ಸೌಜನ್ಯ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸಿ : ಮುಖ್ಯಮಂತ್ರಿಗೆ ನಿಯೋಗ ಮನವಿ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಚಿರೆ ಪಾಂಗಾಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಿಜವಾದ ಆರೋಪಿಗಳನ್ನು ಪತ್ತೆ ಮಾಡಲು ವಿಶೇಷ ತನಿಖಾ ದಳ ರಚನೆ ಮಾಡಿ ಪ್ರಕರಣವನ್ನು ಎಸ್‌.ಐ.ಟಿ ತನಿಖೆಗೆ ವಹಿಸಬೇಕೆಂದು ಪ್ರಗತಿಪರ ಸಂಘಟನೆಗಳ ಸದಸ್ಯರ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

2012 ರಲ್ಲಿ ಧರ್ಮಸ್ಥಳದ ಉಜಿರೆಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಂಘಟನೆಗಳ ಹೋರಾಟ ಹಾಗೂ ಸಾರ್ವಜನಿಕರ ಒತ್ತಾಯದ ನಂತರ ಸಿ.ಬಿ.ಐ.ಗೆ ವಹಿಸಲಾಗಿತ್ತು. ಈಗ ಸಿ.ಬಿ.ಐ ತೀರ್ಪು ಹೊರಬಿದ್ದಿದೆ. ಪೊಲೀಸರು ಆರೋಪ ಹೊರಿಸಿ ಬಂಧಿಸಲಾಗಿದ್ದ ಸಂತೋಷ ರಾವ್‌ ಅವರನ್ನು ನಿರ್ದೋಷಿ ಎಂದು ಹೇಳಿರುವ ಸಿ.ಬಿ.ಐ ಕೋರ್ಟ್‌ ಅವರನ್ನು ಬಿಡುಗಡೆ ಮಾಡಿದೆ. ಇದನ್ನು ಪ್ರಗತಿ ಪರ ಸಂಘಟನೆಗಳ ಹೋರಾಟ ಸಮಿತಿ (ಸೌಜನ್ಯ) ಸ್ವಾಗತಿಸುತ್ತದೆ ಎಂದು ನಿಯೋಗ ತಿಳಿಸಿದೆ.

ಇದನ್ನೂ ಓದಿ:ಸೌಜನ್ಯ ಪ್ರಕರಣವನ್ನು ನ್ಯಾಯ ಬದ್ಧ ಮೂಲ ತನಿಖೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

ಅಂದು ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದವರೆಲ್ಲರೂ ಹೇಳಿದ ಮಾತು ಸತ್ಯವೇ ಇತ್ತೆಂದು ಈಗ ಮತ್ತೊಮ್ಮೆ ದೃಢವಾಗಿದೆ. ನಿರ್ದೋಷಿ ಸಂತೋಷ ರಾವ್‌ 06 ವರ್ಷ ಜೈಲುವಾಸ ಅನುಭವಿಸಬೇಕಾಗಿ ಬಂತೆಂಬುದು ಅತ್ಯಂತ ನೋವಿನ ಸಂಗತಿಯಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಿದ ಸಿ.ಬಿ.ಐ ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಲು ವಿಫಲವಾಗಿದೆ.ತನಿಖೆಯ ವಿಧಾನದಲ್ಲಿ ಇದ್ದ ಲೋಪಗಳು, ಮತ್ತು ಪ್ರಾರಂಭಿಕ ತನಿಖೆಯ ಸಂದರ್ಭದಲ್ಲಿ ಠಾಣಾ ಪೊಲೀಸರು, ಸಿ.ಓ.ಡಿ ತಂಡದವರು ಗುರುತರವಾದ ಲೋಪವನ್ನು ಎಸಗಿದ ಕಾರಣದಿಂದ ಗೋಲ್ಡನ್‌ ಅವರ್‌ನಲ್ಲಿ ಸಂಪೂರ್ಣ ಸಾಕ್ಷ್ಯ ನಾಶವಾಗಿದೆ ಎಂದಿರುವ ಸಿ.ಬಿ.ಐ ಕೋರ್ಟ್ ಉದ್ದೇಶಪೂರ್ವಕವಾಗಿಯೇ ಸಾಕ್ಷ್ಯ ನಾಶ ಮಾಡಲಾಗಿದೆ ಎಂದೂ ಅನುಮಾನ ವ್ಯಕ್ತಪಡಿಸಿದೆ.

 

ಅತ್ಯಾಚಾರದಂತಹ ಪ್ರಕರಣಗಳಲ್ಲಿ ಸಂತ್ರಸ್ಥರ ಯೋನಿಯಿಂದ ಸಂಗ್ರಹಿಸುವ ಸ್ವ್ಯಾಬ್ ಅತ್ಯಂತ ಮಹತ್ವದ ಸಾಕ್ಷಿಯಾಗುತ್ತದೆ. ಅದನ್ನು ಸರಿಯಾಗಿ ಸಂರಕ್ಷಿಸಿ ಇಡಬೇಕು. ಆದರೆ ಸೌಜನ್ಯಳ ಸ್ವ್ಯಾಬ್‌ ಪರೀಕ್ಷೆಗೆ ಪ್ರಯೋಗಶಾಲೆಗೆ ಬರುವಾಗ ಅದಕ್ಕೆ ಫಂಗಸ್‌ ಹಿಡಿದಿತ್ತು ಎಂದು ಎಫ್‌.ಎಸ್‌.ಎಲ್‌ ಅಧಿಕಾರಿಗಳು ಕೊಟ್ಟ ವರದಿಯನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಮರಣೋತ್ತರ ಪರೀಕ್ಷೆಯ ವರದಿಗಳಲ್ಲಿಯೂ ಗುರುತರ ಲೋಪಗಳಿವೆ. ಹೊಟ್ಟೆಯಲ್ಲಿ ಇರಬಹುದಾದ ಆಹಾರ ಸ್ಯಾಂಪಲ್‌ ಸಂಗ್ರಹಿಸಿಲ್ಲ. ಅತ್ಯಾಚಾರ ಕೊಲೆ ನಡೆದಿರುವುದಕ್ಕೆ ಪೂರಕ ಸಾಕ್ಷ್ಯ ಸಂಗ್ರಹಿಸುವಲ್ಲಿ  ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಎಂಬುದನ್ನೂ ಕೋರ್ಟ್‌ ಗಮನಿಸಿದೆ. ಸಮೀಪದ ಶಾಂತಿವನದ ಧರ್ಮಸ್ಥಳದ ನೇಚರ್‌ ಕ್ಯೂರ್‌ ಆಸ್ಪತ್ರೆಯ ಎದುರಿನ ಸಿ.ಸಿ.ಟೀವಿ ಪೂಟೇಜ್‌ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ.

ಆಕೆಯ ಕೊಡೆ ಚಪ್ಪಲಿ ಒಳ ಉಡುಪುಗಳನ್ನು ಪೊಲೀಸರು ಸಂಗ್ರಹಿಸಿಲ್ಲ. ಮೃತ ದೇಹ ಸಿಕ್ಕ ನಂತರ ಪೊಲೀಸರು ತಮ್ಮ ಮನೆಯಿಂದ ಮಗಳ ಒಳ ಉಡುಪು  ಕೊಂಡೊಯ್ದ ಬಗ್ಗೆ ಸೌಜನ್ಯ ತಂದೆ ವಿಚಾಣೆಯ ವೇಳೆ ಹೇಳಿದ್ದನ್ನೂ ವರದಿಯಲ್ಲಿ ಉಲ್ಲೇಖಿಸಿ ಅನುಮಾನ ವ್ಯಕ್ತ ಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ಕೂಡಾ ಸರಿಯಾಗಿ ನಡೆದಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಎಲ್ಲ ರೀತಿಯ ಸಾಕ್ಷ್ಯ ನಾಶ ಮಾಡಿ ಲೋಪವೆಸಗಿದ ತನಿಖಾ ತಂಡವು ಶಿಕ್ಷೆಗೆ ಅರ್ಹರೆಂದು ವಿಶೇಷ ನ್ಯಾಯಾಲಯ ಹೇಳಿದೆ.

ನಿರ್ದೋಷಿ ಸಂತೋಷ ರಾವ್‌ ಬಿಡುಗಡೆಯಾಗಿರುವುದನ್ನು ನಾವು ಸ್ವಾಗತಿಸುತ್ತೇವೆ. ಅದೇ ವೇಳೆಗೆ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ಕೊಲೆ ಮಾಡಿದ ಪಾತಕಿಗಳು ಯಾರೆಂದು ಪತ್ತೆ ಮಾಡದಿರುವ ಸಿ.ಬಿ.ಐ ತನಿಖೆ ಕೂಡ ಅಪೂರ್ಣವಾಗಿದೆ.ನ್ಯಾಯ ಸೋತಿದೆ ಎಂಬ ಕಾರಣಕ್ಕಾಗಿ ನಾವು ಒತ್ತಾಯಿಸುತ್ತಿದ್ದೇವೆ.

  • ಸತ್ಯವನ್ನು ಹೊರಗೆಳೆಯಲು ತನಿಖೆ ಮುಂದುವರೆಯಬೇಕು.ಧರ್ಮಸ್ಥಳದ ಸುತ್ತಮುತ್ತ ಆಗ ಸಂಭವಿಸಿದ ನೂರಾರು ಅಸಹಜ ಸಾವುಗಳ ಕಾರಣ ಕಂಡು ಹಿಡಿಯಬೇಕು.
  • ವಿಶೇಷ ತನಿಖಾ ದಳವನ್ನು ಸಮರ್ಥ ತನಿಖಾಧಿಕಾರಿಗಳ ನೇತೃತ್ವದಲ್ಲಿ ರಚಿಸಬೇಕು
  • STIಯನ್ನು ರಚಿಸುವ ಸಂದರ್ಭದಲ್ಲಿಯೇ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅನ್ನು ಕೂಡಾ ನೇಮಕ ಮಾಡಬೇಕು.
  • ನಿಜವಾದ ಅಪರಾಧಿಗಳನ್ನು ಪತ್ತೆ ಮಾಡಬೇಕು. ಕಾನೂನಿ ಕುಣಿಕೆಯಿಂದ ತಪ್ಪಿಸಕೊಳ್ಳದಂತೆ ಬಿಗಿ ಮಾಡಬೇಕು.
  • ತನಿಖಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಎಸಗಿದ ಲೋಪವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು.
  • ಯಾವ ಒತ್ತಡದಿಂದ ಅಥವಾ ಪ್ರಭಾವದಿಂದ ಸಾಕ್ಷಿಗಳನ್ನು ನಾಶಮಾಡಿದರೆಂದು ಪತ್ತೆ ಹಚ್ಚಬೇಕು.
  • ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
  • ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಬೇಕು
  • ಕಾಲಮಿತಿಯೊಳಗೆ ತನಿಖೆ ನಡೆಸಿ ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕು.
  • ಅತ್ಯಾಚಾರ ಪ್ರಕರಣಗಳಲ್ಲಿ ತನಿಖೆ ಮಾಡುವಾಗ ಗೃಹ ಮಂತ್ರಾಲಯದ ನಿರ್ದೇಶನಗಳನ್ನು ಪಾಲಿಸಬೇಕು.
  • ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಜಸ್ಟೀಸ್‌ ವರ್ಮಾ ಆಯೋಗದ ಶಿಫಾರಸುಗಳನ್ನು ಪಾಲಿಸಬೇಕು.
  • ಕರ್ನಾಟಕದಲ್ಲಿ ಉಗ್ರಪ್ಪ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಬೇಕು.

ಎಂದು ನಾಡಿನ ನ್ಯಾಯದ ಪರ ಚಿಂತಿಸುವ ಎಲ್ಲ ಜನರ ಪರವಾಗಿ ಹಾಗೂ ಅತ್ಯಾಚಾರದಂತಹ ಹೀನ ಕೃತ್ಯಗಳು ಸಂಭವಿಸದಂತೆ ತಡೆದು, ಮಹಿಳೆಯರ ಘನತೆಯ ಬದುಕಿನ ಸಾಂವಿಧಾನಿಕ ಹಕ್ಕನ್ನು ಕಾಪಾಡಲು ತಮ್ಮ ಸರಕಾರ ಮುಂದಾಗಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಪ್ರಗತಿಪರ ಸಂಘಟನೆಗಳ ಸದಸ್ಯರಾದ ಕೆ.ಎಸ್.ವಿಮಲಾ, ಗೌರಮ್ಮ, ಲಕ್ಷ್ಮಿ, ಪ್ರಭಾ ಬೆಳವಂಗಲ, ಡಾ: ಲೀಲಾ ಸಂಪಿಗೆ, ದೇವಿ, ರೂತ್ ಮನೋರಮಾ, ಅಕ್ಕೈ ಪದ್ಮಶಾಲಿ, ಅಖಿಲಾ, ಬಿ.ಎಂ. ಭಟ್, ಭೀಮನಗೌಡ, ಬಸಮ್ಮ, ಸುಮತಿ ಹಾಗೂ ಲಹರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *