ಕುಂದಾಪುರ : ಈ ದೇಶದ ಜನರು ಸಂವಿಧಾನದ ಪೀಠಿಕೆಯಲ್ಲಿ ನೀಡಿರುವ ವಾಗ್ದಾನದಂತೆ ಸಮಾನತೆಯ, ಶೋಷಣೆರಹಿತ ಸಮಾಜವನ್ನು ಕಟ್ಟಲು, ಭಾತೃತ್ವದ ಭಾರತವನ್ನು ಕಟ್ಟುವ ಹಂಬಲ ಹೆಚ್ಚಾಗಲಿ ಎಂದು ಜನಪರ ಸಂಘಟನೆಗಳು ಕುಂದಾಪುರದಲ್ಲಿ ಮೊಂಬತ್ತಿ ಮೆರವಣಿಗೆ ನಡೆಸಿದರು.
ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿವೆ.ಪ್ರತಿವರ್ಷ ವರದಿಯಾಗುವ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹತ್ತು ವರ್ಷಗಳ ಹಿಂದಿಕ್ಕಿಂತ ಶೇಕಡ ನಲವತ್ತೈದರಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ಅಂಕಿಸಂಖ್ಯೆಗಳು ತಿಳಿಸುತ್ತವೆ. ಅಸ್ಪ್ರಶ್ಯತೆ, ಜಾತಿ ನಿಂದನೆಯ ಪ್ರಕರಣಗಳೂ ಹೆಚ್ಚುತ್ತಿವೆ. ತನ್ನ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ದೇವರ ಗುಜ್ಜು ಕೋಲನ್ನು ಎತ್ತಿದ್ದಕ್ಕಾಗಿ ಕರ್ನಾಟಕದಲ್ಲಿ ದಲಿತ ಹುಡುಗನೊಬ್ಬನನ್ನು ತಳಿಸಿ ಆ ಕುಟುಂಬಕ್ಕೆ ದಂಡ ವಿಧಿಸಿದ ಘಟನೆ ನಡೆದಿದೆ. ನಿತ್ಯವೂ ಇಂತಹ ನೂರಾರು ಘಟನೆಗಳು ನಡೆಯುತ್ತವೆ. ಎಲ್ಲವೂ ವರದಿಯಾಗುವುದಿಲ್ಲ ಎಂದು ಪ್ರತಿಭಟನಾ ನಿರತರೂ ಆರೋಪಿಸಿದರು.
ನಾವು ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಾದ ಸಮಯವಿದು. ಅಸಮಾನತೆ, ಅಸ್ಪ್ರಶ್ಯತೆ, ಅತ್ಯಾಚಾರಗಳು ನಮ್ಮನ್ನು ತಲೆತಗ್ಗಿಸುವಂತೆ ಮಾಡಿವೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳಬೇಕಾಗಿದೆ ಎಂದು ಸಂಘಟನೆಗಳ ನಾಯಕರು ತಿಳಿಸಿದರು.
ಶನಿವಾರ, ಅಕ್ಟೋಬರ್ 1ರಂದು ಸಂಜೆ ಮೋಂಬತ್ತಿ ಹಿಡಿದು, ಕುಂದಾಪುರದ ಶಾಸ್ತ್ರಿ ವೃತ್ತದಿಂದ ಪಾರಿಜಾತ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು. ಸಮುದಾಯ ಕುಂದಾಪುರ, ಆದಿವಾಸಿ ಸಂಘಟನೆ, ಡಿ.ವೈ.ಎಫ್ ಐ,ಕ್ಯಾಥೋಲಿಕ್ ಸಭಾ ಸಂಘಟನೆಗಳು ಸೇರಿ ಮೌನ ಮೆರವಣಿಗೆ ನಡೆಸಿದರು.
ಆರಂಭದಲ್ಲಿ ಸಮುದಾಯದ ಸಂಗಾತಿಗಳು ಸೌಹಾರ್ದದ ಹಾಡುಗಳನ್ನು ಹಾಡಿದರು. ಪುರಸಭಾ ಸದಸ್ಯ ಪ್ರಭಾಕರ ವಿ, ಡಿ.ಎಸ್.ಎಸ್. ನ ರಾಜು ಬೆಟ್ಟಿನ್ಮನೆ, ನ್ಯಾಯವಾದಿ ಮಂಜುನಾಥ ಗಿಳಿಯಾರ್, ಕ್ಯಾಥೋಲಿಕ್ ಸಭಾದ ಶಾಂತಿ ಕ್ವಾರ್ಡ್ರಸ್ ಮುಂತಾದವರು ಮಾತನಾಡಿದರು.