ಗುಜರಾತ್‌ ಚುನಾವಣಾ ಪ್ರಚಾರ; ಎಎಪಿ-ಬಿಜೆಪಿ ನಡುವೆ ಕಲ್ಲು ತೂರಾಟ

ಸೂರತ್: ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ಜೋರಾಗಿ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ), ಅಖಿಲ ಭಾರತ ಕಾಂಗ್ರೆಸ್‌ ಸಮಿತಿ(ಎಐಸಿಸಿ), ಆಮ್‌ ಆದ್ಮಿ ಪಾರ್ಟಿ(ಎಎಪಿ) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಸೂರತ್‌ನ ಸರ್ಥಾನಾ ಪ್ರದೇಶದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಎಎಪಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಪರಸ್ಪರರು ಕಲ್ಲು ತೂರಾಟ ನಡೆಸಿ ಕಾರುಗಳ ಗಾಜುಗಳನ್ನು​ ಧ್ವಂಸ ಮಾಡಿದ್ದಾರೆ ಎಂದು ವರದಿಯಾಗಿದೆ.

ಸೂರತ್‌ನ ಕಿರಣ್ ಚೌಕ್‌ನಲ್ಲಿ ಎಎಪಿ ವತಿಯಿಂದ ಚುನಾವಣಾ ಪ್ರಚಾರ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸರ್ಥಾನಾ ಪ್ರದೇಶದಲ್ಲಿ ಎಎಪಿ ಚುನಾವಣಾ ಸಭೆ ನಡೆಯುತ್ತಿದ್ದ ವೇಳೆ ಕಾರ್ಯಕರ್ತರು ಕುರ್ಚಿ ಎಸೆದಿದ್ದು, ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಇದಾದ ಮೇಲೆ ಎಎಪಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿ ಕಾರುಗಳನ್ನು ಧ್ವಂಸಗೊಳಿಸಿದ್ದಾರೆ. ಕೆಲ ವಾಹನಗಳ ಗಾಜುಗಳು ಒಡೆದಿದೆ. ಘಟನೆಯಿಂದಾಗಿ ಹಲವರು ಗಾಯಗೊಂಡಿದ್ದಾರೆ. ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕಾಮಿಸಿದ ಪೊಲೀಸರು ಘರ್ಷಣೆ ಶಾಂತಗೊಳಿಸಿ, ಪರಿಸ್ಥಿತಿ ಹತೋಟಿಗೆ ತಂದರು.

ಗುಜರಾತ್ ವಿಧಾನಸಭೆಯ 182 ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತದಾನ ನಡೆಯಲಿದೆ. ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಮತದಾನ ನಿಗದಿಯಾಗಿದೆ. ಡಿಸೆಂಬರ್ 8 ರಂದು ಹಿಮಾಚಲ ಪ್ರದೇಶದ ಫಲಿತಾಂಶದ ಜೊತೆಗೆ ಗುಜರಾತ್ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

Donate Janashakthi Media

Leave a Reply

Your email address will not be published. Required fields are marked *