Belagavi Winter Session| ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ; ತಿದ್ದುಪಡಿ ವಿಧೇಯಕ ಮಂಡನೆ

ಬೆಳಗಾವಿ: ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಕಡ್ಡಾಯ ಗ್ರಾಮೀಣ ಸೇವಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದಾರೆ.‌ ಸೇವೆಗೆ 

ವಿಧೇಯಕದಲ್ಲಿ ‘ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆ’ ಎಂಬ ಪದಗಳ ಮೊದಲಿಗೆ ‘ರಾಜ್ಯ ಸರ್ಕಾರವು ನಿರ್ದಿಷ್ಟ ಪಡಿಸಲಾದಂತೆ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳಲ್ಲಿ’ ಎಂಬ ಪದಗಳನ್ನು ಸೇರಿಸುವ ಮೂಲಕ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ವೈದ್ಯರ ಕಡ್ಡಾಯ ಸೇವೆಯನ್ನು ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ:ಜಾತಿ ಕಾರಣಕ್ಕೆ ಆರ್‌ಎಸ್‌ಎಸ್‌ ಕಚೇರಿ ಪ್ರವೇಶ ನಿರಾಕರಣೆ| ಗೂಳಿಹಟ್ಟಿ ಶೇಖರ್‌ ಆರೋಪ

ಖಾಲಿ ಇರುವ ಹುದ್ದೆಗಳಿಗೆ ಮಾತ್ರ ವೈದ್ಯರ ಕಡ್ಡಾಯ ಸೇವೆ

ಈ ಹಿಂದೆ ವೈದ್ಯರ ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆ ಜಾರಿಗೆ ತಂದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇತ್ತು. ಹೀಗಾಗಿ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದವರು, ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ ಸರ್ಟಿಫಿಕೇಟ್ ಪಡೆಯಬೇಕು ಎಂಬ ನೀತಿಯನ್ನು ಸರ್ಕಾರ ಅನುಸರಿಸಿತ್ತು.

ಆದರೆ, ಇತ್ತೀಚೆಗೆ ವೈದ್ಯಕೀಯ ಸ್ನಾತಕೋತ್ತರ ಹಾಗೂ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ಹೊರಬರುತ್ತಿರುವುದರಿಂದ, ಖಾಲಿ ಇರುವ ಹುದ್ದೆಗಳಿಗೆ ಮಾತ್ರ ವೈದ್ಯರ ಕಡ್ಡಾಯ ಒಂದು ವರ್ಷದ ಸೇವೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಕಡ್ಡಾಯ ಸೇವೆ ಖಾಲಿ ಹುದ್ದೆಗಳಿಗೆ ಸೀಮಿತಗೊಳ್ಳಲಿದೆ

ಕಡ್ಡಾಯ ಸೇವೆಯಡಿ ಕಾರ್ಯನಿರ್ವಹಿಸುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಅನ್ನು ರಾಜ್ಯ ಸರ್ಕಾರವೇ ನಿರ್ಧರಿಸುವ ಅಧಿಕಾರ ಹೊಂದಿದೆ. ಅಲ್ಲದೇ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಗೆ 3,000ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಆದರೆ, ಖಾಲಿ ಹುದ್ದೆಗಳ ಸಂಖ್ಯೆ 1,900 ಇದ್ದು, ತಿದ್ದುಪಡಿ ವಿಧೇಯಕದ ಮೂಲಕ ಕಡ್ಡಾಯ ಸೇವೆ ಖಾಲಿ ಹುದ್ದೆಗಳಿಗೆ ಸೀಮಿತಗೊಳ್ಳಲಿದೆ.

ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್‌ 06 | ಭಾಗ 02 Live #wintersession2023

Donate Janashakthi Media

Leave a Reply

Your email address will not be published. Required fields are marked *