ರಾಯಚೂರು: ಲಿಂಗಸ್ಗೂರು ತಾಲೂಕಿನ ಗೆಜ್ಜಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧಾಲಯ ಸಿಬ್ಬಂದಿ ಹುದ್ದೆಯನ್ನು ಸೃಜನೆ ಮಾಡಬೇಕು ಹಾಗೂ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಅನ್ನು ಒದಗಿಸಬೇಕು ಎಂದು ಗೆಜ್ಜಗಟ್ಟಾ ಗ್ರಾಮ ಪಂಚಾಯಿತಿ ಸದಸ್ಯ ರಮೇಶ ವೀರಾಪೂರು ಆಗ್ರಹಿಸಿದ್ದಾರೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದ್ದಾರೆ.
ಇದನ್ನು ಓದಿ: ವೈದ್ಯಕೀಯ ಸಾಮಾಗ್ರಿಗಳ ಕೊರತೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಚಿಕಿತ್ಸೆಗೆ ಹರಸಾಹಸ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆಗಳ ವಿರುದ್ಧ ತಾಲ್ಲೂಕು ಆರೋಗ್ಯ ಇಲಾಖೆ ಆಯುಕ್ತರ ಕಛೇರಿ ಹಾಗೂ ಜಿಲ್ಲಾ ಆರೋಗ್ಯ ಆಯುಕ್ತರ ಕಚೇರಿ ಮುಂದೆ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್‌ಐ) ಹಾಗೂ ರೈತರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಜನವಿರೋಧಿ ನೀತಿಯಾಗಿದೆ. ಈ ಕೂಡಲೇ ಗೆಜ್ಜಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಇರುವ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮನವಿ ಮಾಡಿದರು.
ಅಲ್ಲದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿಗಳನ್ನು ಹೊರಗಡೆ ತರಲು ಹೇಳಲಾಗುತ್ತಿದೆ. ಅಗತ್ಯ ಇರುವ ಪ್ರಮಾಣದಲ್ಲಿ ಹಾಗೂ ಕುಂದುಂಟಾಗದಂತೆ ಔಷಧಿಗಳನ್ನು ಆಸ್ಪತ್ರೆಗೆ ಪೂರೈಸಬೇಕು ಎಂದು ರಮೇಶ್ ವೀರಾಪೂರು ಮನವಿಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ