ಬೆಂಗಳೂರು: ಬಿಎಂಟಿಸಿ ಬಸ್ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇದನ್ನೂ ಓದಿ: ಹೊರಗುತ್ತಿಗೆ ನೌಕರರ ಒಕ್ಕೂಟದ ನೂತನ ತಾಲ್ಲೂಕು ಸಮಿತಿಗೆ ಚಾಲನೆ: ಅಧ್ಯಕ್ಷ ಕೆ. ಭರತ್
ಬಸ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆನ್ನಲಾಗಿದೆ. ಮೆಜೆಸ್ಟಿಕ್ ನಿಲ್ದಾಣಕ್ಕೆ ವೇಗವಾಗಿ ಬಸ್ ಚಾಲನೆ ಮಾಡಿಕೊಂಡು ಬಂದ ಚಾಲಕ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆಯೇ ನುಗ್ಗಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಯುವಕನ ಮೇಲೆ ಬಸ್ ಹರಿದರೂ ಚಾಲಕ ಗಮನಿಸಿಲ್ಲ. ಸ್ಥಳದಲ್ಲಿದ್ದವರು ಕೂಗಾಡಿದಾಗ ಮುಂದೆ ಹೋಗಿ ಬಸ್ ನಿಲ್ಲಿಸಿ ಓಡಲು ಶುರು ಮಾಡಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಕಾರಣವಾದ ಬಿಎಂಟಿಸಿ ಚಾಲಕ ಗೋಪಾಲಯ್ಯನನ್ನ ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರ ಆಕ್ರೋಶ : ಇನ್ನು ಈ ಘಟನೆ ಸಂಬಂಧ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿದ್ದು, ವಿಶೇಷ ಚೇತನ ವ್ಯಕ್ತಿ ನಡೆದುಕೊಂಡು ಬರ್ತಿದ್ದ. ಬಿಎಂಟಿಸಿ ಬಸ್ ಚಾಲಕ ಅತೀ ವೇಗದಿಂದ ಬಂದಿದ್ದಾನೆ. ಅಪಘಾತವಾದ್ರು ಆತ ನೋಡಿಲ್ಲ. ಎಲ್ಲಾ ಕಿರುಚಿದ ಮೇಲೆ ಮುಂದೆ ಹೋಗಿ ಬಸ್ ನಿಲ್ಲಿಸಿದ್ದ. ಚಾಲಕ ಪರಾರಿಯಾಗಲು ಯತ್ನಿಸಿದ, ಎಲ್ಲರೂ ಹಿಡಿದು ನಿಲ್ಲಿಸಿಕೊಂಡ್ವಿ. ಪೊಲೀಸರಿಗೆ ಫೋನ್ ಮಾಡಿದ ಮೇಲೆ ಬಂದ್ರು. ಇಲ್ಲಿ ಹಂಪ್ ಹಾಕಬೇಕು, ಬಿಎಂಟಿಸಿ ನವರು ವೇಗವಾಗಿ ಬರ್ತಾರೆ. ಪೊಲೀಸರು ಇದ್ರೂ ಇಲ್ಲಿ ಅಪಘಾತ ನಿಲ್ಲಲ್ಲ. ಬಿಎಂಟಿಸಿ ಬಸ್ ಬಂದ್ರೆ ನಾವೆ ಸೈಡಿಗ್ ಹೋಗ್ಬೇಕು. ಇಲ್ಲ ಅಂದರೆ ಹತ್ತಿಸಿಕೊಂಡು ಹೋಗ್ತೀವಿ ಅನ್ನೋ ರೀತಿ ಬರ್ತಾರೆ. ಹಾರ್ನ್ ಮಾಡಲ್ಲ, ಏನಿಲ್ಲ. ಜೀವ ಉಳಿಸಬೇಕಾದರೆ ನಾವೇ ಸೈಡಿಗ್ ಹೋಗಬೇಕು. ಬ್ರೇಕ್ ಮೇಲೆ ಕಾಲಿಡೊ ಪದ್ಧತಿನೇ ಇಲ್ಲ. ಅಪಘಾತ ತಪ್ಪಬೇಕಂದ್ರೆ ಹಂಪ್ ಹಾಕಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: ವಿಚ್ಛಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದು ನಿಲ್ಲಬೇಕು – ಸಿದ್ದರಾಮಯ್ಯ