ಐಪಿಎಲ್‌ ಪಂದ್ಯದಲ್ಲಿ ರನ್‌ ಗಳಿಸದೆ ಔಟಾಗಿದ್ದಕ್ಕೆ ಮಾಲೀಕನಿಂದ ಕಪಾಳಕ್ಕೆ ಬಾರಿಸಿಕೊಂಡಿರುವೆ: ರಾಸ್‌ ಟೇಲರ್‌

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಯಾವುದೇ ರನ್‌ ಗಳಿಸಿದೆ, ಸೊನ್ನೆಗೆ ಔಟಾಗಿದ್ದಕ್ಕೆ ಫ್ರಾಂಚೈಸಿ ತಂಡದ ಮಾಲೀಕರೊಬ್ಬರು ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ದರು ಎಂದು ನ್ಯೂಜಿಲ್ಯಾಂಡ್ ಕ್ರಿಕೆಟಿಗ ರಾಸ್ ಟೇಲರ್ 2011ರ ಐಪಿಎಲ್ ಪಂದ್ಯಾವಳಿಯಲ್ಲಿ ತಮಗೆ ಆದ ರೋಚಕ ಅನುಭವವನ್ನು ಬಹಿರಂಗಪಡಿಸಿದ್ದಾರೆ.

ಐಪಿಎಲ್‌ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಿ ಸದ್ಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಆಟಗಾರರ ಪೈಕಿ ಕೆಲ ಆಟಗಾರರು ಆರೋಪ ಮಾಡಿ ತಾವು ಪ್ರತಿನಿಧಿಸಿದ್ದ ಫ್ರಾಂಚೈಸಿಗಳ ವಿರುದ್ಧ ಹೇಳಿಕೆ ನೀಡಿರುವ ಹಲವು ಉದಾಹರಣೆಗಳಿವೆ. ಈ ಸಾಲಿಗೆ ಇದೀಗ ರಾಸ್ ಟೇಲರ್ ಕೂಡ ಸೇರಿಕೊಂಡಿದ್ದು, ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರೊಬ್ಬರು ತನಗೆ ಕಪಾಳಮೋಕ್ಷ ಮಾಡಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ರಾಸ್‌ ಟೇಲರ್ ತಮ್ಮ ಕಹಿ ಘಟನೆಯನ್ನು ಆತ್ಮಚರಿತ್ರೆ ʻರಾಸ್ ಟೇಲರ್; ಬ್ಲಾಕ್ ಅಂಡ್‌ ವೈಟ್ʼ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ದ ಮೊಹಾಲಿ ಪಂದ್ಯದಲ್ಲಿ ಡಕ್ ಔಟ್ ಆದ ಬೆನ್ನಲ್ಲೇ ಫ್ರಾಂಚೈಸಿ ಮಾಲಿಕರೊಬ್ಬರು ಕಪಾಳಮೋಕ್ಷ ಮಾಡಿದ್ದರು. 195 ರನ್ ಗಳ ಚೇಸಿಂಗ್ ಸವಾಲು ಇತ್ತು, ನಾನು ಎಲ್ ಬಿಡಬ್ಲ್ಯೂಗೆ ಡಕ್ ಔಟ್ ಆದೆ, ನಾವು ಗುರಿಯ ಸಮೀಪ ಹೋಗಲು ಸಾಧ್ಯವಾಗಲಿಲ್ಲ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಪಂದ್ಯದ ಬಳಿಕ ಹೋಟೆಲ್‌ನ ಡ್ರೆಸ್ಸಿಂಗ್‌ ರೂಂನಲ್ಲಿದ್ದ ನನಗೆ ಮಾಲಿಕರ ಪೈಕಿ ಓರ್ವರು, ʻರಾಸ್ ಟೇಲರ್ ನಾವು ನಿಮಗೆ ಡಕ್ ಔಟ್ ಆಗುವುದಕ್ಕಾಗಿ ಮಿಲಿಯನ್ ಡಾಲರ್ಸ್ ಹಣ ನೀಡಿಲ್ಲ ಎಂದು 3-4 ಬಾರಿ ಕಪಾಳಕ್ಕೆ ಬಾರಿಸಿದ್ದರು ʼಎಂಬುದನ್ನು ಉಲ್ಲೇಖಿಸಿದ್ದಾರೆ.

ಇಷ್ಟೇ ಅಲ್ಲದೆ, ರಾಸ್ ಟೇಲರ್ ಮತ್ತೊಂದು ಅಂಶವನ್ನು ಬಹಿರಂಗಪಡಿಸಿದ್ದು, ಆತ ಅಂದು ಕಪಾಳಕ್ಕೆ ಹೊಡೆದ ಹೊಡೆತಗಳು ಗಟ್ಟಿಯಾಗಿರಲಿಲ್ಲ ಹಾಗೂ ಆತ ಹೊಡೆದ ನಂತರ ನಗುತ್ತಿದ್ದ, ಅದು ನಾಟಕೀಯವೋ ಇಲ್ಲವೋ ತಿಳಿಯಲಿಲ್ಲ. ಅಂದು ನಾನು ಆ ವಿಷಯವನ್ನು ದೊಡ್ಡ ಸಮಸ್ಯೆ ಮಾಡಲು ಮುಂದಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಂತಹ ದೊಡ್ಡ ಕ್ರಿಕೆಟ್ ಟೂರ್ನಿಯ ವಾತಾವರಣದಲ್ಲಿ ಈ ರೀತಿಯ ಘಟನೆ ನಡೆಯುತ್ತೆ ಎಂಬುದನ್ನು ಊಹಿಸಿಕೊಳ್ಳುವುದೂ ಕೂಡ ಕಷ್ಟ ಎಂದು ರಾಸ್ ಟೇಲರ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *