ಬೆಂಗಳೂರು: ಮಹಿಳೆಯರ ಬಗ್ಗೆ ಕೀಳಾಗಿ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ ಹಾಗೂ ಯುವತಿಗೆ ಬೆದರಿಕೆ ಹಾಕಿರುವ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಸ್ವಯಂ ಪ್ರೆರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಜನವಾದಿ ಮಹಿಳಾ ಸಂಘಟನೆ ಸೋಮವಾರ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದೆ. ಮಂಡ್ಯದಲ್ಲಿ ಮಾತನಾಡಿದ್ದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಎಂಬಾತ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.
ಕಲ್ಲಡ್ಕ ಪ್ರಭಾಕರ ಭಟ್ ಆಡಿದ ಮಾತುಗಳನ್ನು ತೀವ್ರವಾಗಿ ಖಂಡಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಆತನ ವಿರುದ್ಧ ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಿಸಿ ಆತನನ್ನು ಬಂಧಿಸಬೇಕೆಂದು ಒತ್ತಾಯಿಸಿದೆ. “ಮಹಿಳೆಯರ ಬಗ್ಗೆ ಕೀಳಾಗಿ ಮತ್ತು ಅವಹೇಳನಕಾರಿಯಾಗಿ ಮಾತನಾಡುವುದು, ಅವರನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾಣುವುದು ಆರ್ ಎಸ್ ಎಸ್ ನ ಮನಃಸ್ಥಿತಿ. ಈ ಮನಃಸ್ಥಿತಿಯ ಭಾಗವಾಗಿಯೇ ಕಲ್ಲಡ್ಕ ಪ್ರಭಾಕರ ಭಟ್ ಈ ರೀತಿಯ ಅವಹೇಳನ ಕಾರಿ ಹೇಳಿಕೆ ನೀಡಿ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ” ಎಂದು ಸಂಘಟನೆ ಹೇಳಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಮಸೀದಿ ಗೋಡೆಯಲ್ಲಿ ಜೈಶ್ರೀರಾಮ್ ಎಂದು ಬರೆದ ದುಷ್ಕರ್ಮಿಗಳು
ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿರುವ ಜನವಾದಿ ಮಹಿಳಾ ಸಂಘಟನೆ, ”ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯು ಆರ್ ಎಸ್ ಎಸ್ ನ ಅಂತರಂಗದ ಭಾಗವಾಗಿದೆ. ಸ್ತ್ರೀಯರು ಪೂಜ್ಯನೀಯರು ಎಂದು ಬೊಗಳೆ ಕೊಚ್ಚುತ್ತಲೆ ಮುಸ್ಲಿಮರು ಎಂದಾಕ್ಷಣ ಅಪಮಾನಿಸುಬಹುದೇ? ಇದೇನಾ ಇವರ ಪವಿತ್ರ ಸಂಸ್ಕೃತಿ? ಪ್ರಭಾಕರ್ ಭಟ್ ಈ ಹೇಳಿಕೆ ಅವರ ಕೀಳು ಸಂಸ್ಕೃತಿಯ ಪ್ರತೀಕವೆ ಆಗಿದೆ. ಇವರು ಮಹಿಳೆಯರ ಬಗ್ಗೆ ಹೊಂದಿರುವ ಮನಸ್ಥಿತಿಗೆ ಈ ಮಾತು ಸಾಕ್ಷಿಯಾಗಿದೆ” ಎಂದು ಹೇಳಿದೆ.
ಮಂಡ್ಯದಲ್ಲಿ ಹನುಮ ಸಂಕೀರ್ತನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅನಗತ್ಯವಾಗಿ ಮುಸ್ಕಾನ್ ಎಂಬ ಯುವತಿಯನ್ನ ಆಲ್ ಖೈದ ಸಂಘಟನೆ ಜೊತೆ ಸಂಬಂಧ ಕಲ್ಪಿಸಿ ಅವಹೇಳನ ಮಾಡಿರುವುದು ಹಾಗೂ ಕಾಲೇಜಿಗೆ ಹೋಗದ ಹಾಗೇ ತಡೆಯುತ್ತೇವೆಂದು ಬೆದರಿಕೆ ಹಾಕಿರುವುದು ಎಷ್ಟು ಸರಿ ಎಂದು ಸಂಘಟನೆ ಕೇಳಿದೆ.
ಇದನ್ನೂ ಓದಿ: ಭಾರತೀಯ ಕುಸ್ತಿ ಫೆಡರೇಶನ್ ಅಮಾನತು | ಮೌನ ಮುರಿದ ಬ್ರಿಜ್ ಭೂಷಣ್ ಹೇಳಿದ್ದೇನು?
“ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದಾಗ, ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರನ್ನು ರಕ್ಷಿಸುವ ಮೋದಿ ಸರ್ಕಾರ ಶ್ರೀರಾಮ ದೇವಸ್ಥಾನ ಉದ್ಘಾಟಿಸಲು ಹೊರಟಿದೆ. ಮಹಿಳೆ ಎಂದರೆ ಮಾತೆ ಎನ್ನುವ ದೇಶದಲ್ಲಿ ಮಹಿಳೆಯನ್ನು ಎರಡನೆಯ ದರ್ಜೆಯ ಪ್ರಜೆಯಾಗಿ ಕಾಣುವುದು ಅವಳ ಆಯ್ಕೆಯ, ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ದಕ್ಕೆ ತರುವುದು ಆರ್.ಎಸ್ .ಎಸ್. ನ ನೀತಿಯಾಗಿದೆ” ಎಂದು ಹೇಳಿದೆ.
“ಮಂಡ್ಯದಂತಹ ಸೌಹಾರ್ದ ನೆಲದಲ್ಲಿ ಸೌಹಾರ್ದತೆಗೆ ಬೆಂಕಿ ಹಚ್ಚುವುದನ್ನು ನಾವು ವಿರೋಧಿಸುತ್ತೇವೆ. ಕೋಮು ವಿಷ ಬೀಜ ಬಿತ್ತವುದು ಸಂವಿಧಾನ ವಿರೋಧೀ ನಡೆಯಾಗಿದೆ. ಇಂತಹ ಮಾನವ ವಿರೋಧಿ, ಸೌಹಾರ್ತತೆಗೆ ಧಕ್ಕೆ ತಂದು ಅಶಾಂತಿ ಉಂಟುಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ಟನ ಮೇಲೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಬೇಕು” ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ