ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ ಎಂದ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲು!

ಕೊಪ್ಪಳ: ಆರೆಸ್ಸೆಸ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ಮೂಲವನ್ನು ಉಲ್ಲೇಖಿಸಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಗಂಗಾವತಿ ಪಟ್ಟಣದ ನಿವಾಸಿ ಅಮೀರ್ ಅಮ್ಮು ಎಂಬವರು ಅಂಧ ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. “ನೀವು ವಯಸ್ಸಾದ ಕುರುಡನನ್ನು ದರೋಡೆ ಮಾಡಿದ್ದೀರಿ. ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದೀರಿ. ಆರೆಸ್ಸೆಸ್ ಕಾರ್ಯಕರ್ತರಿಗೆ ಗೌರವವಿಲ್ಲವೇ? ನಿಮಗಿಂತ ಕೆಟ್ಟ ಭಯೋತ್ಪಾದಕ ಸಂಘಟನೆ ಇನ್ನೊಂದಿಲ್ಲ” ಎಂದು ಅಮೀರ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದರು.

ಈ ಪೋಸ್ಟ್ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ಹೇಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅದು ಹೇಳಿದೆ. ಆರೆಸ್ಸೆಸ್

ಇದನ್ನೂ ಓದಿ: ಗಂಗಾವತಿ | ಅಂಧ ಮುಸ್ಲಿಂ ವೃದ್ಧನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಗಡ್ಡಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ನವೆಂಬರ್ 24 ರಂದು ಗಂಗಾವತಿ ಪಟ್ಟಣದ ಸಿದ್ದಿಕೇರಿ ರೈಲ್ವೇ ಬ್ರಿಡ್ಜ್ ಬಳಿ ಯುವಕರ ಗುಂಪೊಂದು 65 ವರ್ಷದ ಹುಸೇನ್ ಸಾಬ್ ಎಂಬುವವರ ಗಡ್ಡವನ್ನು ಸುಟ್ಟು ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು. ಅಂಧರಾಗಿದ್ದ ಅವರಿಂದ ದುಷ್ಕರ್ಮಿಗಳು ಹಣವನ್ನೂ ಲೂಟಿ ಮಾಡಿದ್ದಾಗಿ ಹುಸೇನ್ ಸಾಬ್ ದೂರಿನಲ್ಲಿ ತಿಳಿಸಿದ್ದಾರೆ.

ತಡರಾತ್ರಿ ಹೊಸಪೇಟೆಯಿಂದ ಗಂಗಾವತಿಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಅವರು ಆಟೋಗಾಗಿ ಕಾಯುತ್ತಿದ್ದಾಗ, ಬೈಕ್‌ನಲ್ಲಿ ಬಂದ ಆರೋಪಿಗಳು ಅವರನ್ನು ಬಲವಂತವಾಗಿ ರೈಲ್ವೇ ಸೇತುವೆಯ ಕೆಳಗೆ ತಮ್ಮ ವಾಹನದಲ್ಲಿ ರೆದೊಯ್ದು ಗಡ್ಡವನ್ನು ಸುಟ್ಟು ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದರು.

ಆ ಬಳಿಕ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ನಗದು ದೋಚಿ ಯುವಕ ಪರಾರಿಯಾಗಿದ್ದರು. ಥಳಿತಕ್ಕೊಳಗಾಗಿದ್ದ ವೃದ್ಧ ರೈಲ್ವೆ ಸೇತುವೆಯ ಕೆಳಗೆ ರಾತ್ರಿ ಕಳೆದಿದ್ದರು. ಮರುದಿನ ಬೆಳಿಗ್ಗೆ ಅವರನ್ನು ಕುರಿ ಕಾಯುವ ಹುಡುಗರು ಗಮನಿಸಿ ಅವರ ಮನೆಗೆ ಕರೆದೊಯ್ದಿದ್ದರು. ಈ ಸಂಬಂಧ ಹುಸೇನ್ ಸಾಬ್ ಪೊಲೀಸ್ ದೂರು ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ಪಿ ಯಶೋದಾ ವಂಟಗೋಡಿ ಭೇಟಿ ನೀಡಿ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿಡಿಯೊ ನೋಡಿ: ದುಡಿವ ಜನರು ಬೆಕ್ಕುಗಳಲ್ಲ, ಹುಲಿಗಳೆಂದು ನೆನಪಿಸಲು ‘ಮಹಾಧರಣಿ’: ಸಿದ್ದನಗೌಡ ಪಾಟೀಲ್Janashakthi Media

Donate Janashakthi Media

Leave a Reply

Your email address will not be published. Required fields are marked *