಬೇಡಿಕೆಯೊಂದಿಗೆ ವಿದ್ಯಾರ್ಥಿಗಳು SFI ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ನಮ್ಮ ದೇಶದ ಹೆಮ್ಮೆಯ ಸಂಕೇತ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಿಡಿದು ನಾವೆಲ್ಲರೂ ಐಕ್ಯತೆಯಿಂದ ಹೋರಾಟ ಮಾಡವುದರ ಮೂಲಕ ಈ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಬಾಯಿ ಬಾಯಿ ಎಂಬ ಸಂದೇಶವನ್ನು ಸಾರುಬೇಕು ಎಂದು ರಾಷ್ಟ್ರ ಧ್ವಜವನ್ನು ಹಿಡಿದು ಘೋಷಣೆಗಳನ್ನು ಹಾಕುತ್ತಿರುವಾಗ ಎಬಿವಿಪಿ ಕಾರ್ಯಕರ್ತರು ಗೂಂಡಾಗಳಂತೆ ನುಗ್ಗಿ ಘೋಷಣೆಗಳನ್ನು ಹಾಕದಂತೆ ತಡೆಯಲು ಪ್ರಯತ್ನ ನಡೆಸಿದರು. ಪೊಲೀಸರು ಸ್ಥಳದಲ್ಲಿದ್ದ ಕಾರಣ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಎಬಿವಿಪಿ ಸಂಘಟನೆಗೆ ದೇಶದ ಐಕ್ಯತೆ ಮತ್ತು ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಹಾವೇರಿ ಜಿಲ್ಲಾ ಎಸ್ಎಫ್ಐ ಮುಖಂಡ ಬಸವರಾಜ ಬೋವಿ ಆರೋಪಿಸಿದ್ದಾರೆ. ಧರ್ಮಗಳು ಸಾಮರಸ್ಯ, ಸಹಬಾಳ್ವೆ ಯಿಂದ ಜೀವನ ನಡೆಸಲು ಪ್ರಯತ್ನಿಸುತ್ತಿರುವಾಗ ಕಾಲೇಜು ಕ್ಯಾಂಪಸ್ ಗಳಲ್ಲಿ ಕೋಮುವಾದಿ ಕಲ್ಲನ್ನು ಎಬಿವಿಪಿ ಎಸೆಯುತ್ತಿದೆ. ಸಾಮರಸ್ಯದ ಘೋಷಣೆಗೆ ಅಡ್ಡಿಪಡಿಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಳ್ಳಬೇಕು ಎಂದು ಬಸವರಾಜ ಆಗ್ರಹಿಸಿದ್ದಾರೆ.