ಹಾಸನ: ಮಾಜಿ ಸಚಿವ ಎ. ಮಂಜು ಬಿಜೆಪಿ ಪಕ್ಷ ತೊರೆದು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಎ. ಮಂಜು ಅವರ ಮಗ ವಿಧಾನ ಪರಿಷತ್ ಕೊಡುಗು ಕ್ಷೇತ್ರದ ಅಭ್ಯರ್ಥಿಯಾಗಿರುವ ಎ.ಮಂಜು ಮಗನ ಗೆಲುವಿಗಾಗಿ ಪ್ರಚಾರಕ್ಕೆ ಇಳಿದಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ್ದ ಮಾಜಿ ಸಚಿವ ಎ.ಮಂಜು ಮರಳಿ ಕಾಂಗ್ರೆಸ್ ಸೇರುವುದು ಖಚಿತ ಆಗಿದೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಮಂಜು ಅವರಿಗೆ ದೂರವಾಣಿ ಕರೆ ಮಾಡಿ ನೀವು ಯಾವಾಗ ಪಕ್ಷ ಸೇರೋದು ಎಂದು ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾದ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳು, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಜಾವಗಲ್ ಮಂಜುನಾಥ್, ವಿಧಾನ ಪರಿಷತ್ ಹಾಲಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಅಭ್ಯರ್ಥಿ ಎಂ.ಶಂಕರ್ ಅವರೊಂದಿಗೆ ನಾಲ್ಕೈದು ದಿನಗಳ ಹಿಂದೆ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಸಭೆ ನಡೆಸಿದರು.
ಈ ಸಭೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಏನು ಮಾಡಬೇಕು ಎಂಬ ಸಲಹೆ ಸೂಚನೆ ನೀಡಿದ ಶಿವಕುಮಾರ್, ಅದೇ ವೇಳೆ ಎ.ಮಂಜು ಅವರಿಗೆ ಕರೆ ಮಾಡಿ ಮರಳಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ʻನಾನು ಕಾಂಗ್ರೆಸ್ ಸೇರ್ಪಡೆಗೆ ವಿರೋಧ ಪಡಿಸುತ್ತಿದ್ದಾರಲ್ಲʼ ಎಂಬ ವಿಚಾರವನ್ನು ಎ.ಮಂಜು ಅವರು ಡಿ ಕೆ ಶಿವಕುಮಾರ್ ಅವರ ಗಮನಕ್ಕೆ ತಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, ನಾನು ಸಿದ್ದರಾಮಯ್ಯ ಅವರ ಜೊತೆಗೆ ಮಾತನಾಡುವೆ. ನೀನು ಪಕ್ಷ ಸೇರಲು ರೆಡಿಯಾಗು ಎಂದಿದ್ದಾರೆ. ಇದಕ್ಕೆ ನೀವು ಯಾವಾಗ ಹೇಳುತ್ತೀರೋ ಆಗ ಪಕ್ಷ ಸೇರವೇ ಎಂಬ ಮಾತನ್ನು ಎ.ಮಂಜು ಆಡಿದರು ಎಂದು ಮೂಲಗಳು ಖಚಿತಪಡಿಸಿವೆ. ಇದೇ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರ ಜೊತೆಯೂ ಡಿ ಕೆ ಶಿವಕುಮಾರ್ ಮತ್ತುಎ.ಮಂಜು ದೂರವಾಣಿಯಲ್ಲೇ ಮಾತನಾಡಿದ್ದಾರೆ.
ಅಲ್ಲಿಗೆ ಎ.ಮಂಜು ಮರಳಿ ಗೂಡು ಸೇರುವುದು ಖಚಿತವಾಗಿದ್ದು, ಡಿಸೆಂಬರ್ ಮೊದಲ ವಾರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಸೇರ್ಪಡೆ ಕಾರ್ಯಕ್ರಮ ಹಾಸನದಲ್ಲೋ ಅಥವಾ ಬೆಂಗಳೂರಿನಲ್ಲೋ ಎಂಬುದು ನಿರ್ಧಾರವಾಗಬೇಕಿದೆ.
ಪ್ರೀತಂ ವಿರುದ್ಧ ಗರಂ
ಮರಳಿ ಕಾಂಗ್ರೆಸ್ ಸೇರಲು ಮಾನಸಿಕವಾಗಿ ಸಿದ್ಧರಾಗಿರುವ ಎ.ಮಂಜು ಇದೀಗ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸದೇ ಇದ್ದರೂ ನೋಟಿಸ್ ನೀಡಿದರು. ನಂತರ ಜಿಲ್ಲೆಯ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಪರಿಷತ್ ಚುನಾವಣೆ ವಿಚಾರದಲ್ಲಿ ನನ್ನ ಮನೆ ಒಡೆಯುವ ಕೆಲಸ ಮಾಡಿದರು ಎಂದು ಹಾಸನ ಶಾಸಕ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ವತಃ ಪ್ರೀತಂಗೌಡ ಅವರೇ ಎಂಎಲ್‌ಸಿ ಚುನಾವಣೆಗೆ ಮಂಥರ್ ಗೌಡ ಅವರೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದರು. ನಾನೂ ಹೇಳಿದ ನಂತರ ಇದಕ್ಕೆ ಮಗನೂ ಒಪ್ಪಿದ್ದ. ನಂತರ ಮಂಥರ್ ಗೌಡ ಸ್ಪರ್ಧೆ ಮಾಡದಂತೆ ತಡೆ ಹಾಕಿದ್ದೂ ಇವರೇ. ಏಕೆ ಹೀಗೆ ಮಾಡಿದರೋ ಗೊತ್ತಿಲ್ಲ ಎಂದು ಕಿಡಿಕಾರಿದರು. ಇದಾದ ಬಳಿಕ ಮಗ ತನ್ನದೇ ಸ್ವಂತ ನಿರ್ಧಾರ ಕೈಗೊಂಡಿದ್ದಾನೆ. ಈಗ ನಾನು ಮಗನ ಪರ ಪ್ರಚಾರ ಮಾಡುವುದು ಅನಿವಾರ್ಯವಾಗಿದೆ ಅದನ್ನು ಮಾಡುತ್ತಿದ್ದೇನೆ. ಅಂತೆಯೇ ಹಾಸನ ಜಿಲ್ಲೆಯಲ್ಲೂ ನಮ್ಮ ಬೆಂಬಲದಿಂದ ಗೆದ್ದಿರುವ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಯಾರಿಗೆ ಮತ ಹಾಕಬೇಕು ಎಂಬುದನ್ನು ಶೀಘ್ರವೇ ಬಹಿರಂಗಪಡಿಸುವೆ ಎಂದರು.
ಕಾಂಗ್ರೆಸ್ ಸೇರ್ಪಡೆ ವಿಚಾರ ಚರ್ಚೆ ನಡೆದಿದೆ
ಎ. ಮಂಜು ಹಿಂದೆ ನಮ್ಮ ಪಕ್ಷದಲ್ಲಿಯೇ ಇದ್ದವರು. ಲೋಕಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಬೇಸತ್ತು ಪಕ್ಷ ತೊರೆದಿದ್ದರು. ಬಳಿಕವೂ ನಮ್ಮ ಹಾಗೂ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಈಗ ಅವರ ಮಗ ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರ ಪರ ಪ್ರಚಾರ ಮಾಡುವುದಾಗಿ ಮಂಜು ಹೇಳಿದ್ದಾರೆ. ಅವರು ಪಕ್ಷ ಸೇರುವ ಕುರಿತು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಜೊತೆ ಮಾತುಕತೆ ನಡೆದಿದೆ. ಶೀಘ್ರವೇ ಅಂತಿಮ ನಿರ್ಧಾರ ಹೊರ ಬೀಳಲಿದೆ. ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದ್ದಾರೆ.