‘ಪರಿಶಿಷ್ಟ ಪಂಗಡಕ್ಕೆ ಸೇರಿದವಳು’ ಎಂದು ಮಹಿಳೆಯನ್ನು ಹೊರಹಾಕಿದ ಕುಟುಂಬ

ಸಿಂಧನೂರು: ‘ಪರಿಶಿಷ್ಟ ಪಂಗಡಕ್ಕೆ ಸೇರಿದವಳು’ ಎಂಬ ಕಾರಣದಿಂದ ಮನೆಯಿಂದ ಹೊರಹಾಕಿದಕ್ಕೆ ವಿವಾಹಿತ ಮಹಿಳೆಯೊಬ್ಬರು ತನ್ನ ತಾಯಿಯೊಂದಿಗೆ ಗಂಡನ ಮನೆಯ ಎದುರು ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿರುವ ಘಟನೆ ಸಿಂಧನೂರಿನ ಗಂಗಾನಗರದಲ್ಲಿ ನಡೆದಿದೆ. ಪಂಗಡ

ಲಿಂಗಾಯತ ಜಂಗಮ ಸಮುದಾಯಕ್ಕೆ ಸೇರಿರುವ ಪತಿ ಸಿದ್ರಾಮಯ್ಯ ಮತ್ತು ಮಾವ ಅಮ‌ಯ ಹಿರೇಮಠ ಸದ್ಯ ಮನೆಯಿಂದ ದೂರು ಉಳಿದಿದ್ದು, ಅತ್ತೆ ಚಿನ್ನಮ್ಮ ಮನೆಯ ಮುಂದಿನ ಗೇಟ್‌ಗೆ ಬೀಗ ಹಾಕಿಕೊಂಡು ಒಳಗೆ ಇದ್ದಾರೆ.

ಗಂಗಾವತಿಯ ಪರಿಶಿಷ್ಟ ಪಂಗಡದ ರೇಣುಕಮ್ಮ ಮತ್ತು ಲಿಂಗನಗೌಡ ದಂಪತಿಯ ಪುತ್ರಿ ನಯನಾ ವಿವಾಹವು ಸಿಂಧನೂರಿನ ಗಂಗಾನಗರದ ಅಮರಯ್ಯ ಹಿರೇಮಠ ಮತ್ತು ಚಿನ್ನಮ್ಮ ದಂಪತಿ ಪುತ್ರ ಸಿದ್ರಾಮಯ್ಯ ರೊಂದಿಗೆ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ 2023ರ ಜ .25ರಂದು ವರನ ನಿವಾಸದಲ್ಲೇ ಜರುಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಫ್ಲಾಟ್‌ ಬಾಡಿಗೆ ಹಗರಣ; ಸ್ವಲ್ಪ ಯಾಮಾರಿದರೆ ಹಣ ಹೋಗುತ್ತೆ

‘ಮದುವೆಗೆ ಸಾರ್ವಜನಿಕರನ್ನು ಕರೆದರೆ ಜಾತಿ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಯಾರನ್ನೂ ಕರೆಯದೇ ವಧು ಮತ್ತು ವರನ ಕುಟುಂಬದವರು ಮಾತ್ರ ಮದುವೆಯಲ್ಲಿ ಭಾಗವಹಿಸಿದ್ದರು’ ಎಂದು ಸಂತ್ರಸ್ತೆಯ ತಾಯಿ ರೇಣುಕಮ್ಮ ತಿಳಿಸಿದ್ದಾರೆ.

‘ಮದುವೆಯಾದ ಆರಂಭದಲ್ಲಿ ಪತಿ ಮತ್ತು ಅತ್ತೆ ಮಾವ ತನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ನಾಲ್ಕು ತಿಂಗಳ ನಂತರ ‘ಯಾರಾದರೂ ಮನೆಗೆ ಬಂದರೆ ಹೊರಗೆ ಬರಬಾರದು. ‘ಬೇರೆ ಜಾತಿ’ಯವಳು ಎಂದು ಯಾರಿಗೂ ಹೇಳಬಾರದು’ ಎಂದು ಕಟ್ಟಪ್ಪಣೆ ಮಾಡಿದರು. ಮದುವೆಗೆ ಮೊದಲು ಇದನ್ನೆಲ್ಲ ಹೇಳಬೇಕಿತ್ತು ಎಂದು ಪ್ರಶ್ನಿಸಿದಕ್ಕೆ ನಿತ್ಯ ಒಂದಿಲ್ಲೊಂದು ಕಾರಣವೊ ಕಿರುಕುಳ ನೀಡುತ್ತಿದ್ದಾರೆ’ ಎಂದು ಸಂತ್ರಸ್ತ ನಯನಾ ಆರೋಪಿಸಿದ್ದಾರೆ.

‘ಮನೆಗೆ ಯಾರಾದರೂ ಬಂದರೆ ಸ್ಕೋರ್ ರೂಮ್‌ಗೆ ಕಳುಹಿಸಿ ಬಾಗಿಲು ಮುಚ್ಚಿಕೊಳ್ಳುತ್ತಿದ್ದರು, ಈ ವಿಚಾರಕ್ಕೆ ಆಗಾಗ ಮನೆಯಲ್ಲಿ ವಾದ-ವಿವಾದ ನಡೆಯುತ್ತಿತ್ತು. 2024ರ ಅ.1ರಂದು ನನ್ನ ಮೊಬೈಲ್ ಕಸಿದುಕೊಂಡು ಒತ್ತಾಯ ಪೂರ್ವಕವಾಗಿ ಅತ್ತೆ ಚಿನ್ನಮ್ಮ, ಅತ್ತೆಯ ತಂಗಿ ಮತ್ತು ಮಾವ ಅಮರಯ್ಯ ಹಿರೇಮಠ ಅವರು ಕಾರಿನಲ್ಲಿ ಕರೆದೊಯ್ದು ಗಂಗಾವತಿಯ ನಮ್ಮ ಅಜ್ಜಿಯ ಮನೆಗೆ ಬಿಟ್ಟು ಬಂದರು. ಮರುದಿನ ಪತಿ ಸಿದ್ರಾಮಯ್ಯ ಗಂಗಾವತಿಗೆ ಬಂದು ತಮ್ಮ ತಂದೆ-ತಾಯಿಯಿಂದ ತಪ್ಪಾಗಿದ್ದು, ಜಾತ್ರೆ ಮುಗಿಯುವ ತನಕ ಒಂದು ವಾರ ಇಲ್ಲೇ ಇರು; ನಂತರ ಬಂದು ಕರೆದೊಯ್ಯುವೆ ಎಂದು ಹೇಳಿ ಹೋಗಿದ್ದರು. ನಂತರ ಮೊಬೈಲ್ ಸ್ಪಿಚ್‌ಆಫ್ ಮಾಡಿಕೊಂಡಿದ್ದು, ಮೂರು ತಿಂಗಳಿಂದ ಮಾತನಾಡಿಲ್ಲ. ಗಂಗಾವತಿಯ ಮಹಿಳಾ ಕೇಂದ್ರ, ಪೊಲೀಸರ ಮಧ್ಯಪ್ರವೇಶಕ್ಕೂ ಪತಿ ಸ್ಪಂದಿಸುತ್ತಿಲ್ಲ’ ಎಂದು ನಯನಾ ದೂರಿದ್ದಾರೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ನೋಡಿ: ಕಷ್ಟದಲ್ಲಿರುವ ಕನ್ನಡವನ್ನು ಸಂರಕ್ಷಿಸೋಣ Janashakthi Media

Donate Janashakthi Media

Leave a Reply

Your email address will not be published. Required fields are marked *