“ವಿಜ್ಞಾನ-ತಂತ್ರಜ್ಞಾನದಲ್ಲಿ ಸ್ವಾವಲಂಬನೆಯ ಪಥವನ್ನು ರೂಪಿಸಿದ ಕಣ್ಣೋಟಕ್ಕೆ ಸಂದ ಗೌರವ”

ಚಂದ್ರಯಾನ-3 ರ ಅಸಾಧಾರಣ ಸಾಧನೆ: ಎಐಪಿಎಸ್ಎನ್ ಅಭಿನಂದನೆ

ಅಖಿಲ ಭಾರತ ಜನ ವಿಜ್ಞಾನ ಜಾಲ (ಎ.ಐ.ಪಿ.ಎಸ್‍.ಎನ್.) ಚಂದ್ರಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದ್ದಕ್ಕೆ ಇಸ್ರೊ, ಮತ್ತು ಅದರ ಅಂಗ ಸಂಸ್ಥೆಗಳ ವಿಜ್ಞಾನಿಗಳು, ಎಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಇತರ ಎಲ್ಲರನ್ನು ಮತ್ತು ಎಲ್ಲಾ ಸಂಬಂಧಿತ ಸಾರ್ವಜನಿಕ ವಲಯದ ಸಂಸ್ಥೆಗಳು, ಇತರ ಕಂಪನಿಗಳು ಮತ್ತು ಗುತ್ತಿಗೆದಾರರನ್ನುಅಭಿನಂದಿಸಿದೆ. ಉಡಾವಣೆಯಿಂದ ಹಿಡಿದು ಚಂದ್ರನ ಕಕ್ಷೆಗೆ ಸೇರಿಸುವ ವರೆಗೆ, ಮತ್ತು ವಿಶೇಷವಾಗಿ ಚಂದ್ರನ ಮೇಲೆ ಲ್ಯಾಂಡರ್‌ನ ಸ್ವಯಂಚಾಲಿತ ಅವರೋಹಣವನ್ನು ಮಿಷನ್ ನಿಖರತೆಯಿಂದ ಕಾರ್ಯಗತಗೊಳಿಸಿರುವುದು ಅಸಾಧಾರಣ ಸಾಧನೆ ಎಂದು ಅದು ಹೇಳಿದೆ.. ನಿರ್ದಿಷ್ಟವಾಗಿ, ಇಸ್ರೊ ತಂಡ ಮತ್ತು ಸಹಯೋಗಿ ತಜ್ಞರನ್ನು ಚಂದ್ರಯಾನ-2 ರ ಸಮಯದಲ್ಲಿ ಲ್ಯಾಂಡರ್ ಪತನಕ್ಕೆ ಕಾರಣವಾದ ಅಂಶಗಳ ಬಗ್ಗೆ ಅವರು ಸಾಮೂಹಿಕ, ಪಾರದರ್ಶಕ ಮತ್ತು ಗುರಿ-ಆಧಾರಿತ ವಿಶ್ಲೇಷಣೆ ಮತ್ತು ನಂತರದ ಪರೀಕ್ಷೆ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಸರಿಪಡಿಸುವ ಕ್ರಮಗಳಿಗಾಗಿ ಎ.ಐ.ಪಿ.ಎಸ್‍.ಎನ್. ಅಭಿನಂದಿಸಿದೆ. ಈ ಪ್ರಕ್ರಿಯೆ ಮತ್ತು ಚಂದ್ರಯಾನ-3 ರ ಎದ್ದುಕಾಣುವ ಯಶಸ್ಸು ವೈಜ್ಞಾನಿಕ ವಿಧಾನ, ಪುರಾವೆ-ಆಧಾರಿತ ತಾರ್ಕಿಕತೆ ಮತ್ತು ಸಮಾನ ಸ್ಕಂಧರ ವಿಮರ್ಶೆಯ ಶ್ಲಾಘನೀಯ ಉದಾಹರಣೆಯಾಗಿದೆ, ಇದನ್ನು ವಿದ್ಯಾರ್ಥಿಗಳು, ಮಾಧ್ಯಮಗಳು ಮತ್ತು ಸಾರ್ವಜನಿಕರಿಗೆ ವ್ಯಾಪಕವಾಗಿ ತಿಳಿಸಿ ಹೇಳಬೇಕಾಗಿದೆ ಎಂದು ಅದು ಹೇಳಿದೆ. ಚಂದ್ರಯಾನ-3ರ ಯಶಸ್ಸು, ಸ್ವಾತಂತ್ರ್ಯಾನಂತರದ ಮೊದಲ ಕೆಲವು ದಶಕಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತ ಸಾಗುವ ಪಥವನ್ನು ರೂಪಿಸಿದ ಕಣ್ಣೋಟಕ್ಕೆ ಮತ್ತು ನಾಯಕತ್ವಕ್ಕೆ ಗೌರವ ಸಲ್ಲಿಸಿದಂತಾಗಿದೆ ಎಂದು ಎ.ಐ.ಪಿ.ಎಸ್‍.ಎನ್.ಹೇಳಿದೆ.

ಚಂದ್ರಯಾನ-3 ಮಿಷನ್‍ ಭವಿಷ್ಯದಲ್ಲಿ ಚಂದ್ರ ಮತ್ತು ಇತರ ಬಾಹ್ಯಾಕಾಶ ಕಾಯಗಳಿಗೆ ಸಿಬ್ಬಂದಿ-ರಹಿತ ಮತ್ತು ಸಿಬ್ಬಂದಿ-ಸಹಿತ ಯಾನಗಳತ್ತ ಒಂದು ಮಹತ್ವದ ಮೈಲಿಗಲ್ಲು ಎಂದು ಎ.ಐ.ಪಿ.ಎಸ್‍.ಎನ್. ಅಭಿಪ್ರಾಯ ಪಟ್ಟಿದೆ. ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿನ ಭಾರತದ ಸಾಮರ್ಥ್ಯಗಳು ಭಾರತವನ್ನು ಅಂತಹ ಕೆಲವೇ ಹೆಮ್ಮೆ ಪಡಬಹುದಾದ ರಾಷ್ಟ್ರಗಳ ಸಾಲಿನಲ್ಲಿ ಇರಿಸುತ್ತದೆ. ಅದರೊಂದಿಗೆ ಅನೇಕ ಅವಕಾಶಗಳು ಮತ್ತು ಸವಾಲುಗಳು ಬರುತ್ತವೆ. ತರುತ್ತದೆ. ಚಂದ್ರಯಾನ-3 ಮಿಷನ್‌ನ ಯಶಸ್ಸು ಚಂದ್ರನ ಅನ್ವೇಷಣೆಯಲ್ಲಿ ಅಂತರರಾಷ್ಟ್ರೀಯ ಆಸಕ್ತಿ ಹೆಚ್ಚುತ್ತಿರುವ ಸಮಯದಲ್ಲಿ, ಬರುತ್ತಿದೆ. ಇದರಲ್ಲಿ ಚಂದ್ರನ ಆಚೆಯ ಅನ್ವೇಷಣೆಯ ಮಹಾದ್ವಾರಗಳಾಗಬಹುದಾದ ಚಂದ್ರನ ಮೇಲೆ ಅಥವಾ ಅದರ ಸುತ್ತ ತಿರುಗುವ ಶಾಶ್ವತ ಅಥವ ಧೀರ್ಘಕಾಲೀನ ಸಿಬ್ಬಂದಿ- ಸಹಿತವಾದ ನಿಲ್ದಾಣಗಳನ್ನು ಸ್ಥಾಪಿಸಬಹುದಾದ ಸಂಭವವೂ ಸೇರಿದೆ. ಅಂತಹ ಭವಿಷ್ಯದ ಚಟುವಟಿಕೆಗಳು ತಮ್ಮೊಂದಿಗೆ ಮಹತ್ತರವಾದ ಜವಾಬ್ದಾರಿಗಳನ್ನು ತರುತ್ತವೆ. ಇವುಗಳಲ್ಲಿ ಭಾಗವಹಿಸಬಹುದಾದ ದೇಶವಾಗಿ ಭಾರತ ಸಮಸ್ತ ಮಾನವಕುಲದ ಪರವಾಗಿ ಅಂತಹ ಜವಾಬ್ದಾರಿಗಳನ್ನು ಹೊರಲು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕು

ಇದನ್ನೂ ಓದಿ:‘ಚಂದ್ರಯಾನ-3’ ಸಕ್ಸಸ್, ಇತಿಹಾಸ ಬರೆದ ಭಾರತ!

ವಿಕ್ರಮ್‍ ಲ್ಯಾಂಡರ್‌ನ ಯಶಸ್ವಿನ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿಗಳು ಗಮನಿಸಿದಂತೆ, ಚಂದ್ರ, ನಮ್ಮ ಸೌರವ್ಯೂಹ ಮತ್ತು ಅದರಾಚೆಗಿನ ಬಾಹ್ಯಾಕಾಶ ಎಲ್ಲವೂ ಎಲ್ಲರ ಒಳಿತಿಗಗಾಗಿ, ಅದರ ಬಗ್ಗೆ ಜ್ಞಾನ ಸಮಸ್ತ ಮಾನವ ಕುಲಕ್ಕೆ ಸೇರಿದ್ದು. ಬಾಹ್ಯಾಕಾಶದ ಅನ್ವೇಷಣೆ ಮತ್ತು ಬಳಕೆಯಲ್ಲಿ ರಾಷ್ಟ್ರಗಳ ಚಟುವಟಿಕೆಗಳನ್ನು ಕುರಿತಾದ ಸೂತ್ರಗಳ ಮೇಲಿನ 1967ರ ಸಂಧಿ “ಅನ್ವೇಷಣೆ ಮತ್ತು ಬಳಕೆಯನ್ನು .. .. ಎಲ್ಲಾ ದೇಶಗಳ ಪ್ರಯೋಜನಕ್ಕಾಗಿ ಮತ್ತು ಹಿತಾಸಕ್ತಿಗಳಿಗಾಗಿ ಕೈಗೊಳ್ಳಲಾಗುತ್ತದೆ ಮತ್ತು ಅದು ಸಮಸ್ತ ಮಾನವಕುಲಕ್ಕೆ ಸೇರಿದ್ದಾಗಿರುತ್ತದೆ” ಎಂದಿದೆ. ಮುಂದುವರೆದು, “ಬಾಹ್ಯಾಕಾಶ… ಸಾರ್ವಭೌಮತೆಯ ದಾವೆಗಳ ಮೂಲಕ , ಅದನ್ನು ಆಕ್ರಮಿಸಿಕೊಳ್ಳುವ ಮೂಲಕ ಅಥವಾ ಬೇರಾವುದೇ ವಿಧಾನದಲ್ಲಿ ರಾಷ್ಟ್ರೀಯ ಸ್ವಾಧೀನಕ್ಕೆ ಒಳಪಡುವುದಿಲ್ಲ” ಎಂದು ಅದು ಘೋಷಿಸಿದೆ.

ಹಲವು ದೇಶಗಳು, ಕಂಪನಿಗಳು ಮತ್ತು ಇತರರು ತಮ್ಮ ಮುಂದುವರೆದ ಬಾಹ್ಯಾಕಾಶ ತಂತ್ರಜ್ಞಾನವನ್ನು ವಾಣಿಜ್ಯಕ್ಕಾಗಿ ಅಥವಾ ಸಾಮರಿಕ ಪ್ರಯೋಜನಕಕ್ಕಾಗಿ ಬಳಸಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಕಳವಳಕಾರಿ ಎಂದು ಎ.ಐ.ಪಿ.ಎಸ್.ಎನ್. ಹೇಳಿದೆ. ಯುಎಸ್ ನೇತೃತ್ವದ ಆರ್ಟೆಮಿಸ್ ಮಿಷನ್ ಈ ಸಾಧ್ಯತೆಯನ್ನು ಬಹಿರಂಗವಾಗಿಯೇ ಒಪ್ಪಿಕೊಳ್ಳುತ್ತದೆ ಮತ್ತು ದುರದೃಷ್ಟವಶಾತ್ ಭಾರತದ ಹೊಸ ಬಾಹ್ಯಾಕಾಶ ನೀತಿ ಕೂಡ ಹಾಗೆಯೇ ಹೇಳುತ್ತದೆ. ಸಾಮಾನ್ಯವಾಗಿ ಇಂತಹ ನೀತಿಗಳನ್ನು ಸಂಸತ್ತಿನಲ್ಲಿ ಮಂಡಿಸಬೇಕು, ಚರ್ಚಿಬೇಕು. ಆದರೆ ಅದನ್ನು ಇನ್ನೂ ಮಂಡಿಸಲಾಗಿಲ್ಲ ಅಥವಾ ಚರ್ಚಿಸಲಾಗಿಲ್ಲ.

ಚಂದ್ರ ಮತ್ತು ಇತರ ಭೂಮಿಯೇತರ ಕಾಯಗಳು ಸಮಸ್ತ ಮಾನವಕುಲದ ಒಳಿತಿಗಾಗಿ, ಮತ್ತು ಇಂತಹ ಕಾಯಗಳಲ್ಲಿ ಕಂಡುಬರುವ ಯಾವುದೇ ಸಂಪನ್ಮೂಲವನ್ನು ಒಂದು ರಾಷ್ಟ್ರ ಅಥವಾ ಕಾರ್ಪೊರೇಟ್‍ ತನ್ನ ಸೂರೆಗಾಗಿ ಬಳಸುವುದನ್ನು ವಿರೋಧಿಸುವುದಾಗಿ ಭಾರತ ಸ್ಪಷ್ಟವಾಗಿ ಘೋಷಿಸಬೇಕು ಎಂದು ಎ.ಐ.ಪಿ.ಎಸ್.ಎನ್. ಹೇಳಿದೆ. ಬಾಹ್ಯಾಕಾಶ ಸಂಧಿಯನ್ನು ಪುನಶ್ಚೇತನಗೊಳಿಸಬೇಕು ಮತ್ತು ಬಾಹ್ಯಾಕಾಶ ಸಮಸ್ತ ಮಾನವಕುಲದ ಸಮಾನ ಒಳಿತಿಗಾಗಿ ಇರುವಂತೆ ನೋಡಿಕೊಳ್ಳಲು ವಿಶ್ವಸಂಸ್ಥೆಯ ಅಡಿಯಲ್ಲಿ ಒಂದು ಅಂತರ್ರಾಷ್ಟ್ರೀಯ ನಿಯಂತ್ರಕ ವ್ಯಸ್ಥೆಯನ್ನು ರಚಿಸಬೇಕು ಎಂದು ಒತ್ತಾಯ ತರಬೇಕು ಎಂದೂ ಅದು ಹೇಳಿದೆ.

ಚಂದ್ರಯಾನ-3 ಇಳಿದ ಜಾಗವನ್ನು “ಶಿವಶಕ್ತಿ ಬಿಂದು” ಎಂದು ನಾಮಕರಣ ಮಾಡಿರುವುದರ ಬಗ್ಗೆ ಸರಕಾರ ಮರುವಿಚಾರ ಮಾಡುವ ಅಗತ್ಯವಿದೆ ಎಂದು ಎ.ಐ.ಪಿ.ಎಸ್.ಎನ್. ಹೇಳಿದೆ. ಏಕೆಂದರೆ ಇದು ಅಂತರ್ರಾಷ್ಟ್ರೀಯ ಖಗೋಳ ಸಂಘ (ಐಎಯು) ರೂಪಿಸಿರುವ ನಾಮಕರಣದ ರೂಢಿಗೆ ವಿರುದ್ಧವಾಗಿರುವಂತೆ ಕಾಣುತ್ತದೆ. ಅದು ಚಂದ್ರನ ವೈಶಿಷ್ಟ್ಯಗಳಿಗೆ ಗಗನಯಾತ್ರಿಗಳು ಅಥವಾ ಭೌತಶಾಸ್ತ್ರಜ್ಞರು, ಸೇರಿದಂತೆ ಈ ಕ್ಷೇತ್ರಕ್ಕೆ ಕೊಡುಗೆ ನೀಡಿದ ವಿಜ್ಞಾನಿಗಳ ಹೆಸರನ್ನು ಇಡಬೇಕು ಎಂದು ಹೇಳುತ್ತದೆ

ಉದಾ: ಆರ್ಯಭಟ, ಹೋಮಿ ಭಾಭಾ -ಇವನ್ನು ಐಎಎಯು ಈ ಹಿಂದೆ ಸ್ವೀಕರಿಸಿದೆ. ಸರಕಾರ ಐಎಯು ನಿಯಮಾವಳಿಗಳಿಗೆ ಅನುಗುಣವಾದ ಒಂದು ಹೆಸರನ್ನು ಪ್ರಸ್ತಾಪ ಮಾಡಬೇಕು, ಆಮೂಲಕ ಅದು ಅಂತರ್ರಾಷ್ಟ್ರೀಯ ಸ್ವೀಕತಿ ಪಡೆಯುವಂತಾಗಬೇಕು ಎಂದು ಎ.ಐ.ಪಿ.ಎಸ್‍.ಎನ್‍. ಸಲಹೆ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *