ಬೆಂಗಳೂರು: ಆಟೋ ಮತ್ತು ಟ್ಯಾಕ್ಸಿ ಚಾಲಕರ ಆದಾಯಕ್ಕೆ ಮಾರಕವಾಗಿರುವ ಅಕ್ರಮ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ಹಾಗೂ ಶಕ್ತಿ ಯೋಜನೆಯಿಂದ ಸಂಪಾದನೆ ಇಲ್ಲದೆ ನಷ್ಟ ಅನುಭವಿಸುತ್ತಿರುವ ಚಾಲಕರಿಗೆ ಸರ್ಕಾರ ಪರಿಹಾರ ನೀಡುವಂತೆ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟ, “ಪಕ್ಷವೂ ಅಧಿಕಾರಕ್ಕೆ ಬಂದರೆ ರ‍್ಯಾಪಿಡೋ ಅಕ್ರಮ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುತ್ತೇವೆ ಹಾಗೂ ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬಜೆಟ್‌ನಲ್ಲಿ ಸೌಲಭ್ಯ ಸವಲತ್ತುಗಳ ನೀಡದೆ ನಿರ್ಲಕ್ಷ ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
“ಕಳೆದ 2 ವರ್ಷಗಳಿಂದ ಕೆಲವು ಆಫ್ ಆಧಾರಿತ ಅನಧಿಕೃತ ಅಕ್ರಮ ವೈಟ್‌ಬೋರ್ಡ್ ಟ್ಯಾಕ್ಸಿಗಳ ಹಾವಳಿಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಪಾದನೆಗೆ ಹೊಡೆತ ಬಿದ್ದಿದೆ. ಇದರ ವಿರುದ್ಧ ನಗರದ ಅನೇಕ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿರುತ್ತಾರೆ. ಚುಕ್ಕಾಣಿ ಹಿಡಿದ ಸರ್ಕಾರಗಳು ಆಟೋ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ ವಸತಿ, ಆರೋಗ್ಯ ವಿದ್ಯಾಭ್ಯಾಸ, ಹಣಕಾಸು ಸೌಲಭ್ಯಗಳ ಸವಲತ್ತುಗಳನ್ನು ಒದಗಿಸದೇ ಸೌಲಭ್ಯಗಳಿಂದ ವಂಚಿತರಾಗಿವೆ” ಒಕ್ಕೂಟ ಹೇಳಿದೆ.
ಇದನ್ನೂ ಓದಿ:ಹೆಚ್ಚಿನ ದರ ವಸೂಲಿ: ಓಲಾ, ಉಬರ್ ಆಟೋರಿಕ್ಷಾ ಸಂಚಾರ ತಕ್ಷಣ ಸ್ಥಗಿತಕ್ಕೆ ಸಾರಿಗೆ ಇಲಾಖೆ ಆದೇಶ
“ರ‍್ಯಾಪಿಡೋ ಅಕ್ರಮ ಬೈಕ್ ಟ್ಯಾಕ್ಸಿ ಹಾಗೂ ಸರ್ಕಾರದ ಶಕ್ತಿ ಯೋಜನೆಯಿಂದ ಬೃಹತ್ ಅಸಂಘಟಿತ ವರ್ಗವಾದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಶ್ರಮಿಕ ವರ್ಗವು ನಿರ್ನಾಮವಾಗುತ್ತದೆ. ಇದನ್ನು ತಪ್ಪಿಸಲು ಚಾಲಕರ ಪುನಃಶ್ಚೇತನಕ್ಕೆ ಹಾಗೂ ಪರಿಹಾರಕ್ಕಾಗಿ ತುರ್ತಾಗಿ ಸರ್ಕಾರವು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸಾಲ ಮತ್ತು ಸವಲತ್ತುಗಳನ್ನು ನೀಡಬೇಕು” ಎಂದು ಒಕ್ಕೂಟ ಒತ್ತಾಯಿಸಿದೆ.
ಇಷ್ಟೆ ಅಲ್ಲದೆ ಕಾಂಗ್ರೆಸ್ ಸರ್ಕಾರದ ನೂತನ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣದ ಶಕ್ತಿಯೋಜನೆಯಿಂದ ಚಾಲಕರ ಸಂಪಾದನೆಗೆ ಹೊಡೆತ ಬಿದ್ದಿದೆ ಎಂದು ಒಕ್ಕೂಟ ಆರೋಪಿಸಿದೆ. “ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ರಿಕ್ಷಾ ಚಾಲಕರು ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ವಾಹನದ ಸಾಲ, ದಿನನಿತ್ಯ ಬಳಸುವ ಅಗತ್ಯ ವಸ್ತುಗಳನ್ನು ನಿರ್ವಹಣೆ ಮಾಡಲಾಗದೆ ದಿನೇ ದಿನೇ ಮಾನಸಿಕವಾಗಿ, ದೈಹಿಕವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿರುತ್ತಾರೆ. ರೈತರಂತೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಸೃಷ್ಟಿಯಾಗುತ್ತಿದೆ” ಎಂದು ಬೇಸರ ವ್ಯಪ್ತಕಡಿಸಿದೆ.
ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟವು ಹಲವು ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದು, ಮುಖ್ಯಮಂತ್ರಿಯನ್ನು ಭೇಟಿಯಾಗುವುದಾಗಿ ಹೇಳಿದೆ. ಒಂದು ವೇಳೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದೆ.
ಇದನ್ನೂ ಓದಿ: ಆಟೋರಿಕ್ಷಾ ಮೀಟರ್‌ಗಳ ಪರಿಷ್ಕರಣಾ ವೆಚ್ಚ ರೂ.450ಕ್ಕೆ ನಿಗದಿಗೊಳಿಸಿದ ಮಾಪನ ಶಾಸ್ತ್ರ ಇಲಾಖೆ
ಒಕ್ಕೂಟದ ಬೇಡಿಕೆಗಳು ಕೆಳಗಿನಂತಿವೆ:
1) ಅಕ್ರಮ ರ‍್ಯಾಪಿಡೋ ಬೈಕ್ ಟ್ಯಾಕ್ಟಿಗಳನ್ನು ನಿಷೇಧಿಸಬೇಕು.
2) ಶಕ್ತಿಯೋಜನೆಯ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣದಿಂದ ನಷ್ಟ ಅನುಭವಿಸುತ್ತಿರುವ ಆಟೋ, ಟ್ಯಾಕ್ಟಿ ಚಾಲಕರಿಗೆ ಪ್ರತಿ ತಿಂಗಳು 10 ಸಾವಿರ ಪರಿಹಾರ ಹಣ ನೀಡಬೇಕು.
3) ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.
4) ಚಾಲಕರ ಪುನರ್‌ಶ್ಚೇತನಕ್ಕೆ ಕಡಿಮೆ ಬಡ್ಡಿಯಲ್ಲಿ ಜಾತಿವಾರು ನಿಗಮಗಳಿಂದ ನೇರ ಸಾಲ ಯೋಜನೆಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸುಲಭ ಕಂತುಗಳಲ್ಲಿ 2 ಲಕ್ಷ ಸಾಲದ ಸೌಲಭ್ಯ ಒದಗಿಸಬೇಕು.
5) ಎಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಆಟೋ ರಹದಾರಿ ನೀಡಬೇಕು.
6) ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ರ‍್ಯಾಪಿಡೋ, ಓಲಾ, ಊಬರ್ ಕಂಪನಿ ಹೆಸರಿಗೆ ಬಲ್ಕ್ ಆಗಿ ನೋಂದಣಿ ಮಾಡುತ್ತಿರುವುದನ್ನು ನಿಲ್ಲಿಸಬೇಕು.
ಇದನ್ನೂ ಓದಿ: ಆಟೋರಿಕ್ಷಾ ಗ್ಯಾಸ್ ಮೇಲಿನ ತೆರಿಗೆ ಕಡಿತಗೊಳಿಸಿ- ಮೀಟರ್ ದರ ಕಿ.ಮೀ. 16 ರೂಪಾಯಿಗೆ ಹೆಚ್ಚಿಸಲು ಎಆರ್‌ಡಿಯು ಪ್ರತಿಭಟನೆ