ಎಎಪಿ ಮತ್ತು ಎಸ್‌ಪಿ ಜೊತೆ ಮೈತ್ರಿ ಫಲಪ್ರದ; ಟಿಎಂಸಿ ಜೊತೆ ಮಾತುಕತೆಗೆ ಸಜ್ಜಾದ ಕಾಂಗ್ರೆಸ್

ನವದೆಹಲಿ: ಇಂಡಿಯಾ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್ ಪಕ್ಷವು ಯುಪಿಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮತ್ತು ದೆಹಲಿಯಲ್ಲಿ ಎಎಪಿಯೊಂದಿಗೆ ಮೈತ್ರಿ ಫಲಪ್ರದವಾದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ಕೂಡಾ ಕಾಂಗ್ರೆಸ್ ಮಾತುಕತೆ ನಡೆಸುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ದೆಹಲಿಯ ಏಳು ಸ್ಥಾನಗಳಲ್ಲಿ ಎಎಪಿ ನಾಲ್ಕು ಮತ್ತು ಕಾಂಗ್ರೆಸ್ ಮೂರರಲ್ಲಿ ಸ್ಪರ್ಧಿಸಲಿವೆ. ಎರಡೂ ಪಕ್ಷಗಳು ಗುಜರಾತ್, ಗೋವಾ, ಚಂಡೀಗಢ ಮತ್ತು ಹರಿಯಾಣದಲ್ಲಿಯೂ ಸ್ಥಾನಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿವೆ ಎಂದು ವರದಿಯಾಗಿದ್ದು ಶುಕ್ರವಾರ ಉಭಯ ಪಕ್ಷಗಳು ಜಂಟಿ ಹೇಳಿಕೆ ನೀಡಲಿದೆ ಎನ್ನಲಾಗಿದೆ. ಸೀಟು ಹಂಚಿಕೆಯ ಮಾತುಕತೆಗಳ ಬಗ್ಗೆ ಗೊಂದಲ ಏರ್ಪಟ್ಟಿದ್ದರೂ, ಬುಧವಾರ ಪಕ್ಷದ ಉನ್ನತ ನಾಯಕತ್ವದ ಮಧ್ಯಪ್ರವೇಶದ ನಂತರ ಪರಿಸ್ಥಿತಿ ಬದಲಾಯಿತು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹುಕ್ಕಾ ಬಾರ್‌ ಮತ್ತು ಸಿಗರೇಟ್ ಮಾರಾಟ ನಿಷೇಧದ ಮಸೂದೆ ಅಂಗೀಕಾರ

ಇತ್ತೀಚಿನ ಒಪ್ಪಂದದ ಪ್ರಕಾರ, ಕಾಂಗ್ರೆಸ್ ಪೂರ್ವ ದೆಹಲಿ, ಚಾಂದಿನಿ ಚೌಕ್ ಮತ್ತು ಈಶಾನ್ಯ ದೆಹಲಿಯಿಂದ ಸ್ಪರ್ಧಿಸಲಿದೆ. ಅದೇ ವೇಳೆ ಎಎಪಿ ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ವಾಯುವ್ಯ ದೆಹಲಿಯಿಂದ ಕಣಕ್ಕಿಳಿಯಲಿದೆ. ಎರಡೂ ಪಕ್ಷಗಳ ರಾಜ್ಯ ಘಟಕಗಳು ಮೈತ್ರಿಗೆ ಪ್ರತಿರೋಧ ವ್ಯಕ್ತಪಡಿಸಿದ್ದರೂ, ಕಾಂಗ್ರೆಸ್ ವರಿಷ್ಠರು ಪರಿಸ್ಥಿತಿಯ ‘ವಾಸ್ತವ ದೃಷ್ಟಿಕೋನ’ವನ್ನು ಹೊಂದಲು ಪಕ್ಷದ ಸ್ಥಳೀಯ ನಾಯಕರನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಯ ಎಲ್ಲಾ ಏಳು ಸ್ಥಾನಗಳು ಪ್ರಸ್ತುತ ಬಿಜೆಪಿ ಬಳಿ ಇವೆ. ಮತ ಹಂಚಿಕೆಗೆ ಸಂಬಂಧಿಸಿದಂತೆ, 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿತ್ತು ಮತ್ತು ಎಎಪಿ ಎರಡರಲ್ಲಿ ಎರಡನೇ ಸ್ಥಾನದಲ್ಲಿತ್ತು.

ಈ ನಡುವೆ ಎಎಪಿ ಮತ್ತು ಕಾಂಗ್ರೆಸ್ ಇತರ ರಾಜ್ಯಗಳಲ್ಲೂ ಒಪ್ಪಂದ ಮಾಡಿಕೊಂಡಿದೆ. ಗೋವಾದಲ್ಲಿ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ವೆಂಜಿ ವಿಗಾಸ್ ದಕ್ಷಿಣ ಗೋವಾದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವೂ ಈ ಹಿಂದೆ ಘೋಷಿಸಿದ್ದರೂ, ಈಗ ಅವರ ಹೆಸರನ್ನು ಹಿಂಪಡೆಯಲಿದೆ.

ಗುಜರಾತ್‌ನ ಭರೂಚ್ ಮತ್ತು ಭಾವನಗರ ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸುವ ಒಪ್ಪಂದಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕ್ಷೇತ್ರಗಳಿಗೆ ಪಕ್ಷವು ಈಗಾಗಲೇ ತನ್ನ ಅಭ್ಯರ್ಥಿಗಳಾದ ಚೈತಾರ್ ವೈಸವ ಮತ್ತು ಉಮೇಶ್ ಭಾಯಿ ಮಕ್ವಾನಾ ಅವರನ್ನು ಹೆಸರಿಸಿದೆ. ಬಿಜೆಪಿ ವಶದಲ್ಲಿರುವ ಚಂಡೀಗಢದ ಏಕೈಕ ಸ್ಥಾನಕ್ಕಾಗಿ ಕಾಂಗ್ರೆಸ್ ಪೈಪೋಟಿ ನಡೆಸುತ್ತಿದ್ದು, ಹರಿಯಾಣದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಆಮ್‌ ಆದ್ಮಿ ಪಕ್ಷಕ್ಕೆ ಬಿಟ್ಟುಕೊಡಲಿದೆ.

ಇದನ್ನೂ ಓದಿ: ಖಾಸಗಿ ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ; ಗೊಂದಲಕ್ಕೆ ಅಂತ್ಯ ಹಾಡಿದ ಸರ್ಕಾರ

ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಎಎಪಿ 13 ಸ್ಥಾನಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ. ಪಂಜಾಬ್‌ನಲ್ಲಿ ಏಕಾಂಗಿಯಾಗಿ ಹೋಗುವ ನಿರ್ಧಾರವು ಪರಸ್ಪರ ಒಪ್ಪಿಗೆಯಾಗಿದೆ ಎಂದು ಕೇಜ್ರಿವಾಲ್ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಮಧ್ಯೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. “ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದಗಳನ್ನು ಮಾಡಿದ ನಂತರ ಕಾಂಗ್ರೆಸ್, ಮಮತಾ ಬ್ಯಾನರ್ಜಿ ಅವರೊಂದಿಗೆ ಒಪ್ಪಂದ ಮಾಡಲು ತಯಾರಾಗಿದೆ” ಎಂದು ವರದಿ ಹೇಳಿದೆ.

“ಬಂಗಾಳದ 42 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಕಾಂಗ್ರೆಸ್ ಪಡೆಯುವ ನಿರೀಕ್ಷೆಯಲ್ಲಿದೆ. ಆದರೆ ಆಮ್‌ ಆದ್ಮಿ ಪಕ್ಷ ಮತ್ತು ಎಸ್ಪಿ ಜೊತೆಗಿನ ಒಪ್ಪಂದಗಳಂತೆ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿರುವ ರಾಜ್ಯಗಳ ಕ್ಷೇತ್ರಗಳನ್ನು ಕೂಡಾ ಅವರು ಸ್ಥಾನಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ತೃಣ ಮೂಲ ಪಕ್ಷದ ಜೊತೆಗೆ ಅಸ್ಸಾಂನಲ್ಲಿ ಎರಡು ಮತ್ತು ಮೇಘಾಲಯದಲ್ಲಿ ಒಂದು ಸ್ಥಾನವನ್ನು ಹಂಚಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ” ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಹೇಳಿದೆ.

ವಿಡಿಯೊ ನೋಡಿ: ಅಂಗನವಾಡಿ ಕಂದಮ್ಮಗಳ ದಾಹ ನೀಗಿಸಲು ಅಜ್ಜಿ ತೋಡಿದ್ದ ಬಾವಿ ಮುಚ್ಚಿದ ಅಧಿಕಾರಿಗಳು Janashakthi Media

Donate Janashakthi Media

Leave a Reply

Your email address will not be published. Required fields are marked *