ನವದೆಹಲಿ: ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರ ನಿವಾಸದಲ್ಲಿ ನಡೆದ ಆಮ್ ಆದಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಲೋಕೋಪಯೋಗಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರವಾಸೋದ್ಯಮ, ಸಂಸ್ಕೃತಿ ಸೇರಿದಂತೆ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಅತಿಶಿ ರನ್ನು ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಮುಖ್ಯಮಂತ್ರಿ
ಅವರ ಹೆಸರನ್ನು ಅರವಿಂದ್ ಕೇಜ್ರಿವಾಲ್ ಅಧಿಕೃತವಾಗಿ ಘೋಷಣೆ ಮಾಡಿದರು. ಶಾಸಕಾಂಗ ಸಭೆಯಲ್ಲಿ ಅತಿಶಿ ಸಿಂಗ್ ಹೆಸರನ್ನು ಖುದ್ದು ಕೇಜ್ರಿವಾಲ್ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲಾ ಶಾಸಕರು ಬೆಂಬಲ ನೀಡಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ ಕ್ರೇಜಿವಾಲ್ ಪತ್ನಿ, ಸಚಿವರಾದ ಗೋಪಾಲ್ ರೈ, ಸೌರವ್ ಭಾರದ್ವಾಜ್, ಕೈಲಾಸ್ ಗೆಹ್ಲೋಟ್ ಹೆಸರುಗಳು ಕೇಳಿಬಂದವು. ಅಂತಿಮವಾಗಿ ಕೇಜ್ರಿವಾಲ್ ಅವರ ಸೂಚನೆಯಂತೆ ಎಲ್ಲಾ ಶಾಸಕರು ಅತಿಶಿ ಸಿಂಗ್ ಅವರ ಹೆಸರಿಗೆ ಬೆಂಬಲ ಸೂಚಿಸಿದ್ದಾರೆ.
ಯಾರು ಅತಿಶಿ ಸಿಂಗ್?:
ಆಮ್ ಆದಿ ಪಕ್ಷದ ರಾಷ್ಟ್ರೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿರುವ ಅತಿಶಿ ಸಿಂಗ್ ಕೇಜ್ರಿವಾಲ್ ಅವರ ನಂಬಿಗಸ್ಥ ಆಪ್ತರಲ್ಲಿ ಒಬ್ಬರಾಗಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯ ಜೈಲು ಪಾಲಾದ ಮೇಲೆ ಇಡೀ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡವರಲ್ಲಿ ಇವರು ಒಬ್ಬರು.
ದೆಹಲಿಯ ಶಿಕ್ಷಣ ಸಚಿವೆಯಾಗಿ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿದ್ದು, ಉತ್ತಮ ಶಿಕ್ಷಣ, ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಿದ್ದು ದೇಶದಲ್ಲೇ ಕ್ರಾಂತಿಕಾರಿ ಬೆಳೆವಣಿಗೆಯಾಗಿತ್ತು. ದೆಹಲಿಯಲ್ಲಿ ಈಗಲೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳು ಎದ್ದು ನಿಂತಿರುವುದರ ಹಿಂದೆ ಅತಿಶಿಯವರ ಪರಿಶ್ರಮವಿದೆ.
ದೆಹಲಿಯ ಕಲ್ಯಾಜಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಅತಿಶಿ ಸಿಂಗ್, ಸಾರ್ವಜನಿಕ ಲೆಕ್ಕಸಮಿತಿ, ಲೆಕ್ಕಪತ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಲ್ಪಸಂಖ್ಯಾತ ಸೇರಿದಂತೆ ಹಲವು ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ದೇಶದಲ್ಲಿ ಜಿದ್ದುಗಟ್ಟಿರುವ ಭ್ರಷ್ಟಾಚಾರ ವ್ಯವಸ್ಥೆಯನ್ನು ತೊಡೆದು ಹಾಕಲೆಂದೇ 2013ರಲ್ಲಿ ಆಮ್ ಆದಿ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯ ಪಾದಾರ್ಪಣೆ ಮಾಡಿದರು.
ಇದನ್ನೂ ನೋಡಿ: ಮಂಗಳೂರು : ಈದ್ ಮೆರವಣಿಗೆ ವೇಳೆ ಸಿಂಹಿ ಹಂಚಿದ ಹಿಂದೂ ಸಮುದಾಯ Janashakthi Media